ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಸಂಶೋಧನೆಗೆ ಪ್ರೋತ್ಸಾಹ ನೀಡಿ

Last Updated 12 ಜನವರಿ 2012, 10:35 IST
ಅಕ್ಷರ ಗಾತ್ರ

ಕೋಲಾರ: ಇಂದಿನ ಶೈಕ್ಷಣಿಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಅಸಂಖ್ಯ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ತೊಡಗುವಂಥ ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ವಿಷಾದಿಸಿದರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಏರ್ಪಡಿಸಿರುವ ಎರಡು ದಿನದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚು ಕಲಿಯಬೇಕು, ಹೆಚ್ಚು ಅಂಕ ಗಳಿಸಬೇಕು, ಉತ್ತಮ ಉದ್ಯೋಗ ಪಡೆದು ಉತ್ತಮ ಬದುಕು ನಡೆಸಬೇಕು ಎಂಬ ಮಹತ್ವಾಕಾಂಕ್ಷೆ ಎಲ್ಲ ಪೋಷಕರಲ್ಲೂ ಇದೆ. ಅದು ತಪ್ಪೇನಲ್ಲ.

ಆದರೆ ಅದಕ್ಕಾಗಿ ವೈದ್ಯಕೀಯ, ಎಂಜಿನಿಯರಿಂಗ್‌ನಂಥ ವೃತ್ತಿಪರ ಪದವಿ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಒತ್ತಡದ ಸನ್ನಿವೇಶ ಬದಲಾಗಬೇಕು. ವಿಜ್ಞಾನ ಕ್ಷೇತ್ರದಲ್ಲೂ ಅಧ್ಯಯನ-ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳಿಗಿರುವ ಸಹಜ ಕುತೂಹಲ, ಸಂಶೋಧನೆಗೆ ಮಹತ್ವವೇ ಇಲ್ಲವಾಗಿದೆ. ಬಹುತೇಕ ಪೋಷಕರೇ ಮಕ್ಕಳನ್ನು ದಾರಿ ತಪ್ಪಿಸುತ್ತಾರೆ. ಇಬ್ಬರು ಮಕ್ಕಳ ತಂದೆಯಾಗಿ ನಾನು ಕೂಡ ಈ ಮಾತನ್ನು ಹೇಳಲೇಬೇಕಾಗಿದೆ. ಏಕೆಂದರೆ ವಿಜ್ಞಾನ ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಆದರೆ ಆ ಕ್ಷೇತ್ರದಲ್ಲಿ ನಡೆಯಬೇಕಾದಷ್ಟು ಸಂಶೋಧನೆ ಮಾತ್ರ ನಡೆಯುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಶುದ್ಧ ವಿಜ್ಞಾನ ಕ್ಷೇತ್ರದ ಸಂಶೋಧನೆಯೆಡೆಗೆ ಯಾರೂ ಬರುತ್ತಿಲ್ಲ.  ರಾಜ್ಯದಲ್ಲಿಯೂ ಶುದ್ಧ ವಿಜ್ಞಾನ ಸಂಶೋಧನೆ ಹಿಂದೆಯೇ ಉಳಿದಿದೆ. ಈ ಸಂವಾದ ಕಾರ್ಯಕ್ರಮ ಆ ಕೊರತೆಯನ್ನು ನೀಗಿಸುವಂತಾಗಲಿ ಎಂದು ಆಶಿಸಿದರು. ವಿದ್ಯಾರ್ಥಿಗಳನ್ನು ವಿಜ್ಞಾನ ಸಂಶೋಧನೆಯ ಸಹಜ ಖುಷಿಯಿಂದ ದೂರ ಮಾಡುವುದು ಸರಿಯಲ್ಲ. ಹೊಸದನ್ನು ಕಂಡುಹಿಡಿಯುವ ಆಕಾಂಕ್ಷೆಗೂ ನೀರೆರೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಉದ್ಘಾಟನೆಗೂ ಮುನ್ನ ಅವರು ವಿಜ್ಞಾನ ಲಾಂಛನಗಳನ್ನು ಅನಾವರಣ ಮಾಡಿದರು. ಸೊನ್ನೆ, ಚಕ್ರ ಮತ್ತು ಪ್ರಶ್ನಾರ್ಥಕ ಚಿಹ್ನೆಯುಳ್ಳ ಲಾಂಛನಗಳ ಕುರಿತು ಪರಿಷತ್ತಿನ ಜಿಲ್ಲಾ ಸಂಯೋಜಕಿ ಮಂಜುಳಾ ಭೀಮರಾವ್ ವಿವರಿಸಿದರು. ಸೊನ್ನೆಯಿಂದ ಗಣಿತ ನಿರ್ದಿಷ್ಟವಾಯಿತು. ಚಕ್ರ ಆಧುನಿಕ ಬದುಕಿನ ಸಂಕೇತ. ಪ್ರಶ್ನೆಯಿಲ್ಲದೇ ವಿಜ್ಞಾನಕ್ಕೆ ಅಸ್ತಿತ್ವವೇ ಇಲ್ಲ ಎಂದು ವ್ಯಾಖ್ಯಾನಿಸಿದರು.

ನಂತರ ಮಾತನಾಡಿದ ವಿಷಯ ಪರಿವೀಕ್ಷಕ ಶ್ರೀನಿವಾಸಗೌಡ, ಯೂರೋಪಿಯನ್ನರಿಗೆ ಸುಲಭ ಭಾಗಾಕಾರವೇ ಗೊತ್ತಿರಲಿಲ್ಲ. ಸೊನ್ನೆಯನ್ನು ಭಾರತ ಕಂಡು ಹಿಡಿಯದಿದ್ದರೆ 9ರ ನಂತರದ ಸಂಖ್ಯಾಸೂಚಕಗಳನ್ನು ಸೃಷ್ಟಿಸಲು ಸಾಧ್ಯವೇ ಇರಲಿಲ್ಲ ಎಂದರು.

ಗಣಿತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ವಿಶ್ವಖ್ಯಾತಿ ಹೊಂದಿರುವ ಭಾರತದಲ್ಲೆ ಮಕ್ಕಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆ ಎಂಬಂಥ ವಾತಾವರಣ ನಿರ್ಮಾಣವಾಗಿರುವುದು ವಿಷಾದನೀಯ. ಈ ಸನ್ನಿವೇಶ ಬದಲಾಗಬೇಕು ಎಂದು ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಶಾಲೆಗಳಲ್ಲಿ ಚಟುವಟಿಕೆ ಆಧಾರಿತ ವಿಜ್ಞಾನ ಬೋಧನೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಶಿಕ್ಷಕರು ಈಗಲಾದರೂ ಜಾಗೃತರಾಗಬೇಕು. ಬೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಬೇಕು ಎಂದು ಹೇಳಿದರು.
 
ವಿಜ್ಞಾನ ಪಾಠಗಳನ್ನು ಸಹಜ ಪ್ರಯೋಗಗಳ ಮೂಲಕ ಮನವರಿಕೆ ಮಾಡಿಕೊಟ್ಟರೆ ಮಾತ್ರ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಆಸಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಲಬ್‌ಗಳೂ ಹೊಸ ಬಗೆಯ ಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿಂತಾಮಣಿ ರೇಷ್ಮೆ ಮತ್ತು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ.ವಿಜಯೇಂದ್ರ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ವಿಷಯ ಪರಿವೀಕ್ಷಕ ವೆಂಕಟಸ್ವಾಮಿ ವೇದಿಕೆಯಲ್ಲಿದ್ದರು. ಪರಿಷತ್ತಿನ ಗೌರವ ಅಧ್ಯಕ್ಷ ಕೆ.ಪ್ರಹ್ಲಾದರಾವ್ ಸ್ವಾಗತಿಸಿದರು. ಶಂಕರೇಗೌಡ ನಿರೂಪಿಸಿದರು.
 
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯ ಶಿಕ್ಷಣ ತರಬೇತಿ ಮತ್ತು ನಿರ್ದೇಶನಾಲಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜ್ಞಾನ, ತಂತ್ರಜ್ಞಾನ, ದಾರ್ಶನಿಕ ಸಮೂಹದ ಆಶ್ರಯದಲ್ಲಿ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT