ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳಿಂದ ಮುಂಗಾರು ಒಗಟು ಬಿಡಿಸುವ ಯತ್ನ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ದೇಶದ ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ -ಪ್ರತಿ ವರ್ಷ ಮುಂಗಾರು ಹೀಗೆ ಮುನಿಸು ತೋರಿಸುತ್ತಲೇ ಇರುತ್ತದೆ. ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಡುವ ಮಳೆ, ಪ್ರವಾಹಕ್ಕೆ ಹಲವರನ್ನು ಬಲಿ ತೆಗೆದುಕೊಳ್ಳುವ ಜತೆಗೆ ಬರದ ಕಾರಣಕ್ಕೆ ರೈತರ ಆತ್ಮಹತ್ಯೆಗೂ ಕಾರಣವಾಗುತ್ತದೆ. ನಿಸರ್ಗದ ಅತಿದೊಡ್ಡ ರಹಸ್ಯಗಳಲ್ಲಿ ಒಂದಾಗಿರುವ ಮಳೆಯ ಇಂತಹ ಯದ್ವಾತದ್ವಾ ವರ್ತನೆಯ ರಹಸ್ಯ ಬಿಡಿಸಲು ವಿಜ್ಞಾನಿಗಳು ಈಗ ಸೂಪರ್ ಕಂಪ್ಯೂಟರ್ ಮೊರೆ ಹೋಗಿದ್ದಾರೆ.

ಇದೇ ಮೊದಲ ಬಾರಿಗೆ ದೇಶದ ವಿಜ್ಞಾನಿಗಳು, ಮಳೆ ಮುನ್ಸೂಚನೆ ಬಗ್ಗೆ ಕಂಪ್ಯೂಟರ್ ಮಾದರಿ ಸಿದ್ಧಪಡಿಸಲು ಹೊರಟಿದ್ದಾರೆ. ಮುಂಗಾರಿನ ಎರ‌್ರಾಬಿರ‌್ರಿ ಚಲನವಲನದ ಬಗ್ಗೆ ಮುಂಚಿತವಾಗಿಯೇ ಕರಾರುವಾಕ್ಕಾಗಿ ಭವಿಷ್ಯ ನುಡಿಯಲು `ಕಂಪ್ಯೂಟರ್ ಮಾದರಿ~ ನೆರವಾಗುವ ನಿರೀಕ್ಷೆಯಲ್ಲಿ ಇದ್ದಾರೆ.

ಅಮೆರಿಕ, ಬ್ರಿಟನ್ ವಿಜ್ಞಾನಿಗಳ ಸಹಯೋಗದಲ್ಲಿ ಭಾರತೀಯ ವಿಜ್ಞಾನಿಗಳು ಮಳೆಯ ಒಗಟು ಬಿಡಿಸಲು ಹೊರಟಿದ್ದಾರೆ. ಸೂಪರ್ ಕಂಪ್ಯೂಟರ್ ನೆರವಿನಿಂದ ವಿಶ್ವದ ಮೊಟ್ಟ ಮೊದಲ ಅಲ್ಪಾವಧಿ ಮತ್ತು ದೀರ್ಘಾವಧಿ ಕಂಪ್ಯೂಟರ್ ಮಾದರಿಗಳನ್ನು ಸಿದ್ಧಪಡಿಸಿ, ಮಳೆ ಮಾರುತಗಳ ಚಲನವಲನದ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಪ್ರಯತ್ನ ಇದಾಗಿದೆ.

ಅತ್ಯಾಧುನಿಕ ಕಂಪ್ಯೂಟರ್‌ನಿಂದ ಪಡೆಯುವ ಮಳೆ ಮುನ್ಸೂಚನೆ ಮಾಹಿತಿಯ ನೆರವಿನಿಂದ ರೈತರು ಸಾಗುವಳಿ ಮತ್ತಿತರ ಕೃಷಿ ಚಟುವಟಿಕೆಗಳ ಬಗ್ಗೆ ನಿರ್ಧಾರಕ್ಕೆ ಬರಬಹುದು. ರಾಜ್ಯ ಸರ್ಕಾರಗಳು ಬರ, ಪ್ರವಾಹ ಎದುರಿಸಲು ಪೂರ್ವ ಸಿದ್ಧತೆಗಳನ್ನೂ ನಡೆಸಬಹುದು. ಹೆಚ್ಚು  ಖಚಿತವಾದ ಆರ್ಥಿಕ ನೀತಿ ನಿರ್ಧಾರ ಕೈಗೊಳ್ಳಲೂ ಈ ಮಾಹಿತಿ ನೆರವಾಗುವ ನಿರೀಕ್ಷೆ ಇದೆ. ಈ ಪ್ರಯತ್ನ ಯಶಸ್ವಿಯಾದರೆ, ಕೃಷಿ ಅರ್ಥವ್ಯವಸ್ಥೆಯ ಚಿತ್ರಣ ಬದಲಾಗಲಿದೆ.

ನಿಜವಾದ ಸವಾಲು
ಹವಾಮಾನ ಮುನ್ಸೂಚನೆಯು ದೇಶದ ಕೃಷಿ ರಂಗ ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ.  ನಿರೀಕ್ಷೆಯಂತೆ ಮಳೆಯಾಗದಿದ್ದರೆ ನೀರಿನ ಸಂಗ್ರಹ ಮತ್ತು ನೀರಾವರಿ ಯೋಜನೆಗಳ ಸಮರ್ಪಕ ನಿರ್ವಹಣೆಯೂ ಸಾಧ್ಯವಾಗಲಾರದು.

ದೇಶದಲ್ಲಿನ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಬೇಸಾಯ ಯೋಗ್ಯ ಭೂಮಿಯು ಮಳೆ ಆಧಾರಿತವಾಗಿದ್ದು ಹತ್ತಿ, ಅಕ್ಕಿ, ಸಕ್ಕರೆ, ಗೋಧಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ವಾಡಿಕೆಯಂತೆ ಮಳೆಯಾದರೆ ರೈತಾಪಿ ಜನರ ಬಳಿ ಹೆಚ್ಚು ಹಣ ಇರುವಂತಾಗಿ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಮಳೆ ಕೈಕೊಟ್ಟರೆ ಸರಕುಗಳ ಬೇಡಿಕೆ ಕುಸಿಯುತ್ತದೆ.

ಏಪ್ರಿಲ್‌ನಲ್ಲಿಯೇ ಮುನ್ಸೂಚನೆ
ದೇಶದ ಹವಾಮಾನ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಏಪ್ರಿಲ್‌ನಲ್ಲಿಯೇ ನೀಡುತ್ತದೆ.  ಸಮುದ್ರದ ಉಷ್ಣತೆ, ಗಾಳಿಯ ವೇಗ ಮತ್ತು ಗಾಳಿಯ ಒತ್ತಡಕ್ಕೆ ಸಂಬಂಧಿಸಿದಂತೆ 50 ವರ್ಷಗಳ ಅಂಕಿ ಅಂಶಗಳನ್ನು ಆಧರಿಸಿ ಮಳೆ ಸಾಧ್ಯತೆ ಬಗ್ಗೆ ಭವಿಷ್ಯ ನುಡಿಯುತ್ತದೆ. ದೀರ್ಘಾವಧಿ ಕರಾರುವಾಕ್ಕಾದ ಮುನ್ಸೂಚನೆಗೆ ಅಂಕಿ ಅಂಶ ಆಧರಿಸಿದ ಮಾದರಿಯೇ ಹೆಚ್ಚು ವಿಶ್ವಾಸಾರ್ಹವಾದದ್ದು ಆಗಿರುತ್ತದೆ. ಆದರೂ, ಅನೇಕ ಸಂದರ್ಭಗಳಲ್ಲಿ ಇಂತಹ ಮುನ್ಸೂಚನೆಗಳು ವಿಫಲವಾಗಿವೆ.

ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ, ಮಳೆ ಮುನ್ಸೂಚನೆ ಖಚಿತವಾಗಿರುವುದಿಲ್ಲ. ಯಾವ ಪ್ರದೇಶದಲ್ಲಿ ಸುರಿಯಲಿದೆ. ಯಾವ ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ, ಎಲ್ಲಿಯವರೆಗೆ ಮಳೆಗಾಲ ಇರಲಿದೆ ಎನ್ನುವುದು ಖಚಿತವಾಗಿ ನುಡಿಯಲು ಹವಾಮಾನ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ.

ಹಿಂದೆ, ಕಪ್ಪೆಗಳ ವಟಗುಟ್ಟುವಿಕೆ ಆಧರಿಸಿಯೇ ಮಳೆ ಬಗ್ಗೆ ರೈತಾಪಿ ವರ್ಗ ತೀರ್ಮಾನಕ್ಕೆ ಬರುತ್ತಿದ್ದ ದಿನಗಳಿದ್ದವು. ಇತ್ತೀಚಿನ ದಿನಗಳಲ್ಲಿ ಕಪ್ಪೆಗಳ ಕರ್ಕಶ ದನಿಯೇ ಕೇಳಿ ಬರುತ್ತಿಲ್ಲ. ಇದಕ್ಕೆಲ್ಲ ಹವಾಮಾನ ವೈಪರೀತ್ಯವೇ ಕಾರಣ. ಮುಂಗಾರಿನ ಮುನಿಸಿಗೂ ಇದೇ ಮುಖ್ಯ ಕಾರಣ ಎನ್ನಬಹುದಾಗಿದೆ.

ಮಳೆ ಎಂದರೆ ನೀರಿನ ಮೂಲ. ಪ್ರತಿಯೊಬ್ಬರಿಗೂ ನೀರು ಬೇಕೆ ಬೇಕು. ಮಳೆಗಾಲವೇ ಎಲ್ಲರ, ಎಲ್ಲ ಬಗೆಯ ನೀರಿನ ಅಗತ್ಯ ಪೂರೈಸುತ್ತದೆ. ದೇಶದಲ್ಲಿ ಜೂನ್ - ಸೆಪ್ಟೆಂಬರ್ ಅವಧಿಯಲ್ಲಿ ಶೇ 75ರಷ್ಟು ಮಳೆ ಬೀಳುತ್ತದೆ. ತೇವಾಂಶ ತುಂಬಿದ ಗಾಳಿಗಳು ನೈರುತ್ಯ ಮಾರುತಗಳ ರೂಪದಲ್ಲಿ ಮಳೆ ಸುರಿಸುತ್ತವೆ.

ದೇಶದಾದ್ಯಂತ ಬರದ ಛಾಯೆ ಕಂಡು ಬಂದಿಲ್ಲ. ಆತಂಕ ಪಡಬೇಕಾಗಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಭರವಸೆಯ ಮಾತುಗಳನ್ನಾಡಿದ್ದರೂ, ವಾಸ್ತವ ಬೇರೆಯೇ ಆಗಿದೆ. ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ.

ನಿಜವಾದ `ಹಣಕಾಸು ಸಚಿವ~

ರೈತರ ಜತೆ ಜೂಜಾಟ ಆಡುತ್ತಿದೆ ಎನ್ನುವ ಕುಖ್ಯಾತಿಯೂ ಈ ಮುಂಗಾರಿಗೆ ಅಂಟಿಕೊಂಡಿದೆ. ದೇಶದಲ್ಲಿ ಅಂದಾಜು 60 ಕೋಟಿ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಗೆ ಶೇ 15ರಷ್ಟು ಕೊಡುಗೆ ನೀಡುವ ಕೃಷಿ ರಂಗಕ್ಕೆ ಸಂಬಂಧಿಸಿ ಹೇಳುವುದಾದರೆ ಮುಂಗಾರು ಮಳೆಯೇ ದೇಶದ ನಿಜವಾದ `ಹಣಕಾಸು ಸಚಿವ~ ಎಂದೂ ವ್ಯಾಖ್ಯಾನಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT