ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಗುಪ್ತಚರ ಸಂಸ್ಥೆಗಳಿಗೆ ಮೊರೆ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಖಚಿತ ಮಾಹಿತಿಯನ್ನು ಪಡೆಯಲು ತನಿಖಾ ಸಂಸ್ಥೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ.

ಸೆ.7ರಂದು ನಡೆದ ಸ್ಫೋಟದಲ್ಲಿ 13 ಜನ ಮೃತಪಟ್ಟಿದ್ದರು. ಘಟನೆ ಕುರಿತು ಆಗ್ನೇಯ ಏಷ್ಯಾದ ವಿದೇಶಿ ಗುಪ್ತಚರ ಸಂಸ್ಥೆಗಳ ನೆರವು ಕೇಳಲಾಗಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರೂ ವಿನಿಮಯ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿದೇಶಿ ಗುಪ್ತಚರ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ತನ್ಮೂಲಕ ಸ್ಫೋಟದ ಸಂಚಿನ ರೂವಾರಿಗಳನ್ನು ಪತ್ತೆ ಮಾಡಲಾಗುವುದು ಎಂದು ಶುಕ್ರವಾರ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದರು.

 ಈಗ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಿನದ 24 ಗಂಟೆ ಕಾಲ ಕಾರ್ಯನಿರ್ವಹಿಸುತ್ತಿದ್ದು, ಸೂಕ್ತ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ. 

 ಅದರ ಜತೆಗೆ ವಿಶ್ವದ ಇತರೇ ದೇಶಗಳ ಗುಪ್ತಚರ ಇಲಾಖೆಯ ನೆರವನ್ನೂ ಕೇಳಲಾಗಿದೆ. ವಿದೇಶಿ ಸಂಸ್ಥೆಗಳು ನೀಡುವ ಯಾವುದೇ ಮಾಹಿತಿಯನ್ನೂ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದರು.
ಇದುವರೆಗೆ ತನಿಖೆ ಸರಿ ದಿಕ್ಕಿನಲ್ಲಿಯೇ ನಡೆದಿದೆ. ಆದರೆ ಸಿಕ್ಕಿರುವ ಮಾಹಿತಿಯೇ ಅಂತಿಮ ಎಂದು ಪರಿಗಣಿಸುವಂತಿಲ್ಲ ಎಂದು ಸಚಿವರು ಹೇಳಿದ್ದರು.

ದೇಶದ ಒಳಗಿನ ಶಕ್ತಿಗಳು ಗಡಿಯಾಚೆಗಿನ ನೆರವು ಪಡೆದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆಯೇ ಎನ್ನುವ ಕುರಿತು ತನಿಖಾ ಸಂಸ್ಥೆಗಳು ವಿದೇಶಿ ಗುಪ್ತಚರ ಸಂಸ್ಥೆಗಳು, ಪ್ರಮುಖವಾಗಿ ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

 ಸ್ಫೋಟಕ್ಕೆ ಸಂಬಂಧಿಸಿದಂತೆ ಇ-ಮೇಲ್ ಕಳುಹಿಸಿ ಹೊಣೆ ಹೊತ್ತುಕೊಂಡ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿಚಾರಣೆ ಮುಂದುವರೆದಿದೆ.

ನಾಲ್ಕು ಇ-ಮೇಲ್‌ಗಳು: ಘಟನೆ ನಡೆದ ನಂತರ ಇದುವರೆಗೆ ನಾಲ್ಕು ಇ-ಮೇಲ್‌ಗಳು ಸ್ಫೋಟಕ್ಕೆ ಹೊಣೆ ಹೊತ್ತುಕೊಂಡಿವೆ. ಈ ಎಲ್ಲಾ ಇ-ಮೇಲ್‌ಗಳ ಮೂಲಗಳನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.

ಹುಜಿ ಭಯೋತ್ಪಾದನಾ ಸಂಸ್ಥೆ ಮೊದಲ ಇ-ಮೇಲ್ ಸಂದೇಶ ಕಳುಹಿಸಿ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು. ಎರಡು ಮತ್ತು ನಾಲ್ಕನೇ ಇ-ಮೇಲ್‌ಗಳನ್ನು ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಯವರು ಕಳುಹಿಸಿ ಹೊಣೆ ಹೊತ್ತುಕೊಂಡಿದ್ದರು.

ಮೂರನೇ ಇ-ಮೇಲ್ ದೆಹಲಿ ಪೊಲೀಸರಿಗೆ ಬಂದಿದ್ದು, ಅಹಮದಾಬಾದ್‌ನಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಒಡ್ಡಲಾಗಿದೆ. ನಂತರ ಗುಜರಾತ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇ-ಮೇಲ್ ಕಳುಹಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀದಲ್ಲಿ ಇದುವರೆಗೆ ಏಳು ಜನರನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಸೈಬರ್ ಕೆಫೆಯ ಇಬ್ಬರು ಮಾಲೀಕರು ಸೇರಿದಂತೆ ಮೂವರನ್ನು ಗುರುವಾರ ವಿಚಾರಣೆಗೆ ಒಳಪಡಿಸಲಾಗಿದೆ. ನಂತರ ಇನ್ನೂ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಇಬ್ಬರು ಶರಣಾಗಿರುವ ಉಗ್ರರಾಗಿದ್ದಾರೆ.

ವಿಚಾರಣೆಯನ್ನು ತೀವ್ರಗೊಳಿಸಿರುವ ಎನ್‌ಐಎ, ದಾಳಿಗೆ ಯಾವ ಭಯೋತ್ಪಾದಕ ಸಂಘಟನೆ ಕಾರಣ ಎನ್ನುವ ಕುರಿತು ಮಾಹಿತಿ ಕಲೆ ಹಾಕಲು ಇಪ್ಪತ್ತು ಜನರ ತಂಡವೊಂದನ್ನು ರಚಿಸಿದೆ.

ಸಿಸಿಟಿವಿ ದಾಖಲೆ ನೀಡುವಂತೆ ದೆಹಲಿಯ 700 ಹೋಟೆಲ್‌ಗಳನ್ನು ಕೇಳಲಾಗಿದ್ದು, ಇದರಿಂದ ಮಹತ್ವದ ಮಾಹಿತಿ ಲಭ್ಯವಾಗುವ ಸಾಧ್ಯತೆಗಳು ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT