ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಜಿ.ಅಂದಾನಿ, ಕೆ.ಚಂದ್ರನಾಥ ಆಚಾರ್ಯಗೆ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪ್ರದಾನ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೃಶ್ಯ ಕಲೆ ಹಾಗೂ ಚಿತ್ರಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಕಲಾವಿದರಾದ ವಿ.ಜಿ. ಅಂದಾನಿ ಹಾಗೂ ಕೆ.ಚಂದ್ರನಾಥ ಆಚಾರ್ಯ ಅವರಿಗೆ ಕ್ರಮವಾಗಿ 2009 ಹಾಗೂ 2010ನೇ ಸಾಲಿನ `ವರ್ಣಶಿಲ್ಪಿ ವೆಂಕಟಪ್ಪ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕನ್ನಡ ಭವನದ `ನಯನ~ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಚಿವ ಗೋವಿಂದ ಕಾರಜೋಳ ಇಬ್ಬರು ಕಲಾವಿದರಿಗೆ ತಲಾ 3 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡಿ, ಆತ್ಮೀಯವಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂದಾನಿ ಅವರು, `ವಿಶಿಷ್ಟ ಪ್ರಕಾರವಾದ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಮಾಜಮುಖಿ ಕಲಾವಿದರಿಗೆ ಮಹಾರಾಷ್ಟ್ರ ಸರ್ಕಾರ ಜೀವಿತಾವಧಿ ಸಾಧನೆಗಾಗಿ 10 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡುತ್ತಿದೆ. ಅದೇ ರೀತಿ, ರಾಜ್ಯ ಸರ್ಕಾರ ಕೂಡ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮೊತ್ತವನ್ನು 3ರಿಂದ 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು~ ಎಂದು ಮನವಿ ಮಾಡಿದರು.

`ಕಲಾಕ್ಷೇತ್ರದಲ್ಲಿನ ಬಹಳಷ್ಟು ಕಲಾವಿದರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ 10 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡುವ ಮೂಲಕ ಅಲ್ಲಿನ ಪರಂಪರೆಗೆ ನಾಂದಿ ಹಾಡಬೇಕು. ಇದರಿಂದ ಕಲಾಕ್ಷೇತ್ರ ಕೂಡ ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ~ ಎಂದು ಅವರು ಪ್ರತಿಪಾದಿಸಿದರು.

`ಇಡೀ ಜಗತ್ತು ಇಂದು ದೃಶ್ಯಕಲೆಗೆ ಒತ್ತು ನೀಡುತ್ತಿದೆ. ವಿಶ್ವವಿದ್ಯಾಲಯಗಳಲ್ಲಿಯೂ ಕಲೆಯ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕಲೆ ವಿಶಿಷ್ಟವಾದ ಸಾಮಾಜಿಕ ವಿಜ್ಞಾನದ ಜತೆ ಜತೆಗೆ ಬೆಳೆಯುತ್ತಿರುವುದು ಮಹತ್ವದ ಸಂಗತಿ~ ಎಂದ ಅವರು, `ಕರ್ನಾಟಕದ ಕಲಾವಿದರ ಕಲಾಕೃತಿಗಳನ್ನು ಒಂದೆಡೆ ಪ್ರದರ್ಶಿಸಲು ಬೆಳಗಾವಿ ಅಥವಾ ಗುಲ್ಬರ್ಗದಂತಹ ಕಡೆಗಳಲ್ಲಿ ಕಲಾ ಸಂಗ್ರಹಾಲಯವೊಂದನ್ನು ಸ್ಥಾಪಿಸಬೇಕು~ ಎಂದು ಕೋರಿದರು.

2010ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ. ಚಂದ್ರನಾಥ ಆಚಾರ್ಯ, `ಸೋಲು-ಗೆಲುವಿನ ಕಲಾ ಜೀವನದ ನಡುವೆ ನನಗೆ ಅಭಿವ್ಯಕ್ತಿಯನ್ನು ಕಲಿಸಿದವರು ನೆರೆ-ಹೊರೆಯವರು, ಮಿತ್ರರು ಹಾಗೂ ಹಿತೈಷಿಗಳು. ಎಲ್ಲರ ಅಭಿಮಾನ- ಆಶೀರ್ವಾದ ಹೀಗೇ ಮುಂದುವರಿಯಲಿ. ಪ್ರಶಸ್ತಿ ನೀಡಿ ನಿವೃತ್ತಿಗೊಳಿಸಬೇಡಿ~ ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಪ್ರಸ್ತಾವ: ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಪರವಾಗಿ ಮಾತನಾಡಿದ ಇಲಾಖೆಯ ನಿರ್ದೇಶಕ ಮನು ಬಳಿಗಾರ್, `ಮಹಾರಾಷ್ಟ್ರದಲ್ಲಿ ಕಲಾವಿದರಿಗೆ ಜೀವಿತಾವಧಿ ಸೇವೆ ಪರಿಗಣಿಸಿ ನೀಡುವ 10 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಂಡು ಸರ್ಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸಲಾಗುವುದು~ ಎಂದು ಭರವಸೆ ನೀಡಿದರು.

`ಮಹಾರಾಷ್ಟ್ರದಲ್ಲಿ ಕಲಾವಿದರಿಗೆ ಜೀವಿತಾವಧಿ ಸೇವೆಗೆ ಅಥವಾ ಪ್ರತಿ ವರ್ಷ 10 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡಲಾಗುತ್ತಿದೆಯೋ ಎಂಬುದು ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ 2008ರಿಂದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ನೀಡುತ್ತಿದ್ದ ಮೊತ್ತವನ್ನು ಸರ್ಕಾರ 1 ಲಕ್ಷದಿಂದ 3 ಲಕ್ಷ ರೂಪಾಯಿಗಳಿಗೆ ಏರಿಸಿದೆ.

ಪ್ರಸಕ್ತ ವರ್ಷ ಸರ್ಕಾರ ಇಲಾಖೆಗೆ 175 ಕೋಟಿ ರೂಪಾಯಿಗಳ ಅನುದಾನ ಒದಗಿಸಿದೆ. ಅದೇ, ಕೇರಳ ಹಾಗೂ ತಮಿಳುನಾಡಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಲ್ಲಿನ ಸರ್ಕಾರಗಳು ಕ್ರಮವಾಗಿ ವಾರ್ಷಿಕ 34 ಹಾಗೂ 25 ಕೋಟಿ ರೂಪಾಯಿ ಅನುದಾನ ನೀಡುತ್ತಿವೆ. ಹೀಗಾಗಿ, ಬಹುಶಃ ದೇಶದ ಯಾವುದೇ ರಾಜ್ಯದಲ್ಲಿ ಕರ್ನಾಟಕಕ್ಕಿಂತ ಇಲಾಖೆಗೆ ಹೆಚ್ಚಿನ ಅನುದಾನ ಸಿಕ್ಕ ಉದಾಹರಣೆಗಳಿಲ್ಲ~ ಎಂದು ಸಭಿಕರ ಗಮನಕ್ಕೆ ತಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ, ನಾಡೋಜ ಡಾ.ಜೆ. ಎಸ್. ಖಂಡೇರಾವ್, `ಕಲೆ ಎಂಬುದು ಕಾಲ ಮತ್ತು ಸಮಾಜದ ಪ್ರತೀಕ ಅಥವಾ ಪ್ರತಿಬಿಂಬವಿದ್ದಂತೆ. ಜನಾಂಗದ ವಿಕಾಸದೊಂದಿಗೆ ಹುಟ್ಟಿ ಬೆಳೆಯುವ ಚಿತ್ರಕಲೆಗೆ ಮನದಾಳದಲ್ಲಿ ಚೈತನ್ಯ ತುಂಬುವ ಶಕ್ತಿಯಿದೆ~ ಎಂದರು.

`ರಾಜ್ಯದ ಶ್ರೇಷ್ಠ ಕಲಾವಿದರಾದ ಇವರಿಬ್ಬರಿಗೆ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಸರಾಂತ ಕಲಾವಿದ ಯೂಸುಫ್ ಅರಕ್ಕಲ್ ಉಪಸ್ಥಿತರಿದ್ದರು. ಮನು ಬಳಿಗಾರ್ ಸ್ವಾಗತಿಸಿದರು. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT