ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೇತ ತಂಡಕ್ಕೆ ರಾಷ್ಟ್ರಪತಿ ಸನ್ಮಾನ

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):ವಿಶ್ವಕಪ್ ಗೆದ್ದು ಶತಕೋಟಿಗೂ ಅಧಿಕ ಅಭಿಮಾನಿಗಳ ಮನಗೆದ್ದ ಮಹೇಂದ್ರ ಸಿಂಗ್ ದೋನಿ ಬಳಗ ಇನ್ನೂ ಸಂಭ್ರಮದ ಅಲೆಯಿಂದ ಹೊರಬಂದಿಲ್ಲ. ಶನಿವಾರ ರಾತ್ರಿ ವಾಂಖೇಡೆ ಕ್ರೀಡಾಂಗಣದಲ್ಲಿ ಟ್ರೋಫಿ ಎತ್ತಿಹಿಡಿದ ಆ ಕ್ಷಣವನ್ನು ನೆನಪಿಸಿದರೆ ಆಟಗಾರರ ಮನ ಪುಳಕಗೊಳ್ಳುತ್ತದೆ. ವಿಶ್ವಚಾಂಪಿಯನ್ ತಂಡದ ಆಟಗಾರರು ಭಾನುವಾರ ಇಡೀ ದಿನವನ್ನು ಮುಂಬೈನಲ್ಲೇ ಕಳೆದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ವಿಶ್ವ ವಿಜೇತ ತಂಡವನ್ನು ಸನ್ಮಾನಿಸಲು ‘ಟೀ ಪಾರ್ಟಿ’ ಆಯೋಜಿಸಿದ್ದರು. ಮುಂಬೈನ ರಾಜಭವನದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಪ್ರತಿಭಾ ಪಾಟೀಲ್ ಹಾಗೂ ಅವರ ಪತಿ ದೇವಿಸಿಂಗ್ ಶೇಖಾವತ್ ತಂಡದ ಎಲ್ಲ ಆಟಗಾರರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಕೆ. ಶಂಕರನಾರಾಯಣ, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಐಸಿಸಿ ಅಧ್ಯಕ್ಷ ಶರದ್ ಪವಾರ್, ಕೇಂದ್ರ ಮಂತ್ರಿ ವಿಲಾಸ್‌ರಾವ್ ದೇಶಮುಖ್ ಹಾಗೂ ಇತರರು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪೃಥ್ವಿರಾಜ್ ಚವಾಣ್ ‘ಮಹಿ ಬಳಗ ದೇಶಕ್ಕೆ ಹೆಮ್ಮೆ ತಂದಿತ್ತಿದೆ. ಅವರಿಗೆ ಅಭಿನಂದನೆಗಳು. ಅದೇ ರೀತಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದು ಹೇಳಿದರು. ಸಚಿನ್ ತೆಂಡೂಲ್ಕರ್ ಮತ್ತು ಜಹೀರ್ ಖಾನ್ ಅವರಿಗೆ ತಲಾ ಒಂದು ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಅವರು ಇದೇ ವೇಳೆ ಪ್ರಕಟಿಸಿದರು.

ನಾಯಕ ದೋನಿ ಮತ್ತು ಸಚಿನ್ ತೆಂಡೂಲ್ಕರ್ ಒಳಗೊಂಡಂತೆ ಭಾರತ ತಂಡದ ಕೆಲವು ಆಟಗಾರರು ಬೆಳಿಗ್ಗೆ ಗೇಟ್ ವೇ ಆಫ್ ಇಂಡಿಯಾ ಬಳಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ದೋನಿ ‘ಹೊಸ ಲುಕ್’: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಭಾನುವಾರ ಬೋಳುತಲೆಯಲ್ಲಿ ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣರಾದರು. ತಲೆಕೂದಲನ್ನು ಸಂಪೂರ್ಣವಾಗಿ ಟ್ರಿಮ್ ಮಾಡಿಕೊಂಡ ಅವರು ಹೊಸ ‘ಲುಕ್’ ಪಡೆದುಕೊಂಡಿದ್ದಾರೆ. ವಿಶ್ವಕಪ್‌ಗೆ ಮುನ್ನ ಮಾಡಿದ್ದ ಹರಕೆ ತೀರಿಸಲು ದೋನಿ ಹೀಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2004 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಂದರ್ಭ ದೋನಿ ನೀಳಕೂದಲನ್ನು ಹೊಂದಿದ್ದರು. ಆದರೆ 2007 ರಲ್ಲಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಬಳಿಕ ಅವರು ಕೂದಲನ್ನು ಅಲ್ಪ ಟ್ರಿಮ್ ಮಾಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT