ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ: ಸಂಕ್ಷಿಪ್ತ ಸುದ್ದಿ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂದಿನ ವಾರ ಭಾರತಕ್ಕೆ ಡೊನಿಲಿನ್
ವಾಷಿಂಗ್ಟನ್(ಪಿಟಿಐ): ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ನಡುವಣ ಮಾತುಕತೆ, ಒಪ್ಪಂದಗಳಲ್ಲಿ ಆಗಿರುವ ಪ್ರಗತಿಯ ಕುರಿತು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಥಾಮಸ್ ಇ ಡೊನಿಲಿನ್ ಅವರು ಶಿವಶಂಕರ ಮೆನನ್ ಸೇರಿದಂತೆ ಭಾರತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ  ಎಂದು ಶ್ವೇತ ಭವನ ಬುಧವಾರ ಪ್ರಕಟಿಸಿದೆ.

ಡೊನಿಲಿನ್ ನೇತೃತ್ವದ ನಿಯೋಗ ಭಾರತಕ್ಕೆ ಬರುವ ಮೊದಲು ಚೀನಾ ಪ್ರವಾಸವನ್ನು ಕೈಗೊಳ್ಳಲಿದ್ದು ಅಲ್ಲಿನ ಪ್ರಮುಖ ನಾಯಕರ ಜತೆ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದೆ ಎನ್ನಲಾಗಿದೆ.

ಕುರ್ದಿಷ್ ಬಂಡುಕೋರರಿಂದ 24 ಟರ್ಕಿ ಸೈನಿಕರ ಹತ್ಯೆ

ಅಂಕಾರ (ಎಎಫ್‌ಪಿ): ಟರ್ಕಿಯ ವಾಯವ್ಯ ಪ್ರದೇಶದಲ್ಲಿ ಕುರ್ದಿಷ್ ಬಂಡುಕೋರರು ಎರಡು ದಿನಗಳ ಅಂತರದಲ್ಲಿ 24 ಟರ್ಕಿ ಸೈನಿಕರನ್ನು ಕೊಂದು ಹಾಕಿದ್ದಾರೆ.

ಕುಕುರ್ಕಾ ಮತ್ತು ಇರಾಕ್ ಗಡಿಯಲ್ಲಿರುವ ಹಕ್ಕಾರಿ ಪ್ರಾಂತ್ಯದ ಯುಕ್ಸೆಕೋವಾಗಳ ವಿವಿಧ ಸ್ಥಳಗಳಲ್ಲಿ ಬಂಡುಕೋರರು 18 ದಾಳಿಗಳನ್ನು ನಡೆಸಿದ್ದಾರೆ.

ಭದ್ರತಾ ಮಂಡಳಿಯಲ್ಲಿ ಸ್ಥಾನ: ಪಾಕ್‌ಗೆ ಚೀನಾ ಬೆಂಬಲ
ಬೀಜಿಂಗ್ (ಐಎಎನ್‌ಎಸ್): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಬೇಕೆಂಬ ಪಾಕಿಸ್ತಾನದ ಹಂಬಲಕ್ಕೆ ಚೀನಾ ಬೆಂಬಲ ಸೂಚಿಸಿದೆ.

ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸ್ಥಾನ ಕಲ್ಪಿಸಬೇಕೆಂಬ ಪಾಕಿಸ್ತಾನದ ಮನವಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್ ಯು ಬುಧವಾರ ಇಲ್ಲಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿರುವುದರಿಂದ ಅದರ ಬೇಡಿಕೆಯನ್ನು ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ.

ಭಾರತಕ್ಕೆ ಅಮೆರಿಕದ ಕಲಾವಿದರು
ವಾಷಿಂಗ್ಟನ್ (ಐಎಎನ್‌ಎಸ್): ದೃಶ್ಯ ಮಾಧ್ಯಮದ ಮುಖಾಂತರ ಎರಡು ದೇಶಗಳ ಜನರ ನಡುವೆ ಬಾಂಧವ್ಯ ಗಟ್ಟಿಗೊಳಿಸುವ ಅಮೆರಿಕದ `ಸ್ಮಾರ್ಟ್ ಪವರ್ ಡಿಪ್ಲೊಮಸಿ~ ಯೋಜನೆಯ ಅಂಗವಾಗಿ 15ಕ್ಕೂ ಹೆಚ್ಚು ಅಮೆರಿಕಾ ಕಲಾವಿದರ ತಂಡವು ಭಾರತಕ್ಕೆ ಮುಂದಿನ ವರ್ಷ ಭೇಟಿ ನೀಡಲಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದ ಶಿಕ್ಷಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ವಿಭಾಗ ಹಾಗೂ ಬ್ರೊಂಕ್ಸ್ ಕಲಾ ಸಂಗ್ರಹಾಲಯ ಮಂಗಳವಾರ ಈ ವಿಷಯ ಪ್ರಕಟಿಸಿದೆ.

ಸೇನಾ ವಿಮಾನ ಅಪಘಾತ: ಆರು ಸಾವು
ಕಠ್ಮಂಡು (ಪಿಟಿಐ): ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿದ್ದ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಆರು ಜನ ಮೃತಪಟ್ಟಿರುವ ಘಟನೆ ನೇಪಾಳದ ಪಶ್ಚಿಮ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.

ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮಂಗಳವಾರ ವಿಮಾನವು ತೆರಳಿದ ನಂತರ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದುಕೊಂಡಿತು. ಆರು ಜನರ ಪೈಕಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ರಾಜಧಾನಿ ಕಠ್ಮಂಡುವಿನಿಂದ 300 ಕಿ.ಮೀ. ದೂರದಲ್ಲಿರುವ ಬಗ್‌ಲುಂಗ್ ಜಿಲ್ಲೆಯ ಬೊವಾಂಗ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ವಿಮಾನ ದುರ್ಘಟನೆಗೆ ಈಡಾಗಿದ್ದು, ವಿಮಾನವು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ನೇಪಾಳದ ಸೇನಾ ಮೂಲಗಳು ತಿಳಿಸಿವೆ.

ಭಾರತದಲ್ಲಿ ಕಲಿತದ್ದೇ ಹೆಚ್ಚು: ನೇಪಾಳ ಪ್ರಧಾನಿ
ಕಠ್ಮಂಡು (ಪಿಟಿಐ): ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಭಾರತದಲ್ಲಿ ಪ್ರಾಥಮಿಕ ತರಬೇತಿ ಪಡೆದಿರುವ ನೇಪಾಳದ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಅವರು,  ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯಿಂದ ಸಾಕಷ್ಟು ವಿಷಯಗಳನ್ನು ಕಲಿತಿರುವುದಾಗಿ ಹೇಳುವ ಮೂಲಕ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಭಾರತದ ಶಿಕ್ಷಣ ವ್ಯವಸ್ಥೆಯಿಂದ ಅದರಲ್ಲೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿದ್ದಾಗ ಅನೇಕ ಹೊಸ ಅಂಶಗಳನ್ನು ಕಲಿತುಕೊಂಡಿರುವುದಾಗಿ ತಮ್ಮ ನವದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT