ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊಕಾನ್ ಕಂಪೆನಿಗೆ ದಂಡ

Last Updated 15 ಜನವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: `ಮಾನೋ ಯಾ ನ ಮಾನೋ~ (ನಂಬಿದರೆ ನಂಬಿ, ಬಿಟ್ಟರೆ ಬಿಡಿ) ಯೋಜನೆ ಅಡಿ ಗ್ರಾಹಕರನ್ನು ವಂಚಿಸಿದ  ವಿಡಿಯೊಕಾನ್ ಕಂಪೆನಿಯು ಈಗ ಆ ಗ್ರಾಹಕರಿಗೆ ಪರಿಹಾರ ನೀಡಬೇಕಾದ ಆದೇಶವೊಂದು ಗ್ರಾಹಕರ ವೇದಿಕೆಯಿಂದ ಹೊರಬಿದ್ದಿದೆ.

34 ಇಂಚಿನ ವಿಡಿಯೊಕಾನ್ ಟಿ.ವಿ. ಖರೀದಿ ಮಾಡಿದರೆ 2ವರ್ಷ 11 ತಿಂಗಳ ನಂತರ 32 ಇಂಚಿನ ಟಿ.ವಿ ಒಂದನ್ನು ಉಚಿತವಾಗಿ ನೀಡುವುದಾಗಿ ನಂಬಿಸಿ ಚಾಮರಾಜಪೇಟೆ ನಿವಾಸಿ ಬಿ.ಆರ್. ದೀಪಕ್ ಅವರನ್ನು ವಂಚನೆ ಮಾಡಿರುವ ಪ್ರಕರಣ ಇದಾಗಿದೆ.

ಈ ವಂಚನೆಗಾಗಿ ದೀಪಕ್ ಅವರಿಗೆ 10ಸಾವಿರ ರೂಪಾಯಿ ಪರಿಹಾರ ಹಾಗೂ 3,000 ರೂಪಾಯಿ ನ್ಯಾಯಾಲಯ ವೆಚ್ಚ ನೀಡುವಂತೆ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ  ಕಂಪೆನಿಗೆ ನಿರ್ದೇಶಿಸಿದೆ.

ಔರಾಂಗಾಬಾದ್‌ನ `ವಿಡಿಯೊಕಾನ್ ಇಂಡಸ್ಟ್ರೀಸ್ ಲಿಮಿಟೆಡ್~ ಹಾಗೂ ಮುಂಬೈನ `ನೆಕ್ಸ್ಟ್ ರಿಟೇಲ್ ಇಂಡಿಯಾ ಲಿಮಿಟೆಡ್~ ವಿರುದ್ಧ ಈ ದೂರು ದಾಖಲಿಸಲಾಗಿತ್ತು.

ಪ್ರಕರಣ ವಿವರ: ಯೋಜನೆಯನ್ನು ನಂಬಿದ್ದ ದೀಪಕ್ ಅವರು 2008ರ ಜುಲೈ ತಿಂಗಳಿನಲ್ಲಿ ಜಯನಗರದಲ್ಲಿ ಇದ್ದ ಶಾಖೆಯೊಂದರಲ್ಲಿ 20ಸಾವಿರ ರೂಪಾಯಿ ನೀಡಿ ಟಿ.ವಿ.ಖರೀದಿ ಮಾಡಿದರು. ( ಈ ಮೊತ್ತದಲ್ಲಿ ಉಚಿತ ಕೊಡುಗೆಯ ಟಿ.ವಿ ಕುರಿತಾದ ದಾಖಲೆ ತಯಾರು ಮಾಡಲು 7ಸಾವಿರ ರೂಪಾಯಿ ಪಡೆದುಕೊಳ್ಳಲಾಗಿತ್ತು). ಅವಧಿ ಮುಗಿದ ನಂತರ ಕೊಡುಗೆ ಪಡೆಯುವ ಸಂಬಂಧ ಜಯನಗರದ ಶಾಖೆ ಇದ್ದ ಜಾಗಕ್ಕೆ ಹೋಗಿ ನೋಡಿದರೆ ಅಲ್ಲಿಯ ಮಳಿಗೆ ಮುಚ್ಚಲಾಗಿತ್ತು.

ಔರಂಗಾಬಾದ್ ಶಾಖೆಗೆ ದೂರವಾಣಿಕರೆ ಮಾಡಿದಾಗ, 4,980 ರೂಪಾಯಿ ಪಾವತಿ ಮಾಡಿದರೆ ಕೊಡುಗೆ ನೀಡುವುದಾಗಿ ಉತ್ತರ ಬಂತು. ಆದರೆ ಈ ಹಣ ಏಕೆ ನೀಡಬೇಕು ಎಂಬ ಬಗ್ಗೆ ಅರ್ಜಿದಾರರು ಕೇಳಿದಾಗ, ಅಲ್ಲಿಯ ಸಿಬ್ಬಂದಿಯಿಂದ ಸೂಕ್ತ ಉತ್ತರ ಬರಲಿಲ್ಲ.

ಹೆಚ್ಚುವರಿ ಹಣ ನೀಡುವ ಕುರಿತು ಉತ್ತರಿಸುವಂತೆ ಮುಂಬೈನ ಮುಖ್ಯ ಶಾಖೆಗೆ ಇ-ಮೇಲ್ ಮೂಲಕ ಅರ್ಜಿದಾರರು ಸಂದೇಶ ಕಳುಹಿಸಿದರು. ಆದರೆ ಯಾವುದೋ ಒಂದು ದೂರವಾಣಿ ಸಂಖ್ಯೆಯನ್ನು ನೀಡಿದ ಅವರು ಅಲ್ಲಿ ಕರೆ ಮಾಡಿ ವಿಚಾರಿಸುವಂತೆ ತಿಳಿಸಿದರು. ಆದರೆ ಆ ಸಂಖ್ಯೆಗೆ ಕರೆ ಮಾಡಿದಾಗ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದುದರಿಂದ ದೀಪಕ್ ಅವರು ಕೊನೆಯದಾಗಿ ವೇದಿಕೆ ಮೊರೆ ಹೋದರು. ಇದನ್ನು ವೇದಿಕೆ ಗಂಭೀರವಾಗಿ ಪರಿಗಣಿಸಿತು. ಪರಿಹಾರದ ಜೊತೆಗೆ, ದಾಖಲೆ ಸಿದ್ಧಪಡಿಸಲು ಅರ್ಜಿದಾರರು ನೀಡಿರುವ 7,000 ರೂಪಾಯಿಗಳನ್ನು ಅವರು ಹಣ ನೀಡಿದ ದಿನದಿಂದ ಅನ್ವಯ ಆಗುವಂತೆ ವಾರ್ಷಿಕ ಶೇ 18ರ ಬಡ್ಡಿದರದಲ್ಲಿ ವಾಪಸು ಮಾಡುವಂತೆ ವೇದಿಕೆ ಆದೇಶಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ದಂಡ
ಹಣಕಾಸಿನ ವಿವಾದವೊಂದಕ್ಕೆ ಸಂಬಂಧಿಸಿದಂತೆ ಜನತಾ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿದಿದ್ದರೂ, ಗ್ರಾಹಕರೊಬ್ಬರಿಗೆ ಹಣ ಪಾವತಿಸುವಂತೆ ಪೀಡಿಸುತ್ತಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಲ್‌ಬಾಗ್ ರಸ್ತೆಯಲ್ಲಿನ ಶಾಖೆಗೆ  ರೂ 25,000 ದಂಡ ವಿಧಿಸಿ 3ನೇ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ಹಣವನ್ನು ಪರಿಹಾರದ ರೂಪದಲ್ಲಿ ಸುಬ್ಬಣ್ಣ ಗಾರ್ಡನ್ ನಿವಾಸಿ ರಾಧೇಶ್ಯಾಮ್ ಸೋನಿ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ಈ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಿಂದ ಸೋನಿ ಅವರು 4ಸಾವಿರ ರೂಪಾಯಿ ಪಾವತಿಸಿ ವಿಮಾನದ ಟಿಕೆಟ್ ಪಡೆದುಕೊಂಡಿದ್ದರು. ಈ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಿದ್ದರೂ, ಹಣ ಪಾವತಿಗೆ ಬ್ಯಾಂಕ್ ನೋಟಿಸ್ ನೀಡತೊಡಗಿತು.

ಹಣ ಪಾವತಿಗೆ ಸಂಬಂಧಿಸಿದಂತೆ  ಕೆಲವೊಂದು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು.  ಅರ್ಜಿದಾರರು ಹಣ ಪಾವತಿ ಮಾಡಿರುವ ಕುರಿತು ನ್ಯಾಯಾಲಯದಲ್ಲಿ ಬ್ಯಾಂಕ್ ಒಪ್ಪಿಕೊಂಡಿತು.

ಇದಾದ ಮೇಲೂ ಹಣ ಪಾವತಿ ಮಾಡುವಂತೆ ಅರ್ಜಿದಾರರಿಗೆ ಪುನಃ ಕಿರುಕುಳ ನೀಡಲಾಯಿತು. ಇದರಿಂದ ಬೇಸತ್ತ ಸೋನಿ ಅವರು ವೇದಿಕೆ ಮೊರೆ ಹೋಗಿದ್ದರು. 30 ದಿನಗಳಲ್ಲಿ ಪರಿಹಾರದ ಹಣ ನೀಡುವಂತೆ ವೇದಿಕೆ ಬ್ಯಾಂಕ್‌ಗೆ ಆದೇಶಿಸಿದೆ.

ಸುಂದರ ಶರೀರದ ವಾಗ್ದಾನ: ವಂಚನೆ

ಮಹಿಳೆಯೊಬ್ಬರ ತೂಕವನ್ನು ಕಡಿಮೆಗೊಳಿಸಿ ಅವರ ಶರೀರವನ್ನು ಸುಂದರಗೊಳಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ವಂಚನೆ ಮಾಡಿದ `ಬ್ಯೂಟಿ ಪಾರ್ಲರ್~ ಒಂದು, ಆ ಹಣವನ್ನು ವಾಪಸು ನೀಡುವಂತೆ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಜಯನಗರದ `ಬಾಡಿ ಅಂಡ್ ಸೋಲ್~ ಪಾರ್ಲರ್ ವಿರುದ್ಧ ಬಸವನಗುಡಿ ನಿವಾಸಿ ತಲತ್ ಫತ್ಮಾ ದಾಖಲು ಮಾಡಿದ್ದ ದೂರು ಇದಾಗಿದೆ.

ಒಂದು ತಿಂಗಳವರೆಗೆ ತಮ್ಮಲ್ಲಿ ಚಿಕಿತ್ಸೆ ಪಡೆದುಕೊಂಡರೆ 10 ರಿಂದ 12 ಕೆ.ಜಿ. ತೂಕ ಕಡಿಮೆ ಮಾಡುವುದಾಗಿ ನಂಬಿಸಿದ್ದ ಮಳಿಗೆಯ ಮುಖ್ಯಸ್ಥರು, ತಲತ್ ಅವರಿಂದ 30,500 ರೂಪಾಯಿ ಪಡೆದುಕೊಂಡಿದ್ದರು.

ಆದರೆ ಚಿಕಿತ್ಸೆ ಯಾವುದೇ ಪರಿಣಾಮ ಬೀರಲಿಲ್ಲ. ಆದುದರಿಂದ ಹಣ ವಾಪಸಿಗೆ ಮಹಿಳೆ ಕೋರಿದರು. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವೇದಿಕೆ ಮೊರೆ ಹೋಗಿದ್ದರು. ಮಹಿಳೆ ನೀಡಿದ್ದ ಸಂಪೂರ್ಣ ಹಣವನ್ನು ಒಂದು ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚದ ಜೊತೆ ನೀಡುವಂತೆ ವೇದಿಕೆ ನಿರ್ದೇಶಿಸಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT