ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ವಿಜಯರಾಯ ಸಂಗಮೇಶ್ವರ ಜಯಂತಿ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಈಚಗಟ್ಟದಲ್ಲಿ ಭಾನುವಾರ 23ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಹೊಸದುರ್ಗದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಅವರನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು, ತಮಟೆ, ಸಮಾಳ ಮತ್ತಿತರ ವಾದ್ಯಗಳೊಂದಿಗೆ ವೀರಗಾಸೆ ಕಲಾವಿದರು ಪ್ರದರ್ಶನ ನೀಡಿದರು. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆವರೆಗೆ ನಡೆದ ಮೆರವಣಿಗೆಯಲ್ಲಿ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.

ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಶಾಂತವೀರ ಸ್ವಾಮೀಜಿ, ಗುಡ್ಡಗಾಡು ಹಾಗೂ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕುಂಚಿಟಿಗ ಜನಾಂಗ ರಾಜಕೀಯ, ಶೈಕ್ಷಣಿಕ, ಆರ್ಥಿಕ ಮತ್ತಿತರ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ರಾಜ್ಯವೂ ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನ ಬರಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿ ನೆಲೆಸಿರುವ ಈ ಜನಾಂಗ ಕೃಷಿಯನ್ನೇ ನಂಬಿ ಬದುಕುತ್ತಿದೆ. ಕೆಲವರು ಕುಂಚಿಟಿಗ ಜಾತಿಯನ್ನು `ಒಕ್ಕಲಿಗ~ ಎಂದು ಶಾಲಾ ದಾಖಲಾತಿಗಳಲ್ಲಿ ಸೇರಿಸುತ್ತಿರುವುದರಿಂದ ನಮ್ಮ ಜನಾಂಗ ವಿನಾಶದ ಅಂಚಿನಲ್ಲಿದೆ. `ಕುಂಚಿಟಿಗ~ ಸ್ವತಂತ್ರ ಜಾತಿಯಾಗಿದ್ದು, ಯಾವುದೇ ಜಾತಿಯ ಉಪ ಜಾತಿಯಲ್ಲ. ಕಾಡುಗೊಲ್ಲ, ಕುರುಬ ಜಾತಿಗಳಿಗೆ ಸಾಮ್ಯತೆ ಹೊಂದಿರುವ ಕುಂಚಿಟಿಗರನ್ನು ಸರ್ಕಾರ ಪರಿಶಿಷ್ಟ ಪಂಗಡ ಅಥವಾ ಅತಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಸರ್ಕಾರ ಒತ್ತಾಯಿ ಸಿದರು.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಹನುಮಂತರಾಯ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ, ಅಬಕಾರಿ ಸಚಿವ ರೇಣು ಕಾಚಾರ್ಯ, ಶಾಸಕ ಎಂ. ಚಂದ್ರಪ್ಪ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತಿತರರು ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT