ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಸಂಕ್ಷಿಪ್ತ ಸುದ್ದಿಗಳು

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಚಂದ್ರನಲ್ಲಿ ನೀರು: ಸೌರಗಾಳಿ ಕಾರಣ~
ವಾಷಿಂಗ್ಟನ್ (ಪಿಟಿಐ): ಅನೇಕ ಶತಮಾನಗಳಿಂದ ಕುತೂಹಲದ ಕೇಂದ್ರವಾಗಿರುವ ಚಂದ್ರನಲ್ಲಿ ಕಂಡುಬಂದ ನೀರಿನ ಸೆಲೆಯ ಕುರುಹುಗಳ ರಹಸ್ಯವನ್ನು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇದಿಸಿದ್ದಾರೆ. ನಿರಂತರವಾಗಿ ಸೌರಗಾಳಿಯಿಂದ ಹೊರಹೊಮ್ಮುವ ಜಲಜನಕದ ಕಣಗಳು ಚಂದ್ರನ ಮೇಲ್ಮೈಯ ನೀರಿನ ಅಂಶಗಳಿಗೆ ಕಾರಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕನಿಷ್ಕ: ಶಿಕ್ಷೆ ಕೈಬಿಡಲು ಮನವಿ
ಟೊರಾಂಟೊ (ಪಿಟಿಐ): ಏರ್ ಇಂಡಿಯಾ ವಿಮಾನ `ಕನಿಷ್ಕಾ~ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿರುವ ಏಕೈಕ ಆರೋಪಿ ಇಂದ್ರಜಿತ್ ಸಿಂಗ್ ರೆಯಾತ್ ಎಂಬಾತ ಸುಳ್ಳುಸಾಕ್ಷ್ಯ ಹೇಳಿದ ಆರೋಪದ ಮೇಲೆ ತನಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಕೆನಡಾ ಸುಪ್ರೀಂ   ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ.

1985ರಲ್ಲಿ ನಡೆದ ಈ ಸ್ಫೋಟ ಪ್ರಕರಣದಲ್ಲಿ 329 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಈತನಿಗೆ ಸುಳ್ಳುಸಾಕ್ಷ್ಯ ಹೇಳಿದ ಆರೋಪದ ಮೇಲೆ  2010ರ ಸೆಪ್ಟೆಂಬರ್‌ನಲ್ಲಿ ಶಿಕ್ಷೆ ವಿಧಿಸಲಾಗಿತ್ತು. ನಂತರದಲ್ಲಿ 9 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

2003ರಲ್ಲಿ ನಡೆದ ವಿಚಾರಣೆ ವೇಳೆ 19 ಬಾರಿ ಸುಳ್ಳು ಹೇಳಿದ ಆರೋಪ ಈತನ ಮೇಲಿದೆ.

`ಮ್ಯಾಜಿಕ್ ಬುಲೆಟ್~ ಕ್ಷಿಪಣಿ
ವಾಷಿಂಗ್ಟನ್ (ಪಿಟಿಐ): `ಅಲ್ ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್‌ನ ಅಡಗುದಾಣದ ಮೇಲೆ ದಾಳಿ ನಡೆಸಲು ಅಮೆರಿಕವು ಆಗತಾನೇ ಅಭಿವೃದ್ಧಿಪಡಿಸಿದ `ಮ್ಯಾಜಿಕ್   ಬುಲೆಟ್~ ಕ್ಷಿಪಣಿ ಬಳಸುವ ಬಗ್ಗೆ ವಿಚಾರ ಮಾಡಿತ್ತು~ ಎನ್ನುವ ಅಂಶವನ್ನು ಮಾರ್ಕ್ ಬೌಡೆನ್ ಬರೆದಿರುವ `ದಿ ಫಿನಿಷ್: ದಿ ಕಿಲ್ಲಿಂಗ್ ಆಫ್ ಒಸಾಮ ಬಿನ್ ಲಾಡೆನ್~ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

ಮೊಣಕೈ ಗಾತ್ರದ ಈ ಕ್ಷಿಪಣಿಯನ್ನು ರೇಥಿಯಾನ್  ಜಿಪಿಎಸ್ ಅಭಿವೃದ್ಧಿಪಡಿಸಿದ್ದು, ಇದನ್ನು ಚಿಕ್ಕ ಡ್ರೋಣ್‌ಗೆ ಅಳವಡಿಸಬಹುದು.

ಇದನ್ನು ಬಳಸುವುದರ ಬಗ್ಗೆ ಬರಾಕ್ ಒಬಾಮ ಅವರಿಗೆ ಸಲಹೆ ಮಾಡಿದ್ದು ಅಂದಿನ ಸೇನಾಪಡೆ ಜಂಟಿ ಮುಖ್ಯಸ್ಥರ ಸಮಿತಿ ಉಪಾಧ್ಯಕ್ಷ ಜೇಮ್ಸ ಕಾರ್ಟ್‌ರೈಟ್.

ಈ ಕ್ಷಿಪಣಿಯು ಒಬ್ಬ ವ್ಯಕ್ತಿಯನ್ನು ಅಥವಾ ಒಂದು ವಾಹನವನ್ನು ಅದರ ಸಮೀಪದ ಇತರ ವಸ್ತುಗಳಿಗೆ ಹಾನಿ ಮಾಡದೇ ಗುರಿಮಾಡಬಲ್ಲದು ಎಂದು ಕಾರ್ಟ್‌ರೈಟ್ ತಿಳಿಸಿದ್ದರು. ಅಬೋಟಾಬಾದ್‌ನಲ್ಲಿ ಲಾಡೆನ್ ಅಡಗುದಾಣದ ಮೇಲೆ ದಾಳಿ ನಡೆಸುವಂತೆ ಒಬಾಮ ಆದೇಶ ನೀಡುವ ಕೆಲವೇ ದಿನಗಳ ಮುನ್ನ ಈ ಹೊಸ ತಂತ್ರಜ್ಞಾನವನ್ನು ದಾಳಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು.

ಮೆಕ್ಸಿಕೊದಲ್ಲಿ ಪತ್ರಕರ್ತನ ಹತ್ಯೆ
ತಿಜುವಾನಾ/ ಮೆಕ್ಸಿಕೊ (ಐಎಎನ್‌ಎಸ್/ಇಎಫ್‌ಇ): ಪತ್ರಕರ್ತನೊಬ್ಬನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಸೋಮವಾರ ಇಲ್ಲಿ ನಡೆದಿದೆ.

ವೆಬ್‌ಸೈಟ್‌ವೊಂದರ ಸಂಪಾದಕ ಮತ್ತು ಛಾಯಾಗ್ರಾಹಕ ರಾಮೊನ್ ಅಬೆಲ್ ಲೊಪೆಜ್ ಅಗ್ವಿಲರ್ (53) ಎಂಬುವವರೇ ಹತ್ಯೆಯಾದವರು. ಇಲ್ಲಿ 2000ನೇ ಇಸ್ವಿಯಿಂದ ಇಲ್ಲಿಯವರೆಗೆ 80 ಪತ್ರಕರ್ತರು ಹತ್ಯೆಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT