ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಕಾಶಿಯಲ್ಲೂ ಮಲಿನ ಗಂಗೆ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಧಾರವಾಡಕ್ಕೆ `ವಿದ್ಯಾಕಾಶಿ~ ಎಂಬ ಹೆಸರನ್ನು ತಂದುಕೊಟ್ಟ ಕೀರ್ತಿ ಕರ್ನಾಟಕ ವಿಶ್ವವಿದ್ಯಾಲಯಕ್ಕೇ ಸಲ್ಲುತ್ತದೆ. `ಸದಾಸ್ಮರಣೀಯ ರಾದ ಡಿ.ಸಿ. ಪಾವಟೆಯವರು ನೈತಿಕತೆಯನ್ನೇ ಬುನಾದಿಯನ್ನಾಗಿ ಮಾಡಿಕೊಂಡು ಈ ಜ್ಞಾನದೇಗುಲವನ್ನು ಕಟ್ಟಿದರು~ ಎಂದು ವಿವಿಯ ಇತಿಹಾಸ ಬಲ್ಲ ಹಿರಿಯರು ಹೇಳುತ್ತಾರೆ. ಆದರೆ, ಇಲ್ಲಿನ ಕಳೆದ ಒಂದು ದಶಕದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಇದುವರೆಗೆ ಭದ್ರವಾಗಿದ್ದ `ನೈತಿಕ~ ಬುನಾದಿ, ಬಿರುಕು ಬಿಟ್ಟಂತೆ ಭಾಸವಾಗುತ್ತಿದೆ. ಈ ಹತ್ತು ವರ್ಷಗಳಲ್ಲಿಯೇ ವಿವಿ ಅಂಗಳದಲ್ಲಿ ಆರು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ.

ಕುಲಪತಿಗಳವರೆಗೂ ದೂರು ಹೋಗಿರುವ ಆರು ಪ್ರಕರಣ ಪೈಕಿ ನಾಲ್ಕರಲ್ಲಿ ಆರೋಪ ಹೊತ್ತವರು ಆಗಲೇ `ನಿರ್ದೋಷಿ~ಗಳಾಗಿ ಹೊರಬಂದಿದ್ದಾರೆ. ಅದೇ ವಿವಿ ಅಂಗಳದಲ್ಲಿ ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿಕ್ಕ ಎರಡು ಪ್ರಕರಣಗಳ ವಿಚಾರಣೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ಇನ್ನೂ ನಡೆಯುತ್ತಿದೆ. ಅದರಲ್ಲಿ ಒಬ್ಬ ಆರೋಪಿ ಅಮಾನತಿನಲ್ಲಿದ್ದರೆ, ಮತ್ತೊಬ್ಬರು ಕೆಲಸ ಮಾಡುತ್ತಲೇ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ವಿವಿ ಕ್ಯಾಂಪಸ್‌ನಲ್ಲಿ, ಮೊದಲ ಸಲ ಲೈಂಗಿಕ ದೌರ್ಜನ್ಯದ ಕೂಗು ಜೋರಾಗಿ ಕೇಳಿಬಂದಿದ್ದು 2003ರಲ್ಲಿ. ಆರೋಪ ಎದುರಿಸಿದ್ದವರು ಪ್ರಾಧ್ಯಾಪಕ ಪ್ರೊ.ಎಸ್.ಎಸ್. ನರೇಗಲ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಪ್ರೊ.ಎಸ್. ಅಬ್ದುಲ್ ಕರೀಂ ನೇತೃತ್ವದ ಸಮಿತಿ ಅವರನ್ನು ನಿರ್ದೋಷಿ~ ಎಂದು ತೀರ್ಪು ನೀಡಿತ್ತು. ಅವರು ಈಗಲೂ ವಿವಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಮರುವರ್ಷವೇ, ಅಂದರೆ 2004ರಲ್ಲಿ, ಮತ್ತೊಂದು ದೌರ್ಜನ್ಯದ ಪ್ರಕರಣ ವರದಿಯಾಯಿತು. ಈ ಬಾರಿ ಆರೋಪ ಎದುರಿಸಿದವರು ಹಿರಿಯ ಅಧಿಕಾರಿ ಹೆಸರು ಜೆ.ಸಿ. ಕುಬಸದ. ದೂರು ನೀಡಿದ್ದು `ಡಿ~ ಗುಂಪಿನ ಮಹಿಳಾ ಉದ್ಯೋಗಿ. `ಈ ಆರೋಪದಲ್ಲಿ ಸತ್ಯಾಂಶ ಇಲ್ಲ~ ಎಂದು ತೀರ್ಪು ನೀಡಿದ ಸಮಿತಿ, `ಇಂತಹ ಆರೋಪಗಳು ಬರದಂತೆ ನೋಡಿಕೊಳ್ಳಬೇಕು~ ಎಂದು ಕುಬಸದ ಅವರಿಗೂ ಎಚ್ಚರಿಕೆ ನೀಡಿ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಅದರ ನಂತರ ಟಿ.ಟಿ. ಬಸವನಗೌಡ ಎಂಬ  ಸಹಾಯಕ ಪ್ರಾಧ್ಯಾಪಕರು ಮತ್ತು ಇನ್ನೊಬ್ಬ ಬೋಧಕೇತರ ಸಿಬ್ಬಂದಿ ಎಂ.ವಿ.ಮಾಳಮ್ಮನವರ ವಿರುದ್ಧವೂ ದೂರು ದಾಖಲಾದರೂ ಸಾಕ್ಷ್ಯಾಧಾರ ಸಾಲದೆ ಈ ಪ್ರಕರಣಗಳು ಬಿದ್ದುಹೋದವು.

ಕಳೆದ ವರ್ಷ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಲೋಕೇಶ ಅವರ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ನಡೆದಿದೆ. ಈ ಪ್ರಕರಣದ ಬಿಸಿ ತಣ್ಣಗಾಗುವ ಮೊದಲೇ  ರಾಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಎಂ. ಹೊಸಮನಿ ಅವರ ವಿರುದ್ಧ ಆರೋಪ ಕೇಳಿಬಂತು. ತಮ್ಮ ವಿದ್ಯಾರ್ಥಿನಿಗೆ ಪಿಎಚ್‌ಡಿ ಪೂರೈಸಿಕೊಡಲು ಪಾರ್ಟಿ ಮಾಡಿಸುವ ಬೇಡಿಕೆ ಇಟ್ಟಿದ್ದಲ್ಲದೆ ಲೈಂಗಿಕ ಸಂಬಂಧದ ಆಕಾಂಕ್ಷೆಯನ್ನೂ ವ್ಯಕ್ತಪಡಿಸಿದ್ದರು ಎಂಬುದು ಅವರ ಮೇಲಿರುವ ದೂರು. 

ನಿವೃತ್ತ ಜಿಲ್ಲಾ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲಿಂದೀಚೆಗೆ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹಾಗೆಂದು ದೌರ್ಜನ್ಯ ನಡೆದೇ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

`ರಾಜ್ಯ ಸರ್ಕಾರದ ಆದೇಶದ ಪ್ರಕಾರ 2010ರ ಅಕ್ಟೋಬರ್ 26ರಂದು ವಿವಿಯಲ್ಲಿ `ಮಹಿಳಾ ದೌರ್ಜನ್ಯ ತಡೆ ಘಟಕ~ವನ್ನು ಸ್ಥಾಪಿಸಲಾಗಿದೆ. ದೌರ್ಜನ್ಯದ ದೂರುಗಳು ಬಂದರೆ ಆ ಘಟಕದ ಸದಸ್ಯರು ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತಾರೆ.

ಸದ್ಯ ಮನಃಶಾಸ್ತ್ರ ವಿಭಾಗದ ಪ್ರೊ.ವಿ.ಎ. ಅಮ್ಮಿನಭಾವಿ ಈ ಘಟಕದ ಮುಖ್ಯಸ್ಥರಾಗಿದ್ದಾರೆ. ಪ್ರಕರಣಗಳು ವಿಚಾರಣೆಯಲ್ಲಿರುವುದರಿಂದ ಹೆಚ್ಚೇನೂ ಮಾತನಾಡಲಾರೆ ಎಂದು ಹೇಳುತ್ತಾರೆ ವಿವಿಯ ಕುಲಸಚಿವ ಪ್ರೊ. ಎಸ್.ಬಿ. ಹಿಂಚಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT