ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಠಲಮೂರ್ತಿಗೆ ಸಂಸ್ಕೃತಿ ಬಾಗಿನ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಐ.ಎಂ.ವಿಠಲಮೂರ್ತಿ ಅವರ ಸಾಂಸ್ಕೃತಿಕ ಪರಿಚಾರಿಕೆ ದಾಖಲೆಯಾಗಿ ಉಳಿದುಕೊಂಡಿವೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾಚಂದ್ರಶೇಖರ ಕಂಬಾರ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಅವರ ಅಭಿನಂದನಾ ಕಾರ್ಯಕ್ರಮ `ಸಂಸ್ಕೃತಿ ಬಾಗಿನ~ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಕರ್ನಾಟಕದಲ್ಲಿ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ ಅಪರೂಪದ ವ್ಯಕ್ತಿ ವಿಠಲಮೂರ್ತಿ. ತಮಗೆ ಸರಿ ಕಂಡದ್ದನ್ನು ಮಾಡಿ ಮುಗಿಸುವ ಅಚಲ ವ್ಯಕ್ತಿತ್ವ ಅವರದ್ದು. ವಿಶ್ವ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಸಾಂಸ್ಕೃತಿಕ ಕಾಳಜಿಯ ಅಪರೂಪದ ಅಧಿಕಾರಿ ಅವರು~ ಎಂದು ಅವರು ಶ್ಲಾಘಿಸಿದರು.

`ಇಂದು ಜಗತ್ತಿನಾದ್ಯಂತ ಜಾನಪದ ದೃಶ್ಯಕಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಾನಪದ ಜಾತ್ರೆಯ ಮೂಲಕ ದೃಶ್ಯಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಆರಂಭಿಸಿದವರು ವಿಠಲಮೂರ್ತಿ. ಕನ್ನಡದ ಕೆಲಸಗಳನ್ನು ಯಾವ ಇಲಾಖೆಯಲ್ಲಾದರೂ ಮಾಡಲು ಸಾಧ್ಯ ಎಂಬುದನ್ನು ಮಾಡಿ ತೋರಿಸಿರುವ ಮಾದರಿ ಅಧಿಕಾರಿ ಅವರು~ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಮಾತನಾಡಿ, `ಸಂಸ್ಕೃತಿ ಪ್ರೇರಕರಾಗಿ, ಪರಂಪರೆಯ ನಿರ್ಮಾಪಕರಾಗಿ ಕೆಲಸ ಮಾಡಿದವರು ವಿಠಲಮೂರ್ತಿ. ಜನಪ್ರಿಯ ಪುಸ್ತಕಮಾಲೆ ಹಾಗೂ ವಿಶ್ವ ಕನ್ನಡ ಸಮ್ಮೇಳನಗಳೇ ಅವರ ಸಾಂಸ್ಕೃತಿಕ ಕೊಡುಗೆಗಳನ್ನು ತಿಳಿಸುತ್ತವೆ. ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಹಿರಿಯ ಅಧಿಕಾರಿಗೆ ಈ ರೀತಿಯ ಅಭಿನಂದನೆಯ ಸನ್ಮಾನ ನಡೆದಿಲ್ಲ~ ಎಂದರು.

ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, `ಹವ್ಯಾಸಿ ರಂಗಭೂಮಿ ಹಾಗೂ ಕಲಾತ್ಮಕ ಚಿತ್ರಗಳ ಕ್ಷೇತ್ರಕ್ಕೆ ವಿಠಲಮೂರ್ತಿ ಕೊಡುಗೆ ಅಪಾರ. ಚಿತ್ರೋದ್ಯಮದ ಬೆರಗಿಗಿಂಥಾ ಹೆಚ್ಚಾಗಿ ಚಲನಚಿತ್ರದ ಸಾಧ್ಯತೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಅವರು~ ಎಂದರು.

ಸನ್ಮಾನಕ್ಕೂ ಮುನ್ನ ನಡೆದ ಸಂವಾದದಲ್ಲಿ ಮಾತನಾಡಿದ ಐ.ಎಂ.ವಿಠಲಮೂರ್ತಿ, `ಸರ್ಕಾರಿ ಅಧಿಕಾರಿಗಳು ವರ್ಗಾವಣೆಗೆ ಹೆದರದೇ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ವರ್ಗಾವಣೆಗೆ ಹೆದರುವ ಅಧಿಕಾರಿಗಳು  ಪುಡಾರಿಗಳ ಗುಲಾಮರಾಗಬೇಕಾಗುತ್ತದೆ. ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡಿದ್ದರೆ ಇಂದು ಯಾವ ಮಂತ್ರಿಗಳೂ ಜೈಲು ಸೇರುತ್ತಿರಲಿಲ್ಲ~ ಎಂದರು.

`ಅರ್ಥಶಾಸ್ತ್ರದಲ್ಲಿ ಎಂ.ಎ ಅಭ್ಯಾಸ ಮಾಡಿ ಅಧ್ಯಾಪಕನಾಗಿದ್ದ ನಾನು, ಆಕಸ್ಮಿಕವಾಗಿ ಆಡಳಿತ ಕ್ಷೇತ್ರಕ್ಕೆ ಬಂದವನು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಂದದ್ದೂ ಆಕಸ್ಮಿಕವೇ. ವಿದ್ಯಾರ್ಥಿಯಾಗಿದ್ದಾಲೇ ಬಿ.ವಿ.ಕಾರಂತರ ಒಡನಾಟ ಬೆಳೆದು ರಂಗಭೂಮಿಯ ಆಸಕ್ತಿ ಬೆಳೆಯಿತು.

ಕಾರಂತ, ಕಂಬಾರ ಹಾಗೂ ಕಾರ್ನಾಡ್ ನಾಟಕಗಳನ್ನು ನೋಡಿ ರಂಗಭೂಮಿಯ ಮೋಹ ಹೆಚ್ಚಾಯಿತು. ಎಂಎಸ್‌ಐಎಲ್‌ನ ನಿತ್ಯೋತ್ಸವ ಕಾರ್ಯಕ್ರಮ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಮೈಲುಗಲ್ಲಾಗಿದ್ದರ ಬಗ್ಗೆ ಹೆಮ್ಮೆ ಇದೆ. ರಾಜ್ಯದ ವಿವಿಧ ಭಾಗಗಳ ಪ್ರತಿಭೆಗಳನ್ನು ಗುರುತಿಸಲು ನಿತ್ಯೋತ್ಸವ ಕಾರ್ಯಕ್ರಮ ಸಹಕಾರಿಯಾಯಿತು.

`ಕಾನೂರು ಹೆಗ್ಗಡತಿ~, `ಮತದಾನ~, `ಹಸೀನಾ~ ಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದು ತೃಪ್ತಿ ತಂದಿದೆ. ಕುವೆಂಪು ಅವರ `ಮಲೆಗಳಲ್ಲಿ ಮದು ಮಗಳು~ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆ ಇದೆ~ ಎಂದರು.

ರಂಗಕರ್ಮಿ ಬಿ.ಸುರೇಶ್ ಸಂವಾದ ನಡೆಸಿಕೊಟ್ಟರು. ಪೂಜಾ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಮೂಲಕ `ಸಂಸ್ಕೃತಿ ಬಾಗಿನ~ ಅರ್ಪಿಸಲಾಯಿತು.
 
ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಹಿರಿಯ ರಂಗಕರ್ಮಿ ಡಿ.ಕೆ.ಚೌಟ, ಶ್ರೀನಿವಾಸ್ ಜಿ. ಕಪ್ಪಣ್ಣ ಇದ್ದರು.  ಚಂದ್ರನಾಥ ಆಚಾರ್ಯ, ಜೆ.ಎಂ.ಎಸ್.ಮಣಿ, ಎ.ಎಸ್.ಮೂರ್ತಿ ಹಾಗೂ ಕೆ.ಮರಿಶಾಮಾಚಾರ್ ಸೇರಿದಂತೆ ಸುಮಾರು 16 ಮಂದಿ ವರ್ಣ ಚಿತ್ರ ಕಲಾವಿದರು ಚಿತ್ರಕಲಾ ಶಿಬಿರ ನಡೆಸಿ, ಚಿತ್ರಗಳ ಮೂಲಕ ವಿಠಲಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT