ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿಯಮ ವಿಧಿಸಿ'

Last Updated 2 ಸೆಪ್ಟೆಂಬರ್ 2013, 19:38 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಜಾರಿಗೆ ತರಲು ಸರ್ಕಾರ ಕೆಲವು ನಿಯಮಗಳನ್ನು ವಿಧಿಸಬೇಕು' ಎಂದು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್. ವೇಣುಗೋಪಾಲ ಪ್ರತಿಪಾದಿಸಿದರು.

ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ `ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಅದರಿಂದಾಗುವ ಪರಿಣಾಮಗಳು' ಕುರಿತು ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ಯಾವ ಯಾವ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಅಗತ್ಯವಿದೆ ಎಂಬದನ್ನು ಸರ್ಕಾರ ಅರಿತು ಅದನ್ನು ಜಾರಿಗೆ ತರಬೇಕು. ಆಗ ದೇಶದ ಆರ್ಥಿಕತೆಗೆ ಯಾವುದೇ ನಷ್ಟವಾಗುವುದಿಲ್ಲ' ಎಂದರು.

`ನೇರ ಬಂಡವಾಳ ಹೂಡಿಕೆಯಿಂದ ಸರಕುಗಳು ಕಡಿಮೆ ಬೆಲೆಗೆ ಎಲ್ಲರಿಗೂ ದೊರೆಯವಂತಾಗುತ್ತವೆ. ಇದರಿಂದ, ಸೊಪ್ಪು, ತರಕಾರಿಯನ್ನು ರಿಲಯನ್ಸ್ ಫ್ರೆಶ್‌ನಲ್ಲಿ ಅಥವಾ ಬೀದಿ ಬದಿಯ ವ್ಯಾಪಾರಿಯಲ್ಲಿ ಕೊಳ್ಳಬೇಕು ಎಂಬ ವಿವೇಚನೆ ಜನರಿಗೆ ಬಿಟ್ಟಿದ್ದು' ಎಂದು ಹೇಳಿದರು.

`ಲಾಭವಾಗುವ ಕ್ಷೇತ್ರಗಳಲ್ಲಿ ಮಾತ್ರ ಬೇಕು ಎಂದು ನೀತಿಯನ್ನು ರೂಪಿಸಿದರೆ ಸರಿಯಾಗುವುದಿಲ್ಲ. ಬದಲಿಗೆ, ಪ್ರಯೋಗಾತ್ಮಕವಾಗಿಯಾದರೂ ಜಾರಿಗೆ ತರಬೇಕು' ಎಂದರು.

`ವಿದೇಶಿ ನೇರ ಬಂಡವಾಳ ಹೂಡಿಕೆ ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಅದನ್ನು ಸಮರ್ಪಕವಾಗಿ ಜಾರಿಗೆ ತರಬೇಕು' ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಸೀಮಾ ಮಾತನಾಡಿ, `ಯಾವುದೇ ವಿಚಾರ ಸಂಕಿರಣ ಅಥವಾ ಸಮ್ಮೇಳನಗಳಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಕಡಿಮೆಯಾಗಿದೆ. ದೇಶದ ಆರ್ಥಿಕತೆಯನ್ನು ಸುಭದ್ರಗೊಳಿಸಬೇಕಾದ  ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದ್ದು ಅಗತ್ಯವಾಗಿದೆ.  ಆದರೆ, ಅವರು ಆ ಸಮಯದ ಮನರಂಜನೆ ಬಯಸಿ ಇಂತಹ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ' ಎಂದು ವಿಷಾದಿಸಿದರು.

`ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು  ಒಳಗೊಂಡು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಬೆಳೆಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT