ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ತಾಯಮ್ಮದೇವಿ, ನಗರೇಶ್ವರ ಜೋಡಿ ರಥೋತ್ಸವ

Last Updated 13 ಏಪ್ರಿಲ್ 2013, 5:37 IST
ಅಕ್ಷರ ಗಾತ್ರ

ಕಂಪ್ಲಿ: ಹೋಬಳಿ ವ್ಯಾಪ್ತಿಯ ರಾಮಸಾಗರರದಲ್ಲಿ ಆರ್ಯವೈಶ್ಯ ಸಮಾಜದ ಆರಾಧ್ಯ ದೈವ ನಗರೇಶ್ವರ (ಉಮಾ ಮಹೇಶ್ವರ) ಸ್ವಾಮಿ ಜೋಡಿ ರಥೋತ್ಸವ ಯುಗಾದಿ ಹಬ್ಬದಂದು ವಿಜೃಂಭಣೆಯಿಂದ ನೆರವೇರಿತು.

ಜೋಡಿ ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನೂರಾರು ಭಕ್ತರು ದೇವಸ್ಥಾನದಲ್ಲಿ ಜರುಗಿದ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿ ಹೋಳಿಗೆ, ಬೇವು ಬೆಲ್ಲ ನೈವೇದ್ಯ ಮಾಡಿ, ಕಾಯಿ ಕರ್ಪೂರ ಅರ್ಪಿಸಿ ಭಕ್ತಿಸೇವೆ ಸಮರ್ಪಿಸಿದರು.

ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಜೋಡಿ ರಥಗಳನ್ನು ಜಯಘೋಷಗಳೊಂದಿಗೆ ಭಕ್ತರೆಲ್ಲರೂ ಸಾಮೂಹಿಕವಾಗಿ ಎಳೆದು ಭಕ್ತಿಭಾವ ಮೆರೆದರು. ತೇರು ಸಾಗುವಾಗ ನಂದಿಕೋಲು ಸೇರಿದಂತೆ ವಿವಿಧ ವಾದ್ಯ ತಂಡಗಳು ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದರು. ನೆರೆದಿದ್ದ ಭಕ್ತರು ತೇರು ಸಾಗುವಾಗ ಹೂವು ಹಣ್ಣು ಎಸೆದು ಮನದ ಹರಕೆ ತೀರಿಸಿದರು. ರಥೋತ್ಸವ ಮುನ್ನ ದಿನ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವವೂ ಸಂಭ್ರಮದಿಂದ ಜರುಗಿತು.

ಬಯಲಾಟ ಪ್ರದರ್ಶನ: ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ನಗರೇಶ್ವರ(ಉಮಾ ಮಹೇಶ್ವರ) ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಆಕರ್ಷಕ ರಂಗಸಜ್ಜಿಕೆಯಲ್ಲಿ ಶ್ರೀ ಭುವನೇಶ್ವರಿ ಕೃಪಾ ಪೋಷಿತ ಕರ್ನಾಟಕ ನಾಟ್ಯ ಸಂಘದವರು ರಂಗಭೂಮಿಯ ಹಿರಿಯ ಕಲಾವಿದ ದಿವಂಗತ ಕೋತಿ ಹನುಮಂತಪ್ಪನವರ ಸವಿನೆನಪಿಗಾಗಿ `ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ'  ಎನ್ನುವ ಬಯಲಾಟವನ್ನು ಅಭಿನಯಿಸಿದರು.

ಆಂಜನೇಯಸ್ವಾಮಿ: ಇಲ್ಲಿಗೆ ಸಮೀಪದ ದೇವಲಾಪುರ ಗ್ರಾಮದಲ್ಲಿ ಚಾಂದ್ರಮಾನ ಯುಗಾದಿ ಅಂದು ಸಂಜೆ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಸಂಭ್ರಮ ಸಡಗರಗಳಿಂದ ಜರುಗಿತು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗಂಗೆಪೂಜೆ, ವಿಶೇಷ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಅನೇಕ ಭಕ್ತರು ಆಂಜನೇಯಸ್ವಾಮಿಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ಭಕ್ತಿ ಸೇವೆ ಸಲ್ಲಿಸಿದರು.

ಯುಗಾದಿ ಹಬ್ಬದ ಜೊತೆಗೆ ಗ್ರಾಮದ ಆಂಜನೇಯಸ್ವಾಮಿ ರಥೋತ್ಸವವು ಜರುಗುವುದರಿಂದ ಗ್ರಾಮದ ಜನತೆ ಹೊಸ ಬಟ್ಟೆಗಳನ್ನು ಧರಿಸಿ ಸಂಜೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೇರನ್ನು ಭಕ್ತರೆಲ್ಲರೂ ಜಯಘೋಷಗಳೊಂದಿಗೆ ಸಾಮೂಹಿಕ ಎಳೆದರು. ಕೋಲಾಟ, ಡೊಳ್ಳು, ನಂದಿಕೋಲು, ಕಳಸ ಕನ್ನಡಿ ಹಿಡಿದ ಮುತ್ತೈದೆಯರು ರಥೋತ್ಸವದಲ್ಲಿ ಭಾಗವಹಿಸಿ ಮೆರಗು ನೀಡಿದರು. ತೇರು ಸಾಗುವಾಗ ಸಾರ್ವಜನಿಕರು ಹಣ್ಣು, ಹೂವು ಎಸೆದು ಮನದ ಹರಕೆ ತೀರಿಸಿದರು.ಸುತ್ತಲಿನ ಹಳ್ಳಿಗಳ ಜನತೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳ ಜನತೆಯೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಆಂಜನೇಯಸ್ವಾಮಿ ರಥೋತ್ಸವ
ಮರಿಯಮ್ಮನಹಳ್ಳಿ: ಸಮೀಪದ ಡಣಾಪುರ-114 ಆಂಜನೇಯಸ್ವಾಮಿ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮುಮಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಪ್ರತಿವರ್ಷದಂತೆ ಯುಗಾದಿ ಹಬ್ಬದಂದು ಜರುಗುವ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ಜರುಗಿದವು. ಅಲ್ಲದೆ ಇತರೆ ವಿಧಿವಿಧಾನಗಳು ಜರುಗಿದವು.

ಸ್ಥಳೀಯ ಭಕ್ತರು ಸೇರಿದಂತೆ ಇತರೆಡೆಗಳಿಂದ ಬಂದ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ಸಾಲಾಗಿ ನಿಂತು ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಅರ್ಪಿಸಿದರು. ಅಲ್ಲದೆ ಕಳೆದ ವರ್ಷ ರಥೋತ್ಸವ ಸಮಯದಲ್ಲಿ ಹರಾಜಿನಲ್ಲಿ ಪಟವನ್ನು ಪಡೆದ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹರಾಜಿನ ಮೊತ್ತದೊಂದಿಗೆ ದೇವಸ್ಥಾನದ ಸಮಿತಿಗೆ ಒಪ್ಪಿಸಿದರು.

ವಿವಿಧ ಗೊಂಬೆಗಳಿಂದ ಅಲಂಕೃತಗೊಂಡು, ತಳಿರುತೋರಣ ಹಾಗೂ ಹೂವಿನಿಂದ ಸಿದ್ಧಗೊಂಡ ರಥಕ್ಕ ಸಂಜೆ ಐದಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಯ ಪಟ ಹರಾಜು ನಡೆಯಿತು. ಕುರುಬರ ಗಂಗಮ್ಮ ಹರಾಜಿನಲ್ಲಿ 31ಸಾವಿರ ರೂಪಾಯಿಗೆ ಪಟವನ್ನು ಪಡೆದರು.

ನಂತರ ಭಕ್ತರು ಸ್ವಾಮಿಯ ಜಯಘೋಷಗಳೊಂದಿಗೆ ರಥವನ್ನು ಎಳೆಯುತ್ತಾ ಸಾಗಿದರು. ಈ ಸಂದರ್ಭದಲ್ಲಿ ಭಕ್ತರು ರಥಕ್ಕೆ ಹೂಹಣ್ಣು ಎಸೆದು ಪುನೀತರಾದರು. ರಥ ಸಾಗುವ ರಸ್ತೆಯ ಎರಡು ಬದಿಗಳಲ್ಲಿ ನಿಂತು ಭಕ್ತರು ನಿಂತು ವೀಕ್ಷಿಸಿದರೆ. ಸ್ವಾಮಿಯ ಜಯಘೋಷಗಳೊಂದಿಗೆ ದೂರದ ಪಾದಗಟ್ಟಿಯವರೆಗೆ ಸಾಗಿದ ನಂತರ ಸ್ವಸ್ಥಾನಕ್ಕೆ ಮರಳಿ ರಥವನ್ನು ಎಳೆದು ತಂದರು. ರಥೋತ್ಸವದಲ್ಲಿ ಸ್ಥಳಿಯರು ಸೇರಿದಂತೆ ಹನುಮನಹಳ್ಳಿ, ಗಾಳೆಮ್ಮನಗುಡಿ, ಮರಿಯಮ್ಮನಹಳ್ಳಿ ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿದ್ದರು.

ದೇವಿಗೆ ವಿಶೇಷ ಪೂಜೆ
ಸಿರುಗುಪ್ಪ: ಪಟ್ಟಣದ ತಾಯಮ್ಮದೇವಿಯ ಮಹಾ ರಥೋತ್ಸವವು ಯುಗಾದಿ ಹಬ್ಬದಂದು  ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ರಥೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು.ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ಹಸಿರು ತೋರಣ, ಹೂಗಳಿಂದ ಸಿಂಗರಿಸಿದ ತೇರಿನಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರು ಹಗ್ಗವನ್ನು ಹಿಡಿದು ದೇವಿಯ ಜಯಘೋಷಣೆ ಮಾಡುತ್ತಾ ರಥವನ್ನು ಎಳೆಯುವುದರ ಮೂಲಕ ರಥಕ್ಕೆ ಹೂ ಹಣ್ಣುಗಳನ್ನು ಎಸೆದು ಭಕ್ತಿಯ ಹರಕೆಯನ್ನು ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು.

ದೇವಿಯ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದುಕೊಂಡರು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಸಿಹಿತಿಂಡಿಗಳ ಅಂಗಡಿಗಳು ಮತ್ತು ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು.

ಬಸವಣ್ಣ ದೇವರ ರಥೋತ್ಸವ
ಕುರುಗೋಡು: ಏಳುಬೆಂಚಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬಸವಣ್ಣ ದೇವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದ ರುದ್ರಾಭಿಷೇಕ, ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. 

ವಿವಿಧ ಬಗೆಯ ಹೂ ಮತ್ತು ಗೊಂಬೆಗಳಿಂದ ಅಲಂಕೃತಗೊಂಡಿದ್ದ ರಥವನ್ನು ಭಕ್ತರು ದೇವಸ್ಥಾನದ ಆವರಣದಿಂದ ಎದುರು ಬಸವಣ್ಣ ಕಟ್ಟೆ ವರೆಗೆ ಎಳೆದೊಯ್ದು ಪುನಃ ಸ್ವಸ್ಥಳಕ್ಕೆ ಎಳೆದುತಂದರು. ಏಳುಬೆಂಚಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಥದ ದರ್ಶನ ಪಡೆದು ಹೂ ಹಣ್ಣು ಎಸೆದು ಮನದ ಹರಿಕೆ ತೀರಿಸಿದರು. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು. ಕುಡಿತಿನಿ ಪೊಲೀಸ್ ಸಿಬ್ಬಂದಿ ರಥೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ತೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT