ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದರ್ಭ ತಂಡದಲ್ಲಿ ಕನ್ನಡದ `ಅಕ್ಷಯ್'

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಮೈಸೂರು: ಮಹಾರಾಷ್ಟ್ರದ ಪೂರ್ವ ಭಾಗ ವಿದರ್ಭದ ರಣಜಿ ಕ್ರಿಕೆಟ್ ತಂಡದಲ್ಲಿ `ಕರ್ನಾಟಕ' ಮೂಲದ ಹುಡುಗನೊಬ್ಬ ಕಳೆದ ಮೂರು ವರ್ಷಗಳಿಂದ ಮಿಂಚುತ್ತಿದ್ದಾರೆ! ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಡಿಸೆಂಬರ್ 15ರಿಂದ 18ರವರೆಗೆ ನಡೆಯಲಿರುವ ಕರ್ನಾಟಕ ಮತ್ತು ವಿದರ್ಭ ನಡುವಿನ ರಣಜಿ ಪಂದ್ಯದಲ್ಲಿ ಆಡಲು ಆಗಮಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಅಕ್ಷಯ್ ಕೋಲಾರ ಅವರೇ ಆ ಆಟಗಾರ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕ್ರಿಕೆಟ್ ಆಟಗಾರರಾಗಿದ್ದ ದಿವಂಗತ ವೆಂಕಟೇಶ ಕುಲಕರ್ಣಿಯವರ ಪುತ್ರ ಈ ಅಕ್ಷಯ್. ಇವರ ತಾಯಿ ಶೋಭಾ ಕೋಲಾರ ಅವರು ಕೂಡ ಧಾರವಾಡದವರೇ.

ಹುಬ್ಬಳ್ಳಿ-ಧಾರವಾಡದಲ್ಲಿ ಇವರ ಮನೆತನದ ಹೆಸರು ಧುಮ್ಮವಾಡ ಎಂದೇ ಪರಿಚಿತ. 
`ನಮ್ಮ ಸಂಬಂಧಿಕರು  ಹುಬ್ಬಳ್ಳಿ, ಧಾರವಾಡ ಮತ್ತು ವಿಜಾಪುರದಲ್ಲಿ ಈಗಲೂ ಇದ್ದಾರೆ. ನನಗೂ ಕರ್ನಾಟಕದ ಪರಿಚಯ ಇದೆ. 1980ರಲ್ಲಿಯೇ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ನನ್ನ ತಂದೆ ನಾಗಪುರಕ್ಕೆ ಬಂದರು. ಆಗಲಿಂದ ನಮ್ಮ ಕುಟುಂಬ ಅಲ್ಲಿಯೇ ಇದೆ.

ನಾನು ಬೆಳೆದದ್ದು ಕೂಡ ಅಲ್ಲಿಯೇ. ನನ್ನ ತಂದೆ ಕ್ರಿಕೆಟ್ ಆಟಗಾರರಾಗಿದ್ದರು. ಅವರ ಪ್ರಭಾವದಿಂದ ನಾನು ಆರನೇ ವಯಸ್ಸಿನಲ್ಲಿಯೇ ಬ್ಯಾಟ್ ಹಿಡಿದೆ. ವಿದರ್ಭ ಕ್ರಿಕೆಟ್ ಸಂಸ್ಥೆ ನನಗೆ ಉತ್ತಮ ಪ್ರೋತ್ಸಾಹ ನೀಡಿದೆ.  ನನ್ನ ಅಣ್ಣ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿದ್ದು, ಅಮೆರಿಕದಲ್ಲಿದ್ದಾನೆ' ಎಂದು ಅಕ್ಷಯ್ ಅಚ್ಚ ಕನ್ನಡದಲ್ಲಿ `ಪ್ರಜಾವಾಣಿ'ಗೆ ವಿವರಿಸಿದರು.

2009ರಿಂದ ವಿದರ್ಭ ತಂಡದ ಆರಂಭಿಕ     ಬ್ಯಾಟ್ಸ್‌ಮನ್ ಆಗಿದ್ದಾರೆ. ಪ್ರಸಕ್ತ ಋತುವಿನ ಮೊದಲ ಐದು ಪಂದ್ಯಗಳಲ್ಲಿ ಇವರಿಗೆ ಅವಕಾಶ ಸಿಕ್ಕಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ರಂಜೀತ್ ಪರದ್ಕರ್ ಗಾಯಗೊಂಡು ತಂಡದಿಂದ ಹೊರಗುಳಿದ ಕಾರಣ ಅಕ್ಷಯ್ ಮತ್ತೆ ತಂಡಕ್ಕೆ ಮರಳಿದ್ದಾರೆ.
ಗುರುವಾರ ಬೆಳಿಗ್ಗೆ  ಗಂಗೋತ್ರಿ ಗ್ಲೇಡ್ಸ್‌ನ ಕೆಎಸ್‌ಸಿಎ ತರಬೇತಿ ಅಕಾಡೆಮಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.

ಕಳೆದ ಮೂರು ಋತುಗಳಲ್ಲಿ ಹತ್ತು ರಣಜಿ ಪಂದ್ಯಗಳು 14 ರಣಜಿ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪದಾರ್ಪಣೆ ಮಾಡಿದ ಋತುವಿನಲ್ಲಿಯೇ ರಾಜಸ್ತಾನದ ವಿರುದ್ಧ 84 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್. ರಣಜಿ ಪಂದ್ಯಗಳಲ್ಲಿ ಅವರು ಒಟ್ಟು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

ಕಳೆದ ವರ್ಷ ದಾರಾಶಾ ಟ್ರೋಫಿ ಟೂರ್ನಿಯಲ್ಲಿ ಆಡಲು ವಿದರ್ಭ ತಂಡದೊಂದಿಗೆ ಮೈಸೂರಿಗೆ ಬಂದಿದ್ದ ಅಕ್ಷಯ್, ಒಂದು ಭರ್ಜರಿ ಶತಕ ಮತ್ತು ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. 2010ರಲ್ಲಿ ದೇವಧರ್ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ  ಮಧ್ಯ ವಲಯ ತಂಡವನ್ನು ಪ್ರತಿನಿಧಿಸಿದ್ದರು.

`ಕಳೆದ ಬಾರಿ ಬಂದಾಗ ಉತ್ತಮ ಪ್ರದರ್ಶನ ನೀಡಿದ್ದೆ. ಮೈಸೂರು ಅರಮನೆ ಮತ್ತಿತರ ಪ್ರವಾಸಿ ತಾಣಗಳನ್ನು ನೋಡಿದ್ದೆ. ಬಹಳ ಅಂದದ ಊರು ಇದು. ಈ ಬಾರಿಯೂ ಕೆಲವು ಸ್ಥಳಗಳನ್ನು ನೋಡಬೇಕು ಎಂದುಕೊಂಡಿದ್ದೇವೆ. ಕರ್ನಾಟಕ ತಂಡದಲ್ಲಿ ಉತ್ತಮ ಆಟಗಾರರಿದ್ದು ಅವರ ಮುಂದೆ ಆಡುವುದೂ ಒಂದು ವಿಶಿಷ್ಟ ಅನುಭವ. ಉಳಿದ ಹಿರಿಯ ಆಟಗಾರರು ಸಾಕಷ್ಟು ಪ್ರೋತ್ಸಾಹವನ್ನು ನನಗೆ ನೀಡುತ್ತಿದ್ದಾರೆ' ಎಂದು ಅವರು ಹೇಳಿದರು.

ಮೈಸೂರಿಗೆ ಬಂದ ವಿನಯ್ ಬಳಗ
ಮೈಸೂರು:
`ದಾವಣಗೆರೆ ಎಕ್ಸ್‌ಪ್ರೆಸ್' ವಿನಯಕುಮಾರ್ ನಾಯಕತ್ವದ ಕರ್ನಾಟಕ ತಂಡವು ಗುರುವಾರ ಸಂಜೆ ಮೈಸೂರಿಗೆ ಆಗಮಿಸಿತು.ಇಲ್ಲಿಯ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಶನಿವಾರ ವಿದರ್ಭ ವಿರುದ್ಧ ಆಡಲಿರುವ ಕರ್ನಾಟಕ ತಂಡವು ಬೆಂಗಳೂರಿನಿಂದ ಸಂಜೆ ಆಗಮಿಸಿತು.

ತರಬೇತುದಾರ ಅರುಣ್ ಕುಮಾರ್, ಕುನಾಲ್ ಕಪೂರ್ ಮತ್ತು ರೋನಿತ್ ಮೋರೆ ಹೊರತುಪಡಿಸಿ ಉಳಿದ ಆಟಗಾರರೆಲ್ಲರೂ ಆಗಮಿಸಿದ್ದಾರೆ. ಕೆಲವು ಆಟಗಾರರು ವಿಶ್ರಾಂತಿ ಪಡೆದರೆ,  ಇನ್ನುಳಿದವರು ವಾಯುವಿಹಾರ ನಡೆಸಿದರು.

ವಿದರ್ಭ ತಂಡದಲ್ಲಿ ಎರಡು ಬದಲಾವಣೆ
ವಿದರ್ಭ ತಂಡವು ಕರ್ನಾಟಕದ ವಿರುದ್ಧ ಆಡಲಿರುವ ಪಂದ್ಯದಲ್ಲಿ ಇಬ್ಬರು ಆಟಗಾರರನ್ನು ಬದಲಾವಣೆ ಮಾಡಲಿದೆ.ಗಾಯಗೊಂಡು ಹೊರಗುಳಿದಿರುವ ಉಪನಾಯಕ ರಂಜೀತ್ ಪರದ್ಕರ್ ಅವರ ಬದಲಿಗೆ ಅಕ್ಷಯ್ ಕೋಲಾರ್ ಮತ್ತು ವಿಕೆಟ್ ಕೀಪರ್ ಊರ್ವೇಶ್ ಪಟೇಲ್ ಬದಲಿಗೆ ಬ್ಯಾಟ್ಸ್‌ಮನ್ ರವಿ ಠಾಕೂರ್ ಸ್ಥಾನ ಪಡೆದ್ದಾರೆ. ಅಮೋಲ್ ಉಬರಾಂದೆ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT