ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಯ ಮೇಲೆ ಹಲ್ಲೆ

Last Updated 14 ಡಿಸೆಂಬರ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಡ ಪಾವತಿ ಆಟೊ ಸೇವೆಯ (ಪ್ರೀಪೇಡ್‌) ಕೌಂಟರ್‌ನ ಕೆಲಸಗಾರರು ವಿದೇಶಿ­ಯರ ಪ್ರಾದೇಶಿಕ ನೋಂದಣಿ ಕಚೇ­ರಿಯ ಸಹಾಯಕ ಅಧಿಕಾರಿಯ (ಎಎಫ್‌­ಆರ್‌ಆರ್‌ಒ) ಮೇಲೆ ಹಲ್ಲೆ ನಡೆಸಿರುವ ಘಟನೆ ಯಶವಂತಪುರ ರೈಲು ನಿಲ್ದಾಣದ ಬಳಿ ಶನಿವಾರ ನಡೆದಿದೆ.

ಹಲ್ಲೆಗೊಳಗಾಗಿರುವ ಎಎಫ್‌ಆರ್‌­ಆರ್‌ಒ ಜನಾರ್ದನ ಝಳಕಿ ಅವರು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರೀಪೇಡ್‌ ಕೌಂಟರ್‌ನ ಕೆಲಸಗಾರರಾದ ಕೃಷ್ಣಪ್ಪ (40) ಮತ್ತು ಮೋಹನ್‌ (30) ಎಂಬುವರನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರಿನಿಂದ ರೈಲಿನಲ್ಲಿ ಬೆಳಿಗ್ಗೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿದ ಜನಾರ್ದನ ಅವರು ಕುರುಬರಹಳ್ಳಿಗೆ ಹೋಗಲು ಪ್ರೀಪೇಡ್‌ ನಿಲ್ದಾಣದಲ್ಲಿ ಆಟೊ ಬಾಡಿಗೆಗೆ ಪಡೆದಿದ್ದಾರೆ. ನಂತರ ಆಟೊ ಬಳಿ ಬಂದ ಅವರು ಮೀಟರ್ ಹಾಕುವಂತೆ ಚಾಲಕನಿಗೆ ಹೇಳಿದ್ದಾರೆ. ಚಾಲಕ, ಪ್ರೀಪೇಡ್‌ ಆಟೊವಾದ ಕಾರಣ ಮೀಟರ್‌ ಹಾಕುವಂತಿಲ್ಲ ಎಂದು ಅವರಿಗೆ ತಿಳಿ ಹೇಳಿದ್ದಾನೆ.

ಆದರೆ, ಮೀಟರ್ ಹಾಕಲೇಬೇ­ಕೆಂದು ಪಟ್ಟುಹಿಡಿದ ಜನಾರ್ದನ ಅವರು ಆಟೊದಿಂದ ಕೆಳಗಿಳಿದು ಕೌಂಟರ್‌ನ ಬಳಿ ಹೋಗಿ ಅಲ್ಲಿನ ಕೆಲಸ­ಗಾರರೊಂದಿಗೆ ಜಗಳವಾಡಿ­ದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿ ಕೃಷ್ಣಪ್ಪ ಮತ್ತು ಮೋಹನ್‌, ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಹರಿದು ವ್ಯಕ್ತಿ ಸಾವು
ವೈಟ್‌ಫೀಲ್ಡ್‌ ರಸ್ತೆಯಲ್ಲಿ ಶನಿವಾರ ಲಾರಿ ಮತ್ತು ಬೈಕ್‌ ನಡುವೆ ಸಂಭ­ವಿಸಿದ ಅಪಘಾತದಲ್ಲಿ ನಾಗರಾಜ್‌ (43) ಎಂಬುವರು ಸಾವನ್ನಪ್ಪಿದ್ದಾರೆ.
ಗರುಡಾಚಾರ್‌ಪಾಳ್ಯ ನಿವಾಸಿಯಾದ ನಾಗರಾಜ್‌, ಉದ್ಯಾನ ನಿರ್ವಹಣೆಯ (ಮಾಲಿ) ಕೆಲಸ ಮಾಡುತ್ತಿದ್ದರು.

ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿ­ದ್ದಾಗ ಲಾರಿ ಹಿಂದಿನಿಂದ ಡಿಕ್ಕಿ ಹೊಡೆ­ದಿದೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದ ಅವರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಂತರ ಚಾಲಕ ಪರಾರಿ­ಯಾ­ಗಿದ್ದು, ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೂರು ದಾಖಲಾಗಿದೆ.
ಅಗ್ನಿ ಅನಾಹುತ ಕಾಡುಗೋಡಿ ಸಮೀಪದ ಸೀಗೆಹಳ್ಳಿ­ಯಲ್ಲಿರುವ ಶೆಲ್‌ ಪೆಟ್ರೋಲ್‌ ಬಂಕ್‌ನ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಬಂಕ್‌ನ ಕಚೇರಿಯ ಒಳ ಭಾಗದಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಕಚೇರಿಯ ಪಕ್ಕದ ಕೆಲಸಗಾರರ ವಿಶ್ರಾಂತಿ ಕೊಠಡಿಗೂ ಬೆಂಕಿ ವ್ಯಾಪಿಸಿದೆ.

ಕೊಠಡಿಯಿಂದ ದಟ್ಟ ಹೊಗೆ ಬರುತ್ತಿದ್ದುದನ್ನು ನೋಡಿದ ಕೆಲಸಗಾ­ರರು ಅಗ್ನಿಶಾಮಕ ನಿಯಂತ್ರಣ ಕೊಠ­ಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಕಚೇರಿಯ ಒಳಗಿದ್ದ ದೈನಂದಿನ ವಹಿವಾಟಿನ ಹಣ ಹಾಗೂ ಕಂಪ್ಯೂಟರ್‌, ಎಂಜಿನ್‌ ಆಯಿಲ್‌, ಪೀಠೋಪಕರಣ ಮತ್ತಿತರ ವಸ್ತುಗಳು ಘಟನೆಯಲ್ಲಿ ಸುಟ್ಟು ಹೋಗಿವೆ. ಆದರೆ, ನಷ್ಟದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

‘ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬಂಕ್‌ನ ಕಚೇರಿಯಲ್ಲಿ ಬೆಂಕಿ ಹೊತ್ತಿ­ಕೊಂಡಿದೆ’ ಎಂದು ಮಹದೇ­ವಪುರ ಅಗ್ನಿಶಾಮಕ ಠಾಣೆಯ ಅಧಿಕಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT