ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಚಾಮುಂಡಿ ರಥೋತ್ಸವ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು:  ಕನ್ನಡ ನಾಡಿನ ಅಧಿದೇವತೆ ಎಂದೇ ಗುರುತಿಸಲಾಗುವ ಚಾಮುಂಡಿದೇವಿ ರಥೋತ್ಸವವು ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ಪೂರ್ಣಿಮಾ (ಶೀಗಿ ಹುಣ್ಣಿಮೆ) ಉತ್ತರಭಾದ್ರ ನಕ್ಷತ್ರದಲ್ಲಿ ಬೆಳಿಗ್ಗೆ 8.15 ರಿಂದ 9 ಗಂಟೆ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಪತ್ನಿ ಪ್ರಮೋದಾದೇವಿ ಒಡೆಯರ್ ದಂಪತಿ ಚಾಮುಂಡಿದೇವಿ ಉತ್ಸವ ಮೂರ್ತಿಗೆ ಭಕ್ತಿ, ಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ದೇವಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಶ್ರೀಕಂಠದತ್ತ ಒಡೆಯರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ರಥವನ್ನು ಎಳೆಯುವ ಮೂಲಕ ಶ್ರೀಮದ್ ದಿವ್ಯ ರಥಾರೋಹಣಕ್ಕೆ ಚಾಲನೆ ನೀಡಿದರು. ಬೆಳಗಿನ ಜಾವವೇ ಚಾಮುಂಡಿ ಬೆಟ್ಟದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಹಣ್ಣು, ಕಾಯಿ, ಜವನ ಎಸೆದು ರಥ ಎಳೆಯುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.

ಬಳಿಕ ದೇವಸ್ಥಾನದ ಆವರಣದಲ್ಲಿ ಹಂಸವಾಹನೋತ್ಸವ, ಬಲಿಪ್ರದಾನ ಹಾಗೂ ಮಂಟಪೋತ್ಸವ ಸೇರಿದಂತೆ ಹಲವು ಕೈಂಕರ್ಯಗಳು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಿದವು. ಈ ಸಂದರ್ಭದಲ್ಲಿ ಸಿಎಆರ್ ಪೊಲೀಸರು ಕುಶಾಲುತೋಪು ಹಾರಿಸಿ ದೇವಿಗೆ ಗೌರವ ಸಲ್ಲಿಸಿದರು. ಕಲಾವಿದ ಕೀರಾಳು ಮಹೇಶ ವೀರಗಾಸೆ ನೃತ್ಯ ಪ್ರದರ್ಶಿಸಿದರು. ಅರಮನೆ ಶಾಸ್ತ್ರೀಯ ಪೊಲೀಸ್ ಬ್ಯಾಂಡ್ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

13ರಂದು ತೆಪ್ಪೋತ್ಸವ: ಅ. 13ರ ಗುರುವಾರ ರಾತ್ರಿ 7 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿರುವ ದೇವಿ ಕೆರೆಯಲ್ಲಿ ಚಾಮುಂಡೇಶ್ವರಿ ದೇವಿ ತೆಪ್ಪೋತ್ಸವ ನಡೆಯಲಿದೆ. ಅ. 16 ರಂದು ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಶ್ರೀಕಂಠದತ್ತ ಒಡೆಯರ್ ದಂಪತಿ ದೇವಿಗೆ ಪಾರಂಪರಿಕ ಆಭರಣ ತೊಡಿಸಿ, ಜವಹರಿ ಪೂಜೆ ಸಲ್ಲಿಸುವರು.

ಜನಜಾತ್ರೆ: ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತಾದಿಗಳು ಚಾಮುಂಡಿಬೆಟ್ಟಕ್ಕೆ ಜಾತ್ರೆಯಂತೆ ಹರಿದು ಬಂದರು. ಅಮ್ಮನವರ ಒಕ್ಕಲಿನವರು, ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಹರಕೆ ಹೊತ್ತ ಭಕ್ತರು ಸಾವಿರ ಮೆಟ್ಟಿಲುಗಳ ಮೂಲಕ ನಡೆದುಕೊಂಡು ಬಂದರು. ಯುವತಿಯರು ಹಾಗೂ ಗೃಹಿಣಿಯರು ಎಲ್ಲ ಮೆಟ್ಟಿಲುಗಳಿಗೆ ಅರಿಶಿಣ-ಕುಂಕುಮ ಹಚ್ಚಿ, ಹೂವು ಹಾಕಿ ಕೈಮುಗಿದು ಭಕ್ತಿ       ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT