ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಪೋಷಕದಿಂದ ಧನ ಸಹಾಯ

Last Updated 14 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ಧಾರವಾಡ: ಸಮಾಜದಲ್ಲಿ ಎಲ್ಲ ಸಮುದಾಯದವರು ಸಮಾನವಾಗಿ ಅಭಿವೃದ್ಧಿ ಹೊಂದಬೇಕು. ಕಡಿಮೆ ಆದಾಯ ಹೊಂದಿದವರ ಏಳ್ಗೆಯಾದರೆ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಅಭಿಪ್ರಾಯಪಟ್ಟರು.

ಇಲ್ಲಿನ ಯಶೋದಾ ಮಂಗಲ ಕಾರ್ಯಾಲಯದಲ್ಲಿ ವಿದ್ಯಾಪೋಷಕ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಿ ಅವರು ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿನವರಿಗೆ ಹಾಗೂ ಬಾಲಕಿಯರಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ಇದ್ದರೂ ಬಡತನ ನಿರ್ಮೂಲನೆ ನಿಟ್ಟಿನಲ್ಲಿ ಸರ್ಕಾರದ ನೀತಿ, ಯೋಜನೆಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಬಡತನ ರೇಖೆಗಿಂತ ಮೇಲಿರುವ ಕಡಿಮೆ ಆದಾಯದ ಕುಟುಂಬದವರಿಗೆ ಸಹಾಯದ ಅಗತ್ಯವಿದ್ದು, ವಿದ್ಯಾಪೋಷಕ ಸಂಸ್ಥೆ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾಪೋಷಕ ಸಂಸ್ಥೆಯಿಂದ ಸಹಾಯ ಪಡೆದವರು ಈ ಸಂಸ್ಥೆಗೆ ಹಾಗೂ ಸಮಾಜಕ್ಕೆ ಮರಳಿ ಏನನ್ನಾದರೂ ನೀಡಲೇಬೇಕು. ಈ ಸಹಾಯದ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡ ನಂತರ ಸಂಸ್ಥೆಗೆ ಸಹಾಯ ಮಾಡಬೇಕು. ಸಮಾಜದಲ್ಲಿ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳಿದ್ದು, ಧನಾತ್ಮಕ ಅಂಶಗಳಿಗೆ ಗಮನ ಹರಿಸಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ನಮ್ಮ ವ್ಯವಸ್ಥೆ, ಸಮಾಜ ಸರಿಯಿಲ್ಲ ಎಂಬ ಭಾವನೆ ಮೂಡುತ್ತಿದೆ. ಹೊರ ದೇಶಗಳಿಗೆ ಹೋಗಿ ಕೆಲಸ ಮಾಡಬೇಕು ಎಂಬ ಹಂಬಲ ಹೆಚ್ಚಾಗುತ್ತಿದೆ. ಈ ಮನೋಭಾವನೆ ಹೋಗಬೇಕು. ಪ್ರತಿಭಾ ಪಲಾಯನ ಮಾಡದೇ ನಮ್ಮ ದೇಶದ, ಸಮಾಜದ ಸಲುವಾಗಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಶ್ರೀಧರ ನಾಯ್ಕ ಮಾತನಾಡಿ, 4 ಲಕ್ಷ ರೂ. ಶಿಕ್ಷಣ ಸಾಲ ತಮ್ಮ ಬ್ಯಾಂಕಿನಿಂದ ನೀಡಲಾಗುತ್ತದೆ. ಈ ಸಾಲಕ್ಕೆ ಯಾವುದೇ ನಿಬಂಧನೆಗಳಿಲ್ಲ. ತಮ್ಮ ಬ್ಯಾಂಕು ಎಲ್ಲರನ್ನೂ ಬ್ಯಾಂಕಿಂಗ್ ವ್ಯಾಪ್ತಿಯಲ್ಲಿ ತರಲು ಯೋಜನೆ ಹಾಕಿಕೊಂಡಿದೆ ಎಂದ ಅವರು, ವಿದ್ಯಾಪೋಷಕ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. 

ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದ ತನುಜಾ ರೋಖಡೆ, `ಮಧ್ಯಮ ವರ್ಗದಿಂದ ಬಂದಿದ್ದರೂ ಉನ್ನತ ಶಿಕ್ಷಣ ಪಡೆಯುವುದು ಅಸಾಧ್ಯವಾಗಿತ್ತು. ವಿದ್ಯಾಪೋಷಕ ಸಂಸ್ಥೆ ನನ್ನ ಶಿಕ್ಷಣದ ಕನಸಿಗೆ ಸಹಾಯ ಮಾಡಿದ್ದು, ಸಾರ್ವಜನಿಕ ಆಡಳಿತ ಸೇವೆಗೆ ಸೇರುವ ಆಸೆ ಇದೆ. ಇದಕ್ಕೂ ಸಹ ಈ ಸಂಸ್ಥೆಯಿಂದ ಸಹಾಯ ಪಡೆಯುತ್ತಿದ್ದೇನೆ~ ಎಂದರು.

ಧನಸಹಾಯ ಪಡೆದ ವಿದ್ಯಾರ್ಥಿನಿಯ ತಾಯಿ ನೀಲವ್ವ ಕುಂಬಾರ ಮಾತನಾಡಿ, ತಮ್ಮ ಮನೆಯ ಪರಿಸ್ಥಿತಿ ಹೇಳುತ್ತ ಕಣ್ಣೀರಿಟ್ಟರು. ವಿದ್ಯಾಪೋಷಕ ಸಹಾಯದಿಂದ ತಮ್ಮ ಪುತ್ರಿಗೆ ಶಿಕ್ಷಣ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಧಾರವಾಡ ಹಾಗೂ ಗದಗ ಜಿಲ್ಲೆಯ 220 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಧನಸಹಾಯ ಮಾಡಲಾಯಿತು. ಈ ವರ್ಷ ಎಟಿಎಂ ಕಾರ್ಡುಗಳನ್ನು ನೀಡುವುದರ ಮೂಲಕ ಧನಸಹಾಯ ನಡೆಯಿತು. ವಿದ್ಯಾಪೋಷಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಆರ್.ಎನ್.ತಿಕೋಟ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಬೆಳೆದು ಬಂದ ದಾರಿ, ಮುಂದಿನ ಯೋಜನೆಗಳನ್ನು ವಿವರಿಸಿದರು. ಅರ್ಪಿತಾ ಜೋಶಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಾಣಿ ಭಟ್ ಸ್ವಾಗತಿಸಿದರು. ಆನಂದರಾವ್ ವಂದಿಸಿದರು. ಸರಸ್ವತಿ ಜಿತೂರಿ ಹಾಗೂ ಸ್ನೇಹಾ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT