ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಜರ್ನಲಿಸ್ಟ್‌ಗಳ ಪಾತ್ರ ಮಹತ್ವದ್ದು

Last Updated 15 ಜನವರಿ 2012, 20:10 IST
ಅಕ್ಷರ ಗಾತ್ರ

ಬೆಂಗಳೂರು:  `ವಿದ್ಯುನ್ಮಾನ ಮಾಧ್ಯಮ ಜಗತ್ತು ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ವಿಡಿಯೊ ಜರ್ನಲಿಸ್ಟ್‌ಗಳ ಪಾತ್ರ ಮಹತ್ವವಾದದ್ದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ನಗರದಲ್ಲಿ ಭಾನುವಾರ ಕರ್ನಾಟಕ ವಿಡಿಯೊ ಜರ್ನಲಿಸ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ `ಫೋಕಸ್-2012~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಸರ್ಕಾರ ಹಾಗೂ ಸಮಾಜದ ಎಲ್ಲಾ ಓರೆ ಕೋರೆಗಳನ್ನು ಎತ್ತಿ ತೋರುವ ಮಾಧ್ಯಮಗಳಲ್ಲಿ ವಿಡಿಯೊ ಜರ್ನಲಿಸ್ಟ್‌ಗಳ ಕಾರ್ಯ ಎಷ್ಟೋ ಬಾರಿ ಸವಾಲಿನದ್ದು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಅವರದ್ದು. ಸಂದರ್ಭಗಳ ಸೂಕ್ಷ್ಮತೆಯನ್ನು ಸೆರೆ ಹಿಡಿಯಲು ಸದಾ ತವಕಿಸುವ ವಿಡಿಯೊ ಜರ್ನಲಿಸ್ಟ್‌ಗಳ ಪಾತ್ರವೂ ಮಾಧ್ಯಮದಲ್ಲಿ ಹೆಚ್ಚಿನದಾಗಿದೆ. ಮುಂದಿನ ದಿನಗಳಲ್ಲಿ ಇತರೆ ಪತ್ರಕರ್ತರಿಗೆ ದೊರೆಯುತ್ತಿರುವ ಎಲ್ಲಾ ಸೌಲಭ್ಯಗಳು ವಿಡಿಯೊ ಜರ್ನಲಿಸ್ಟ್‌ಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗುವುದು~ ಎಂದರು.

`ಹಿರಿಯ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರನ್ನು ಸನ್ಮಾನಿಸುವ ಅವಕಾಶ ದೊರೆಕಿದ್ದು ನನ್ನ ಭಾಗ್ಯ. ಅವರನ್ನು ಕರೆದು ಸನ್ಮಾನಿಸುವ ಉತ್ತಮ ಕೆಲಸ ಇಂದು ನಡೆದಿದೆ~ ಎಂದು ಶ್ಲಾಘಿಸಿದರು.

ಪತ್ರಕರ್ತ ಅನಂತ ಚಿನಿವಾರ್ ಮಾತನಾಡಿ, `ಸಣ್ಣ ಸಣ್ಣ ಸೂಕ್ಷ್ಮಗಳನ್ನೂ ಹಿಡಿದಿಡುವ ಸವಾಲಿನ ಕೆಲಸ ವಿಡಿಯೊ ಜರ್ನಲಿಸ್ಟ್‌ಗಳದ್ದು. ಸುದ್ದಿವಾಹಿನಿಗಳಲ್ಲಿ ವರದಿಗಾರರಿಗಿಂಥಾ ಹೆಚ್ಚಿನ ಸೂಕ್ಷ್ಮತೆ ವಿಡಿಯೊ ಜರ್ನಲಿಸ್ಟ್‌ಗಳಿಗೆ ಇರಬೇಕಾಗುತ್ತದೆ. ಅವರ ಸಮಯ ಪ್ರಜ್ಞೆಯಿಂದ ಅದೆಷ್ಟೋ ಒಳನೋಟಗಳು ಬೆಳಕು ಕಾಣುತ್ತವೆ. ಇತರೆ ಪತ್ರಕರ್ತರಷ್ಟೇ ಸಾಮಾಜಿಕ ಜವಾಬ್ದಾರಿ ವಿಡಿಯೊ ಜರ್ನಲಿಸ್ಟ್‌ಗಳ ಮೇಲಿದೆ~ ಎಂದರು.

ಕರ್ನಾಟಕ ವಿಡಿಯೊ ಜರ್ನಲಿಸ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶಿವಶಂಕರ್ ಮಾತನಾಡಿ, `ವಿಡಿಯೊ ಜರ್ನಲಿಸ್ಟ್‌ಗಳಿಗೆ ಹೆಚ್ಚಿನ ರಕ್ಷಣೆ ಇಲ್ಲ. ಅವರ ಮೇಲೆ ಹಲ್ಲೆಗಳಾಗುವ ಹಾಗೂ ಅಪಘಾತಗಳಾಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಸರ್ಕಾರ ವಿಡಿಯೊ ಜರ್ನಲಿಸ್ಟ್‌ಗಳ ರಕ್ಷಣೆಗೆ ಬರಬೇಕು~ ಎಂದರು.

ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕ ವಿ.ಕೆ.ಮೂರ್ತಿ ಸೇರಿದಂತೆ ಪತ್ರಕರ್ತರಾದ ಕೆ.ಸುಂದರ, ಈಶ್ವರ್ ಎಸ್. ಶೆಟ್ಟರ್, ರಂಗನಾಥ್ ಭಾರಧ್ವಾಜ್, ವಿಜಯಲಕ್ಷ್ಮಿ ಶಿಬರೂರು, ರೆಹಮಾನ್ ಹಾಸನ, ಆರ್.ಎಚ್.ನಟರಾಜ್ ಹಾಗೂ ಹಿರಿಯ ವಿಡಿಯೊ ಜರ್ನಲಿಸ್ಟ್‌ಗಳಾದ ಎಸ್.ಆರ್.ಪುಟ್ಟಸ್ವಾಮಿ, ಆರ್. ಮೋಹನ್, ಕೆ.ಬಿ.ಉಮೇಶ್, ಅಲ್ಫಾನ್ ವಿಮಲ್ ರಾಜ್, ಡಿ.ಎಸ್.ಹರೀಶ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿಬಿಎಂಪಿ ಉಪ ಮೇಯರ್ ಎಸ್.ಹರೀಶ್, ಬಾಲ್ಡ್ ವಿನ್ ಕಾಲೇಜಿನ ಪ್ರಾಂಶುಪಾಲ ಜೋಶ್ವಾ ಎಸ್. ಸ್ಯಾಮ್ಯುಯೆಲ್, ಸಾಯಿ ಗೋಲ್ಡ್ ಪ್ಯಾಲೇಸ್‌ನ ಟಿ.ಎ.ಶರವಣ, ಕರ್ನಾಟಕ ವಿಡಿಯೊ ಜರ್ನಲಿಸ್ಟ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಗೋಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT