ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಾಯ ಹೇಳಲು ಲಂಡನ್ ಸಿದ್ಧತೆ...

Last Updated 11 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಎಪಿ): ಹದಿನೈದು ದಿನಗಳಿಂದ ಜಾಗತಿಕ ಕ್ರೀಡಾಲೋಕದಲ್ಲಿ ಮಿಂಚು ಹರಿಸಿದ ಲಂಡನ್ ಒಲಿಂಪಿಕ್ಸ್‌ಗೆ ವಿದಾಯ ಹೇಳುವ ಸಮಯ ಬಂದಿದೆ. ಕ್ರೀಡಾ ಪ್ರೇಮಿಗಳ ಮನಸ್ಸು ಹಾಗೂ ಹೃದಯವನ್ನು ತನ್ನತ್ತ ಸೆಳೆದಿಟ್ಟುಕೊಂಡಿದ್ದ ಒಲಿಂಪಿಕ್ಸ್‌ಗೆ ಭಾನುವಾರ ರಾತ್ರಿ ತೆರೆ ಬೀಳಲಿದೆ.

`ಉದ್ಘಾಟನಾ ಸಮಾರಂಭ ಮದುವೆ ಎನಿಸಿದರೆ, ಮುಕ್ತಾಯ ಸಮಾರಂಭ ಮದುವೆಯ ಆರತಕ್ಷತೆ ಆಗಿರಲಿದೆ~ ಎಂದು ಕಾರ್ಯಕ್ರಮದ ಸಂಗೀತ ನಿರ್ದೇಶಕ ಡೇವಿಡ್ ಆರ್ನಾಲ್ಡ್ ಬಣ್ಣಿಸಿದ್ದಾರೆ. ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಗ್ರೇಟ್ ಬ್ರಿಟನ್‌ನ ಗಾನಸುಧೆಯ ಇತಿಹಾಸ ಅನಾವರಣಗೊಳ್ಳಲಿದೆ. ಬೇರೆ ಯಾವುದೇ ದೇಶ ಸಂಗೀತದಲ್ಲಿ ಕ್ಷೇತ್ರದಲ್ಲಿ ಇಷ್ಟೊಂದು ಹೆಸರು ಹಾಗೂ ಇತಿಹಾಸ ಹೊಂದಿಲ್ಲ. ಹಾಗಾಗಿ ಕ್ರೀಡಾ ಪ್ರೇಮಿಗಳನ್ನು ಗಾನಸುಧೆಯಲ್ಲಿ ತೇಲಿಸಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.

ಬ್ರಿಟಿಷ್ ಪಾಪ್ ಗಾಯಕರು ಹಾಗೂ ಸ್ಟೈಸ್ ಗರ್ಲ್‌ಗಳು ಸೇರಿದಂತೆ ಹಲವರು ಒಲಿಂಪಿಕ್ ಪಾರ್ಕ್‌ನಲ್ಲಿರುವ ಮುಖ್ಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಲಂಡನ್‌ನ ಐತಿಹಾಸಿಕ ಗುರುತುಗಳಾದ ಟೋವರ್ ಬ್ರಿಜ್ ಹಾಗೂ ಲಂಡನ್‌ನ ಐ ಅಂಡ್ ಸೇಂಟ್ ಪಾಲ್ ಕ್ಯಾಥೆಡ್ರಲ್, ಕ್ರೀಡಾಂಗಣದೊಳಗೆ ಮತ್ತೊಮ್ಮೆ ನಿರ್ಮಾಣವಾಗಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಗ್ರೇಟ್ ಬ್ರಿಟನ್‌ನ ಗ್ರಾಮೀಣ ಸೊಗಡಿನ ಚಿತ್ರಣವನ್ನು ತೋರಿಸಲಾಗಿತ್ತು. ಆದರೆ ಮುಕ್ತಾಯ ಸಮಾರಂಭದಲ್ಲಿ ಆಧುನಿಕ ಗ್ರೇಟ್ ಬ್ರಿಟನ್‌ನ ಚಿತ್ರಣವನ್ನು ಮುಂದಿಡಲು ಸಂಘಟಕರು ನಿರ್ಧರಿಸಿದ್ದಾರೆ. ಇದನ್ನು ಕೂಡ ಗೋಪ್ಯವಾಗಿಡಲು ಸಂಘಟಕರು ನಿರ್ಧರಿಸಿದ್ದರೂ ಕೆಲ ವಿಷಯಗಳು ಬಹಿರಂಗವಾಗಿವೆ.

`ಕಳೆದ ಕೆಲ ದಶಕಗಳ ಬ್ರಿಟಿಷ್ ಸಂಗೀತಕ್ಕೆ ಗೌರವ ಸೂಚಿಸುವ ಕಾರ್ಯಕ್ರಮವಿದು~ ಎಂದು ಕ್ರೀಡಾಕೂಟದ ಮುಖ್ಯಸ್ಥ ಸೆಬಾಸ್ಟಿಯನ್ ಕೋ ನುಡಿದಿದ್ದಾರೆ. ಆದರೆ ಉದ್ಘಾಟನಾ ಸಮಾರಂಭದಷ್ಟು ಅದ್ದೂರಿಯಾಗಿ ಇರಲಾರದು.

2016ರ ಒಲಿಂಪಿಕ್ಸ್ ಆಯೋಜಿಸಲಿರುವ ಬ್ರೆಜಿಲ್ ಕೂಡ ಎಂಟು ನಿಮಿಷಗಳ ಕಾರ್ಯಕ್ರಮ ನಡೆಸಿಕೊಡಲಿದೆ. ಹಾಗಾಗಿ ಈ ದೇಶದ ಸಾಂಬಾ ನೃತ್ಯವನ್ನು ಕಣ್ಣು ತುಂಬಿಕೊಳ್ಳಬಹುದು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ದೇಶಗಳ ಅಥ್ಲೀಟ್‌ಗಳು ಪ್ರತ್ಯೇಕವಾಗಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಆದರೆ ವಿದಾಯ ಸಮಾರಂಭದಲ್ಲಿ ಎಲ್ಲರೂ ಒಂದುಗೂಡಿ ಪಥಸಂಚಲನ ನಡೆಸಲಿದ್ದಾರೆ. ಪ್ರತಿ ದೇಶದ ಧ್ವಜಧಾರಿಗಳು ಆ ತಂಡವನ್ನು ಮುನ್ನಡೆಸಲಿದ್ದಾರೆ. `ನಾವೆಲ್ಲರೂ ಒಂದೇ~ ಎಂಬುದನ್ನು ಸಾರುವುದು ಇದರ ಉದ್ದೇಶ.

ಒಲಿಂಪಿಕ್ಸ್ ಜನಿಸಿದ ಗ್ರೀಸ್‌ನ ಧ್ವಜ, ಈ ಬಾರಿ ಕೂಟ ಆಯೋಜಿಸಿದ ಗ್ರೇಟ್ ಬ್ರಿಟನ್ ಧ್ವಜ ಹಾಗೂ 2016ರಲ್ಲಿ ಕೂಟ ಆಯೋಜಿಸಲಿರುವ ಬ್ರೆಜಿಲ್‌ನ ಧ್ವಜಾರೋಹಣ ಮಾಡಲಾಗುತ್ತದೆ. ಈ ದೇಶಗಳ ರಾಷ್ಟ್ರಗೀತೆ ನುಡಿಸಿದ ಬಳಿಕ ಧ್ವಜವನ್ನು ಕೆಳಗಿಳಿಸಲಾಗುತ್ತದೆ.

ಲಂಡನ್‌ನ ಮೇಯರ್ ಒಲಿಂಪಿಕ್ ಧ್ವಜವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಜಾಕ್ ರೋಗ್‌ಗೆ ಹಸ್ತಾಂತರಿಸಲಿದ್ದಾರೆ. ಅದನ್ನು ಅವರು ರಯೋ ಡಿ ಜನೈರೊದ ಮೇಯರ್‌ಗೆ ನೀಡಲಿದ್ದಾರೆ. ಬಳಿಕ ಕ್ರೀಡಾಕೂಟ ಮುಗಿಯಿತು ಎಂದು ರೋಗ್ ಘೋಷಿಸಲಿದ್ದಾರೆ. ಆ ನಂತರ ಕ್ರೀಡಾ ಜ್ಯೋತಿಯನ್ನು ನಂದಿಸಲಾಗುತ್ತದೆ.

ಅಥ್ಲೀಟ್‌ಗಳು ಹಾಗೂ ಕ್ರೀಡಾ ಪ್ರೇಮಿಗಳ ಮನಸ್ಸು ಹಾಗೂ ಹೃದಯದಲ್ಲಿ ಉಳಿಯುವುದು ನೆನಪು ಮಾತ್ರ.
ಇನ್ನು 2016ರ ರಯೋ ಡಿ ಜನೈರೊ ಒಲಿಂಪಿಕ್ಸ್‌ಗೆ ದಿನಗಣನೆ ಶುರು....



ಒಲಿಂಪಿಕ್ಸ್ ಮುಕ್ತಾಯಕ್ಕೆ ಕ್ಷಣಗಣನೆ
* ಭಾರತೀಯ ಕಾಲಮಾನ 1.30ಕ್ಕೆ ಕಾರ್ಯಕ್ರಮ ಶುರು
* ಎರಡೂವರೆ ಗಂಟೆ ಕಾರ್ಯಕ್ರಮ
* ಆಧುನಿಕ ಗ್ರೇಟ್ ಬ್ರಿಟನ್‌ನ ಚಿತ್ರಣ ನೀಡಲಿರುವ ಕಾರ್ಯಕ್ರಮ
* ಸಂಗೀತಕ್ಕೆ ಹೆಚ್ಚಿನ ಒತ್ತು
* 2016ರ ಒಲಿಂಪಿಕ್ಸ್ ಆಯೊಜಿಸಲಿರುವ ಬ್ರೆಜಿಲ್‌ನಿಂದ ಸಾಂಬಾ ನೃತ್ಯ
* ಬಳಿಕ ರಯೋ ಡಿ ಜನೈರೊ ಮೇಯರ್‌ಗೆ ಒಲಿಂಪಿಕ್ಸ್ ಧ್ವಜ ಹಸ್ತಾಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT