ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಿದೇಶಗಳಲ್ಲಿ ಕನ್ನಡ ಬೆಳೆಸಲು ನೆರವು ನೀಡಿ'

ಮನೆಯಂಗಳದ ಮಾತುಕತೆಯಲ್ಲಿ ಲಿಂಗಣ್ಣ ಮನವಿ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಬೆಂಗಳೂರು: `ಹೊರ ದೇಶಗಳಲ್ಲೂ ಕನ್ನಡ ಬೆಳೆಯಲು ರಾಜ್ಯ ಸರ್ಕಾರ ಅಲ್ಲಿನ ಗ್ರಂಥಾಲಯಗಳಿಗೆ, ಸಂಘ ಸಂಸ್ಥೆಗಳಿಗೆ ಪುಸ್ತಕಗಳನ್ನು ಒದಗಿಸಬೇಕು' ಎಂದು ಏಷಿಯಾ ಫೆಸಿಫಿಕ್ ಕನ್ನಡ ಒಕ್ಕೂಟದ ಸಂಸ್ಥಾಪನಾ ಅಧ್ಯಕ್ಷ ಡಾ.ಲಿಂಗಣ್ಣ ಕಲಬುರ್ಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ' ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಕೆಲಸಕ್ಕೆ ತಕ್ಕಂತೆ ಫಲಿತಾಂಶವು ಇರಬೇಕು. ಹೊರ ದೇಶಗಳಲ್ಲಿ ಕನ್ನಡ ಬೆಳೆಯಲು ಸರ್ಕಾರವು ಕೂಡ ಮುತುವರ್ಜಿ ವಹಿಸಬೇಕು. ಅಲ್ಲಿನ ಕನ್ನಡ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹವನ್ನು ನೀಡಬೇಕು' ಎಂದರು.

`ಎಲ್ಲರೂ ಬಯಸುವುದು ಸಮಾಜದ ಏಳಿಗೆಯನ್ನು. ಆದರೆ, ಒಂದು ಕೈ ಅಥವಾ ಎರಡು ಕೈಯಿಂದ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲರ ಸಹಕಾರ ಬೇಕಾಗುತ್ತದೆ. ನನಗೆ ಹೊರ ದೇಶಗಳಲ್ಲಿರುವ ಕನ್ನಡಿಗರ ಪ್ರೋತ್ಸಾಹದಿಂದಲೇ ಈ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ' ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

`ನ್ಯೂಜಿಲೆಂಡ್ ಸರ್ಕಾರ ನನಗೆ ನೀಡಿದ ಜಸ್ಟೀಸ್ ಆಫ್ ಪೀಸ್ ಮತ್ತು ಕ್ವೀನ್ಸ್ ಅವಾರ್ಡ್‌ಗಳಿಗಿಂತ ಇಲ್ಲಿ ನನ್ನ ಜನರ ಮಧ್ಯೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸನ್ಮಾನವನ್ನು ಸ್ವೀಕರಿಸುತ್ತಿರುವುದು ನನಗೆ ಸಂತಸ ತಂದಿದೆ' ಎಂದರು.`ನ್ಯೂಜಿಲೆಂಡ್‌ನ ಜನ ಮತ್ತು ಅಲ್ಲಿನ ಸರ್ಕಾರವು ಯಾವುದೇ ಕೆಲಸ ಕಾರ್ಯಗಳಿಗೆ ಸನ್ಮಾನವನ್ನು ಮಾಡುವುದಿಲ್ಲ. ಅವರು ತೋರಿಸುವ ವಿಶ್ವಾಸವೇ ಗೌರವವಾಗುತ್ತದೆ. ಅಲ್ಲಿನ ಜನರು ಮುಕ್ತ ಸ್ವಭಾವದವರು' ಎಂದರು.

`ನ್ಯೂಜಿಲೆಂಡ್‌ನ ಜನ ಸ್ವತಂತ್ರ ಪ್ರವೃತ್ತಿಯವರು. ಸರಳ ಜನರು. ಅಲ್ಲಿ ಸಾಧನೆ ಮಾಡಬೇಕೆಂದು ಬಯಸಿದವರು ಏನಾದರೂ ಸಾಧನೆ ಮಾಡಬಹುದು. ಏಕೆಂದರೆ, ಅಲ್ಲಿ ಸ್ವಚ್ಛವಾದ ಜನರು, ಸ್ವಚ್ಛವಾದ ಮನಸ್ಸುಗಳಿವೆ' ಎಂದರು.`ಏಷಿಯಾ ಫೆಸಿಫಿಕ್ ಕನ್ನಡ ಒಕ್ಕೂಟವು ಸಿಂಗಪುರ, ಮಲೇಷಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಹಾಂಕಾಂಗ್‌ನಲ್ಲಿ ಕನ್ನಡದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ದೀಪಾವಳಿ, ರಾಜ್ಯೋತ್ಸವ ಹಬ್ಬಗಳ ಆಚರಣೆಯನ್ನು ಕೂಡ ವಿಭಿನ್ನ ರೀತಿಯಲ್ಲಿ ಆಚರಿಸುತ್ತ ಬಂದಿದೆ' ಎಂದು ಹೇಳಿದರು.

`ನನ್ನ ಓದುವ ಆಸಕ್ತಿ ಬೆಳೆಯಲು ಮತ್ತು ನನ್ನ ಗ್ರಂಥಾಲಯ ವಿಜ್ಞಾನ ವ್ಯಾಸಂಗಕ್ಕೆ ಸ್ಫೂರ್ತಿಯಾದವರು ನನ್ನ ಚಿಕ್ಕಪ್ಪ ಎಂ.ಎಂ.ಕಲಬುರ್ಗಿ ಅವರು. ಅಧ್ಯಾಪಕರಾಗಿದ್ದ ಅವರು ಸದಾ ಓದುತ್ತಿದ್ದರು. ಅವರೇ ನನ್ನಲ್ಲಿ ಓದುವ ಮತ್ತು ತಿಳಿಯುವ ಕುತೂಹಲವನ್ನು ಬೆಳೆಸಿದವರು' ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT