ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಿತ್‌ಗೆ ಆಘಾತ ನೀಡಿದ ಗ್ರೋವರ್‌

ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೊಜಾಯೆಲಿ, ಟರ್ಕಿ (ಪಿಟಿಐ): ಗ್ರ್ಯಾಂಡ್‌­ಮಾಸ್ಟರ್‌ ಸಹಜ್‌ ಗ್ರೋವರ್‌ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ ಷಿಪ್‌ನ ಕುತೂಹಲಕಾರಿ ಪೈಪೋಟಿಯಲ್ಲಿ ತಮ್ಮ ದೇಶದವರೇ ಆದ ವಿದಿತ್‌ ಗುಜರಾತಿಗೆ ಆಘಾತ ನೀಡಿದರು.

ಆರನೇ ಸುತ್ತಿನ ಪಂದ್ಯದಲ್ಲಿ ಈ ಗೆಲುವಿನ ಮೂಲಕ ಪೂರ್ಣ ಪಾಯಿಂಟ್‌ ಸಂಪಾದಿಸಿದ ಗ್ರೋವರ್‌ ಜಂಟಿ ಎರಡನೇ ಸ್ಥಾನಕ್ಕೆ ಜಿಗಿದರು. ಅವರ ಬಳಿ ಈಗ ಐದು ಪಾಯಿಂಟ್‌ ಗಳಿವೆ. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಸೋಲು ಕಂಡಿದ್ದರು.

10 ವರ್ಷದೊಳಗಿನವರ ವಿಭಾಗದಲ್ಲಿ ಒಮ್ಮೆ ವಿಶ್ವ ಚಾಂಪಿಯನ್‌ ಆಗಿದ್ದ ಗ್ರೋವರ್‌ ಈ ಪಂದ್ಯದಲ್ಲಿ ಬಿಳಿಯ ಕಾಯಿಗಳಿಂದ ಆಡಿದರು. ಅವರು ನಿಮ್ಜೊ ಇಂಡಿಯನ್‌ ಡಿಫೆನ್ಸ್‌ ಆಟದ ಮೂಲಕ ವಿದಿತ್‌ ಮೇಲೆ ಒತ್ತಡ ಹೇರಿದರು.

ಐದನೇ ಸುತ್ತಿನ ಅಂತ್ಯಕ್ಕೆ ಜಂಟಿ ಅಗ್ರಸ್ಥಾನದಲ್ಲಿದ್ದ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಪಿ.ಸೇತುರಾಮನ್‌ ಗುರುವಾರ ಆಘಾತ ಅನುಭವಿಸಿದರು. ಅವರು ಚೀನಾದ ಯು ಯಾಂಗಿ ಎದುರು ಪರಾಭವಗೊಂಡರು. ಈ ಮೂಲಕ ಯಾಂಗಿ 5.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ದೆಬಾಸಿಸ್‌ ದಾಸ್‌ ಕೂಡ 5 ಪಾಯಿಂಟ್‌ ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಅವರು ಉಜ್ಬೆಕಿಸ್ತಾನದ ಜಹಂಗಿರ್‌ ವಾಖಿಡೋವ್‌ ಎದುರು ಗೆದ್ದರು. ದೆಬಾಸಿಸ್‌ ಈಗ ಗ್ರ್ಯಾಂಡ್‌ಮಾಸ್ಟರ್‌ ಪದವಿ ಪಡೆಯುವ ಸನಿಹದಲ್ಲಿದ್ದಾರೆ. ಅದಕ್ಕಾಗಿ ಅವರು 2500 ಪಾಯಿಂಟ್‌ ಗೆರೆ ಮುಟ್ಟಬೇಕು.

ಬಾಲಕಿಯರ ವಿಭಾಗದಲ್ಲಿ ಭಾರತದ ರುಚಾ ಪೂಜಾರಿ ಹಾಗೂ ಪದ್ಮಿನಿ ರಾವತ್‌ ನಡುವಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಈ ಇಬ್ಬರೂ ಆಟಗಾರ್ತಿಯರು ತಲಾ ನಾಲ್ಕು ಪಾಯಿಂಟ್‌ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT