ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದ ಸಂಕ್ಷೀಪ್ತ ಸುದ್ದಿಗಳು

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜಗಜಿತ್ ಸಿಂಗ್ ನಿಧನಕ್ಕೆ ಕಂಬನಿ
ಲಂಡನ್ (ಪಿಟಿಐ):
ಗಜಲ್ ಗಾಯಕ ಜಗಜಿತ್ ಸಿಂಗ್ ಅವರ ನಿಧನಕ್ಕೆ ಇಲ್ಲಿನ ಭಾರತೀಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರು ಇಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಾಗಲೆಲ್ಲ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಿದ್ದುದ್ದನ್ನು ಅವರ ಅಭಿಮಾನಿ ಲಾರ್ಡ್ ಸ್ವರಾಜ್ ಪಾಲ್ ಸ್ಮರಿಸಿದ್ದಾರೆ. ಈ ಹಿಂದೆ ಇಲ್ಲಿ ನಡೆದ  ಜಗಜಿತ್ ಸಿಂಗ್ ಗಾಯನ ಕಾರ್ಯಕ್ರಮವನ್ನು ಅವರು  ಉದ್ಘಾಟಿಸಿದ್ದರು.

`ಅವರ ಜನಪ್ರಿಯತೆಯು ಭೌಗೋಳಿಕ ಮತ್ತು ರಾಜಕೀಯದ ಗಡಿಯನ್ನೂ ಮೀರಿತ್ತು. ಅವರ ಹಠಾತ್ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ~ ಎಂದು ಅವರು ಶೋಕಿಸಿದ್ದಾರೆ.

ಪೋಲೆಂಡ್: ಪ್ರಧಾನಿ  ನೇತೃತ್ವದ ಪಕ್ಷಕ್ಕೆ ಅಧಿಕ ಸ್ಥಾನ
ವಾರ್ಸಾ (ಎಪಿ):
ಪೋಲೆಂಡ್ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಡೋನಾಲ್ಡ್ ಟಸ್ಕ್ ನೇತೃತ್ವದ ಸಿವಿಕ್ ಪ್ಲಾಟ್‌ಫಾರಂ ಪಕ್ಷವು ಅತ್ಯಧಿಕ ಸ್ಥಾನಗಳಿಸಿದೆ. ಆದರೆ, ಬಹುಮತ ಸಿಗದ ಕಾರಣ ಪ್ರಧಾನಿ ಡೋನಾಲ್ಡ್ ಸಮ್ಮಿಶ್ರ ಸರ್ಕಾರ ರಚನೆಗೆ ಮಿತ್ರ ಪಕ್ಷಗಳ ಬೆಂಬಲ ಕೋರಲು ಸಿದ್ಧತೆ ನಡೆಸಿದ್ದಾರೆ.

ಸಿವಿಕ್ ಪ್ಲಾಟ್‌ಫಾರಂ ಪಕ್ಷವು ಶೇ 93ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕೃತ ಚುನಾವಣಾ ಫಲಿತಾಂಶವು ಮಂಗಳವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಶಾಂತಿ ಮಾತುಕತೆ: ಸೌದಿ ಮಧ್ಯಸ್ಥಿಕೆಗೆ ತಾಲಿಬಾನ್ ಒಲವು
ಇಸ್ಲಾಮಾಬಾದ್ (ಪಿಟಿಐ):
ಸರ್ಕಾರ ಶಾಂತಿ ಮಾತುಕತೆ ನಡೆಸಲು ಬಯಸಿದಲ್ಲಿ ಸೌದಿ ಅರೇಬಿಯಾದಂತಹ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಬೇಕೆಂದು ತಮ್ಮ ತಂಡ ಬಯಸುವುದಾಗಿ ನಿಷೇಧಿತ ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ತಾನ್‌ನ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ.

`ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೇ? ಮಾತುಕತೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ನಮ್ಮ ಸಂಘಟನೆಯ ಮಂಡಳಿ ನಿರ್ಧರಿಸುತ್ತದೆ. ಆದರೆ ನಾವು ವಿಶ್ವಾಸವಿಟ್ಟಿರುವ ಸೌದಿ ಅರೇಬಿಯಾದಂತಹ ರಾಷ್ಟ್ರಗಳನ್ನೂ ಇದರಲ್ಲಿ ಭಾಗಿ ಮಾಡಿಕೊಳ್ಳಲು ನಾವು ಬಯಸುತ್ತೇವೆ~ ಎಂದು ಪಾಕಿಸ್ತಾನಿ ತಾಲಿಬಾನ್ ಕಮಾಂಡರ್ ಮೌಲ್ವಿ ರೆಹಮಾನ್ ಮೆಹ್ಸೂದ್ ಹೇಳಿದ್ದಾರೆ.

ಭಾರತೀಯನ ಸಾವು: ವ್ಯಕ್ತಿ ಬಂಧನ
ಪ್ಯಾರಿಸ್ (ಐಎಎನ್‌ಎಸ್):
ಮೆಟ್ರೊದಲ್ಲಿ ಕಿರುಕುಳ ಅನುಭವಿಸುತ್ತಿದ್ದ ಯುವ ಮಹಿಳೆಯ ರಕ್ಷಣೆಗೆ ಹೋಗಿ ಹೀರೊ ಎಂದು ಕರೆಸಿಕೊಂಡ 33 ವರ್ಷದ ಭಾರತೀಯನೊಬ್ಬನ ಸಾವಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಇಲ್ಲಿ ಬಂಧಿಸಲಾಗಿದೆ.

ಭಾರತದ ಪಂಜಾಬ್‌ನ ರಾಜಿಂದರ್ ಸಿಂಗ್ (33) ಅವರು ಸೆಪ್ಟೆಂಬರ್ 29 ರಂದು ಮೆಟ್ರೊ ರೈಲಿನ ಹಳಿ ಮೇಲೆ ಬಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರು. ಅವರನ್ನು 22 ವರ್ಷದ ಶಂಕಿತ ಆರೋಪಿ ತಳ್ಳಿದ ಎಂದು ಕೆಲ ಮೂಲಗಳು ಹೇಳಿವೆ.

ನಿಲ್ದಾಣದಲ್ಲಿ ಇಳಿದ ಬಳಿಕ ಗದ್ದಲದ ಸಂದರ್ಭದಲ್ಲಿ ಸಿಂಗ್ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರು ಎಂದು ಆರ್‌ಎಫ್‌ಐ ರೇಡಿಯೊ ವೆಬ್‌ಸೈಟ್ ವರದಿ ಮಾಡಿತು. ಫ್ರಾನ್ಸ್‌ನ ಪತ್ರಿಕೆಗಳು  ಸಿಂಗ್ ಅವರನ್ನು ಹೀರೊ ಎಂದು ಬಣ್ಣಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT