ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟೊಸ್ಕಾ, ಮೈಕೆಲ್ ಪೈಪೋಟಿ ಇಂದು

ಐಟಿಎಫ್: ಶಬಾಜ್-ಅಮೃತ್ ಜೋಡಿಗೆ ಡಬಲ್ಸ್ ಪ್ರಶಸ್ತಿ
Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಳಗಾವಿ: ತಮ್ಮ ಉತ್ತಮ ಫಾರ್ಮ್ ಮುಂದುವರಿಸಿರುವ ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ ಹಾಗೂ ಆರನೇ ಶ್ರೇಯಾಂಕಿತ ಅಮೆರಿಕಾದ ಮೈಕಲ್ ಶಬಾಜ್ ಇಲ್ಲಿ ನಡೆಯುತ್ತಿರುವ `ಬೆಳಗಾವಿ ಓಪನ್' ಪುರುಷರ ಐಟಿಎಫ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ಒಂದು ತಾಸು, 19 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಮೈಕಲ್ ಶಬಾಜ್ 6-2, 7-5ರಲ್ಲಿ ಅಗ್ರ ಶ್ರೇಯಾಂಕದ ಶ್ರೀರಾಮ್ ಬಾಲಾಜಿಗೆ ಆಘಾತ ನೀಡಿದರು. ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ 327ನೇ ಸ್ಥಾನದಲ್ಲಿರುವ ತಮಿಳುನಾಡಿನ ಬಾಲಾಜಿ ಕಳೆದ ಮೂರು ಟೂರ್ನಿಗಳಲ್ಲೂ ಪ್ರಶಸ್ತಿ ವಂಚಿತರಾಗುವಂತಾಯಿತು.

ಪಂದ್ಯದ ಮೊದಲ ಸೆಟ್‌ನ 3 ಮತ್ತು 9ನೇ ಗೇಮ್‌ಗಳಲ್ಲಿ ಬಾಲಾಜಿಯ ಸರ್ವ್ ಮುರಿಯುವ ಮೂಲಕ ಶಬಾಜ್ ಕೇವಲ 35 ನಿಮಿಷಗಳಲ್ಲೇ ಸೆಟ್ ವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲೂ ಬಾಲಾಜಿ ಹೆಚ್ಚು ಪ್ರತಿರೋಧ ತೋರಲಿಲ್ಲ. ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ತುಂಡರಿಸುವ ಮೂಲಕ ಶಬಾಜ್ ಮುನ್ನಡೆ ಸಾಧಿಸಿದರು. 6ನೇ ಗೇಮ್‌ನಲ್ಲಿ ಬಾಲಾಜಿ ಎದುರಾಳಿಯ ಸರ್ವ್ ಮುರಿದರಾದರೂ ಗೆಲುವಿಗೆ ಅದು ಸಾಕಾಗಲಿಲ್ಲ. 11ನೇ ಗೇಮ್‌ನಲ್ಲಿ ಒಂದೂ ಪಾಯಿಂಟ್ ಗಳಿಸದ ಅವರು ಪಂದ್ಯ ಬಿಟ್ಟುಕೊಡಬೇಕಾಯಿತು.

ಎರಡು ರೋಚಕ ಟೈಬ್ರೇಕ್‌ಗಳಿಂದ ಕೂಡಿದ್ದ ಮತ್ತೊಂದು ಸೆಮಿಫೈನಲ್‌ನಲ್ಲಿ ಟಾರ್ಸ್ಟನ್ ವಿಟೊಸ್ಕಾ 7-6(3), 7-6(5) ಅಂತರದಿಂದ ಪೋರ್ಚುಗಲ್‌ನ ಯುವಕ ಆ್ಯಂಡ್ರೆ ಗಾಸ್ಪರ್ ಮೂರ್ತ ಅವರಿಗೆ ಮನೆಯ ಹಾದಿ ತೋರಿಸಿದರು. ಮೊದಲ ಸೆಟ್‌ನಲ್ಲಿ ಇಬ್ಬರೂ ಆಟಗಾರರು ತಲಾ ಒಂದೊಂದು ಸರ್ವೀಸ್ ಕಳೆದುಕೊಂಡರೆ, ಎರಡನೇ ಸೆಟ್‌ನಲ್ಲಿ ಯಾರೊಬ್ಬರು ಸರ್ವ್ ಬಿಟ್ಟುಕೊಡಲಿಲ್ಲ. ಹೀಗಾಗಿ ಎರಡೂ ಸೆಟ್‌ಗಳು ಟೈಬ್ರೇಕ್ ಮೂಲಕ ಫಲಿತಾಂಶ ಕಂಡವು.

ದಾವಣಗೆರೆ ಹಾಗೂ ಧಾರವಾಡ ಟೂರ್ನಿಗಳಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ವಿಟೊಸ್ಕಾ ಇದೀಗ ಫೈನಲ್ ಹಂತಕ್ಕೆ ಮುನ್ನಡೆದಿದ್ದು, ಇಬ್ಬರು ವಿದೇಶಿ ಆಟಗಾರರ ನಡುವೆ ನಡೆಯಲಿರುವ ಶನಿವಾರದ ಫೈನಲ್ ಪಂದ್ಯ ಕುತೂಹಲ ಕೆರಳಿಸಿದೆ.

ಅಮೆರಿಕಾ ಜೋಡಿಗೆ ಪ್ರಶಸ್ತಿ: ಅಮೆರಿಕಾದ ಅಮೃತ್ ನರಸಿಂಹನ್ ಹಾಗೂ ಮೈಕಲ್ ಶಬಾಜ್ ಜೋಡಿ ಸತತ ಎರಡನೇ ಬಾರಿಗೆ ಐಟಿಎಫ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.

ಫೈನಲ್ ಪಂದ್ಯದಲ್ಲಿ ಈ ಜೋಡಿಯು  7-6 (3), 7-5ರಲ್ಲಿ ಭಾರತದ ಅರುಣ್‌ಪ್ರಕಾಶ್ ರಾಜಗೋಪಾಲನ್-ವಿಜಯ್‌ಸುಂದರ್ ಪ್ರಕಾಶ್ ಅವರನ್ನು ಮಣಿಸಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಐಟಿಎಫ್ ವಿಜೇತರಿಗೆ ನೀಡುವ ಸಲುವಾಗಿ `ವಿಟಿಯು ರೋಲಿಂಗ್ ಟ್ರೋಫಿ'ಯನ್ನು ಕಾಣಿಕೆ ನೀಡಿದ್ದು, ಈ ಬಾರಿಯ ವಿಜೇತ ಜೋಡಿಗೆ ವಿಟಿಯು ರಿಜಿಸ್ಟ್ರಾರ್ ಡಾ. ಕೃಷ್ಣಮೂರ್ತಿ ಪ್ರಶಸ್ತಿ ಹಾಗೂ ಚೆಕ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT