ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಮಯಿ...

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಸತ್ತಿನಿಂದ ಸತ್ತಿನೆಡೆಗೆ
ತಮಸ್ಸಿನಿಂದ ಜ್ಯೋತಿಯೆಡೆಗೆ
ಮೃತ್ಯುವಿಂದ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ,
ವಿದ್ಯೆಯಾಗಿ, ಮುಕ್ತಿಯೀವ
ಅವಿದ್ಯಾ ಪರಿಹಾರಿಣಿ
ಬಂಧನ ಭವತಾರಿಣಿ,
ನಮೋ,
ಸಕಲ ರಸಾನಂದ ಕಲಾ
ಕ್ಷೇತ್ರ ರೂಪಧಾರಿಣಿ
ನಮೋ, ನಮೋ, ನಮೋ
ಹೇ ತಮೋಹಾರಿಣಿ
(ಕುವೆಂಪು)

ಭಾರತದಲ್ಲಿ ಪ್ರಕೃತಿ, ವಿದ್ಯೆ, ಅನ್ನ, ನೀರು, ನೆಲ, ಧನ, ಕನಕಗಳೆಲ್ಲವೂ `ಸ್ತ್ರೀ~ ಸ್ವರೂಪರು. ಈ `ಸ್ತ್ರೀ~ ಇಷ್ಟೆಲ್ಲಾ ಉನ್ನತ ಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ಹೊಂದಿದ್ದರೂ, ಆಧುನಿಕ ಭಾರತದ ನಿರ್ಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲಿದ್ದಾಳೆ? ಎಂದು ವಿಚಾರ ಮಾಡಿ ನೋಡಿದಾಗ ದೊರೆಯುವ ಉತ್ತರ ಮಾತ್ರ ದಿಗ್ಭ್ರಮೆಗೊಳ್ಳುವಂತಹದು. ಇಂದಿಗೂ ಭಾರತದ ಬಹುಪಾಲು ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗಳಿಗೆ ಹೋಲಿಸಿದರೆ ಸೂಕ್ತ ಅವಕಾಶಗಳಿಂದ ವಂಚಿತರು.

  ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದಲ್ಲಿ ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ತೋರಿಸುವ ಬಾಲಕಿಯರು ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಹೆಸರು ಮಾಡುತ್ತಿಲ್ಲ.

ಹಾಗಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಮುಂದುವರಿಯುವಂತೆ ಮಾಡಲು ಏನು ಮಾಡಬೇಕಾಗಿದೆ? ಹಿಂದಿರುಗಿ ನೋಡಿದಾಗ ಅವರ ಕೊಡುಗೆ ಏನು? ಈ ಎಲ್ಲ ವಿಷಯಗಳನ್ನು ಚರ್ಚಿಸುವ ವಿನೂತನ ಕಾರ್ಯಕ್ರಮ ಸರಣಿಯೊಂದು ಆಕಾಶವಾಣಿಯಿಂದ ಪ್ರಸಾರವಾಗಲಿದೆ. ದೆಹಲಿಯ ವಿಗ್ಯಾನ್ ಐಸಾರ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ಆಕಾಶವಾಣಿಯ ಬೆಂಗಳೂರು ಕೇಂದ್ರ ಈ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದೆ.

`ವಿಜ್ಞಾನಮಯಿ~ ಎಂಬ ಶೀರ್ಷಿಕೆಯ ಈ ಸರಣಿ ಕಾರ್ಯಕ್ರಮ ಆಕಾಶವಾಣಿಯ ಮೈಸೂರು, ಭದ್ರಾವತಿ, ಧಾರವಾಡ, ಹಾಗೂ ಗುಲ್ಬರ್ಗಾ ಕೇಂದ್ರಗಳಿಂದಲೂ ಸಹಾ ಏಕಕಾಲಕ್ಕೆ ಪ್ರಸಾರವಾಗಲಿದೆ.

ತಮಿಳುನಾಡಿನ ಹೂ ಮಾರುವ ಹೆಣ್ಣುಮಕ್ಕಳು ಅಳವಡಿಸಿಕೊಂಡಿರುವ ವಿಜ್ಞಾನ, ಹರಿಯಾಣದ ಬೋರ್‌ವೆಲ್ ರಿಪೇರಿ ಮಾಡುವ ಮಹಿಳೆಯರು, ಕಾಕೋಳದ ಆಹಾರ ಧಾನ್ಯಗಳ ತಳಿ ಸಂರಕ್ಷಣೆ ಮಾಡುತ್ತಿರುವ ರೈತ ಮಹಿಳೆಯರು, ನಮ್ಮ ದೇಶದ ವಿವಿಧ ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ಕಾರ್ಯನಿರತರಾಗಿರುವ ಮಹಿಳಾ ವಿಜ್ಞಾನಿಗಳು, ರಾಕೆಟ್ ಉಡಾಯಿಸಬಲ್ಲ ಮಹಿಳಾ ತಂತ್ರಜ್ಞರು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರಣವಾಗಬಲ್ಲ ಗೃಹಿಣಿ - ಹೀಗೆ ಮಹಿಳೆಯ ಸಾಧನೆಯ ಹಲವು ಮುಖಗಳನ್ನು ಕಾರ್ಯಕ್ರಮ ಸರಣಿ ಪರಿಚಯಿಸಲಿದೆ.

ಸ್ವಾತಂತ್ರ್ಯ ಬಂದ 64 ವರ್ಷಗಳ ನಂತರವೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯೇಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೇರಲಿಲ್ಲ? ಆಕೆ ನಡೆಸುವ ಆಂದೋಲನಗಳೇಕೆ ಶಕ್ತಿಯುತವಾಗುತ್ತಿಲ್ಲ? ಇಂದಿಗೂ ಪೌಷ್ಟಿಕ ಆಹಾರ ಮತ್ತು ಸದೃಢ ಆರೋಗ್ಯದ ಕೊರತೆಯೇಕೆ ಮಹಿಳೆಯನ್ನು ಕಾಡುತ್ತಿದೆ? ಇಂದಿನ ವೈಜ್ಞಾನಿಕ ಯುಗದಲ್ಲೂ, ಹುಟ್ಟಿನ ರಹಸ್ಯವನ್ನು ಅರಿತವರೂ `ಗಂಡು~ ಮಗುವಿಗೇಕೆ ಪ್ರಾಶಸ್ತ್ಯ ನೀಡುತ್ತಾರೆ? ವಿದ್ಯಾವಂತ ಮಹಿಳೆಯರೂ ಹೆಣ್ಣು ಭ್ರೂಣ ಹತ್ಯೆಗೇಕೆ ಮುಂದಾಗುತ್ತಾರೆ? ಮುಂತಾದ ಪ್ರಚಲಿತ ಸಮಸ್ಯೆಗಳನ್ನು ಎಳೆ ಎಳೆಯಾಗಿ 13 ಕಂತುಗಳಲ್ಲಿ `ವಿಜ್ಞಾನಮಯಿ~ ಕಾರ್ಯಕ್ರಮ ಸರಣಿ ವಿಶ್ಲೇಷಿಸಲಿದೆ. ಮಹಿಳೆಯ ಸಬಲೀಕರಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಮಹಿಳೆಯ ಕೊಡುಗೆಯನ್ನು ಇದು ಪರಿಚಯಿಸಲಿದೆ.

ಈ ಕಾರ್ಯಕ್ರಮಗಳಲ್ಲಿ ಆಯಾ ಕ್ಷೇತ್ರ ಪರಿಣತರ ಅಭಿಪ್ರಾಯಗಳನ್ನು ಸಹ ಅಳವಡಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಲೇಖನಗಳನ್ನು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಲೇಖಕರಾದ ಡಾ. ಎನ್. ಎಸ್. ಲೀಲಾ, ಡಾ. ವೈ. ಸಿ. ಕಮಲಾ, ಜಿ. ವಿ. ನಿರ್ಮಲಾ, ಡಾ. ಗಾಯತ್ರಿ ಮೂರ್ತಿ, ಡಾ. ವಸುಂಧರಾ ಭೂಪತಿ, ಸುಮಂಗಲಾ ಎಸ್. ಮುಮ್ಮಿಗಟ್ಟಿ, ಎಸ್. ಕ್ಷಮಾ ಹಾಗೂ ಕೊಳ್ಳೆಗಾಲ ಶರ್ಮಾ ಇವರು ರಚಿಸಿದ್ದಾರೆ.

ಯುವಜನಾಂಗ, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ಸರಣಿ ರೂಪಿತವಾಗಿದೆ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಂದ ಸರಿ ಉತ್ತರಗಳಿಂದ ಲಾಟರಿ ಎತ್ತುವ ಮುಖಾಂತರ ಪ್ರತಿ ಕಾರ್ಯಕ್ರಮಕ್ಕೆ ಹತ್ತು ಜನ ವಿಜೇತರನ್ನು ಆಯ್ಕೆ ಮಾಡಲಾಗುವುದು. ವಿಗ್ಯಾನ್ ಪ್ರಸಾರದ ಪರವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬಹುಮಾನಗಳನ್ನು ನೀಡಲಿದೆ. ಕಾರ್ಯಕ್ರಮಗಳನ್ನು ಬೆಂಗಳೂರು ಆಕಾಶವಾಣಿಯ ಸುಮಂಗಲಾ ಎಸ್. ಮುಮ್ಮಿಗಟ್ಟಿ ಹಾಗೂ ಶಶಿಕಾಂತ ಮುಮ್ಮಿಗಟ್ಟಿಯವರು ನಿರ್ಮಿಸಿದ್ದಾರೆ.
ವಿಜ್ಞಾನಮಯಿ ಕಾರ್ಯಕ್ರಮ ಸರಣಿ ಸೆಪ್ಟೆಂಬರ್ 11 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9-30ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT