ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾನಗರದಲ್ಲಿ ವಿಶ್ವದರ್ಜೆ ಕ್ರೀಡಾ ಅಕಾಡೆಮಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಪ್ರದರ್ಶನ ನೀಡಿ ಪದಕ ಗಳಿಸಲು ನೆರವಾಗುವ ಉದ್ದೆೀಶದಿಂದ ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ವಿಶ್ವದರ್ಜೆಯ `ಕರ್ನಾಟಕ ಕ್ರೀಡಾ ಉತ್ಕೃಷ್ಟ ಅಕಾಡೆಮಿ~ (ಕರ್ನಾಟಕ ಸ್ಪೋರ್ಟ್ಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್) ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಲಭಿಸಿದೆ.

ಇದರಿಂದ ರಾಜ್ಯದ ಕ್ರೀಡಾಪಟುಗಳ ಬಹುದಿನಗಳ ಕನಸು ನನಸಾಗಿದೆ. ಯಲಹಂಕ ಬಳಿ ಇರುವ ವಿದ್ಯಾನಗರ ಕ್ಯಾಂಪಸ್‌ನಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಅದಕ್ಕಾಗಿ ಸರ್ಕಾರ 4.95 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

`ಈಗ ಕಟ್ಟಡ ನಿರ್ಮಾಣಕ್ಕೆ ಮಾತ್ರ ನಾವು ಮುಂದಾಗಿದ್ದೇವೆ. ತರಬೇತಿ ಸಂಬಂಧದ ರೂಪುರೇಷೆಗಳ ಬಗ್ಗೆ ನಂತರ ಯೋಜನೆ ರೂಪಿಸುತ್ತೇವೆ. 2016 ಹಾಗೂ 2020ರ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಉತ್ತಮ ಪ್ರದರ್ಶನದ ನಿರೀಕ್ಷೆಯ ಮಹತ್ವಾಕಾಂಕ್ಷೆಯೊಂದಿಗೆ ಈ ಅಕಾಡೆಮಿ ಕೆಲಸ ಮಾಡಲಿದೆ. ಕಾಮನ್‌ವೆಲ್ತ್, ಏಷ್ಯನ್ ಕ್ರೀಡಾಕೂಟ ಸೇರಿದಂತೆ ಪ್ರಮುಖ ಕೂಟಗಳಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಕ್ರೀಡಾಪಟುಗಳಿಗೆ ಇಲ್ಲಿ ಉನ್ನತ ತರಬೇತಿ ನೀಡಲಾಗುತ್ತದೆ~ ಎಂದು ಇಲಾಖೆಯ ಜಂಟಿ ನಿರ್ದೇಶಕ ವೈ.ಆರ್.ಕಾಂತರಾಜೇಂದ್ರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ವಿದ್ಯಾನಗರದಲ್ಲಿ ಕ್ರೀಡಾ ಇಲಾಖೆಗೆ ಸೇರಿದ 68 ಎಕರೆ ಜಾಗವಿದೆ. ಈಗಾಗಲೇ ಇಲ್ಲಿ ಕ್ರೀಡಾ ವಸತಿ ನಿಲಯವಿದ್ದು ಇದು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಇದರ ಸನಿಹದ 300 ಚದುರ ಅಡಿ ಪ್ರದೇಶದಲ್ಲಿ ಅಕಾಡೆಮಿ ಕಟ್ಟಡ ನಿರ್ಮಾಣವಾಗಲಿದೆ.

`ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದೇವೆ. ಈಗ ತಾಂತ್ರಿಕ ಮಟ್ಟದ ಪರಿಶೀಲನೆ ನಡೆಯುತ್ತಿದೆ. ಇದು ಮುಗಿದ ಬಳಿಕ ಕಟ್ಟಡ ನಿರ್ಮಾಣಕ್ಕೆ 9 ತಿಂಗಳ ಗಡುವು ನೀಡಲಾಗುವುದು~ ಎಂದು ಕ್ರೀಡಾ ಇಲಾಖೆಯ ಸಹಾಯಕ ಎಂಜಿನಿಯರ್ ಹರೀಶ್ ಹೇಳಿದರು.

`ಅಕಾಡೆಮಿಯಲ್ಲಿ ಒಟ್ಟು 48 ಕೊಠಡಿಗಳಿರಲಿವೆ. ಸುಮಾರು 100 ಕ್ರೀಡಾಪಟುಗಳು ತಂಗುವ ವ್ಯವಸ್ಥೆ ಇರಲಿದೆ. ಇದರಲ್ಲಿ 50 ಪುರುಷರ ಹಾಗೂ 50 ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರಲಿದೆ. ಎಲ್ಲಾ ಕೋಣೆಗಳಿಗೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುವುದು~ ಎಂದು ಅವರು ವಿವರಿಸಿದರು.

3.20 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್
ಬೆಂಗಳೂರು: ಯಲಹಂಕ ಬಳಿ ಇರುವ ವಿದ್ಯಾನಗರದಲ್ಲಿ 400 ಮೀಟರ್ ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೂ ಕ್ರೀಡಾ ಇಲಾಖೆ ಟೆಂಡರ್ ಆಹ್ವಾನಿಸಿದೆ. ಇದಕ್ಕಾಗಿ ಸರ್ಕಾರ 3 ಕೋಟಿ 20.75 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದೆ.

`ಈಗ ಮಣ್ಣಿನ ಟ್ರ್ಯಾಕ್ ಇದೆ. ಆ ಸ್ಥಳಕ್ಕೆ ಸಿಂಥೆಟಿಕ್ ಟ್ರ್ಯಾಕ್ ಹಾಕಲಾಗುವುದು. ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಮೇಳೆ ಈ ಟ್ರ್ಯಾಕ್ ನಿರ್ಮಾಣಕ್ಕೆ 4 ತಿಂಗಳು ಗಡುವು ವಿಧಿಸಲಾಗುವುದು~ ಎಂದು ಇಲಾಖೆಯ ಸಹಾಯಕ ಎಂಜಿನಿಯರ್ ಹರೀಶ್ ತಿಳಿಸಿದ್ದಾರೆ.

ಕಾಂಪೌಂಡ್ ನಿರ್ಮಾಣ
 `ಇಲಾಖೆಯ ಜಾಗದ ಅತಿಕ್ರಮಣ ನಡೆಯುತ್ತಿರುವ ಕಾರಣ 68 ಎಕರೆ ಪ್ರದೇಶದ ಸುತ್ತ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. 1.18 ಕೋಟಿ ರೂ.ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ~ ಎಂದೂ ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT