ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ನಿಲಯಕ್ಕೆ ‘ಕಳಪೆ’ ಶಾಪ

Last Updated 24 ಸೆಪ್ಟೆಂಬರ್ 2013, 8:55 IST
ಅಕ್ಷರ ಗಾತ್ರ

ತುರುವೇಕೆರೆ: ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೊಡಗೀಹಳ್ಳಿ ಹೊರ ವಲಯದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಎಡಬಿಡದೆ ಸುರಿಯುತ್ತಿರುವ ಮಳೆಗೆ ಕಟ್ಟಡ ಕುಸಿಯ­ಬಹುದು ಎಂದು ವಿದ್ಯಾರ್ಥಿ­ಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹೊಸ ಕಟ್ಟಡಕ್ಕೆ ಹೊಂದಿಕೊಂಡಂತೆ ಕೊಡಗೀಹಳ್ಳಿ ಹೊರವಲಯದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ನಿಲಯದ ಕಟ್ಟಡ ಕಾಮಗಾರಿಯ ಅಂದಾಜು ವೆಚ್ಚ ರೂ 1 ಕೋಟಿ. ಆದರೆ ಕಾಮಗಾರಿಯು ಉತ್ತಮ ಗುಣಮಟ್ಟ­ದಿಂದ ಕೂಡಿಲ್ಲ ಎನ್ನುವುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ.

ಇಷ್ಟು ದೊಡ್ಡ ಕಟ್ಟಡ ಕಟ್ಟಲು ಸುಭದ್ರವಾದ ಅಡಿಪಾಯ ಹಾಕಬೇಕು. ಆದರೆ ಕೇವಲ 3 ಅಡಿ ಆಳ ಅಗೆದು ಅಡಿಪಾಯ ಹಾಕಲಾಗಿದೆ. ಅಡಿ­ಪಾಯದ ಮೇಲೆ ಸಿಮೆಂಟ್, ಕಬ್ಬಿಣದ ಸರಳು ಹಾಕಿ ಕಾಂಕ್ರೀಟ್ ಸಹ ಹಾಕಿಲ್ಲ. ಅಲ್ಲಲ್ಲಿ ಪಾಯವೇ ಕಿತ್ತು ಬಂದಿದ್ದು ತೇಪೆ ಹಾಕಲಾಗಿದೆ. ಇಡೀ ಕಟ್ಟಡ ಕಾಮ­ಗಾರಿಗೆ ಅತ್ಯಂತ ಕಳಪೆ ಮಣ್ಣು ಮಿಶ್ರಿತ ಮರಳು ಬಳಸಲಾಗಿದೆ. ಸಿಮೆಂಟ್ ಪ್ರಮಾಣವನ್ನು ಸಹ ಅನುಸೂಚಿತ ರೀತಿಯಲ್ಲಿ ಬಳಸಿಲ್ಲ. ಜೊತೆಗೆ ಕಟ್ಟಡವನ್ನು ಕ್ಯೂರಿಂಗ್ ಮಾಡಿಲ್ಲ ಎಂಬ ಅರೋಪಗಳು ಕೇಳಿ ಬಂದಿವೆ. ‘ಇಂಥ ಕಳಪೆ ಕಟ್ಟಡದಲ್ಲಿ ನಿರಾ­ತಂಕವಾಗಿ ಇರುವುದು ಹೇಗೆ?’ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸು­ತ್ತಾರೆ.

ಈ ವಸತಿ ನಿಲಯ ಕಟ್ಟಡಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿಯೇ ರೂ 1 ಕೋಟಿ ಅನುದಾನ ಒದಗಿಸಿದೆ. ಬೆಂಗಳೂರಿನ ರೈಟ್ಸ್ ಕಂಪೆನಿ ಎಂಬ ಸಂಸ್ಥೆಯು ಕಾಮಗಾರಿಯ ಹೊಣೆ ಹೊತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಉಪ ಕಾರ್ಯಪಾಲಕ ಎಂಜಿನಿಯರ್ ದಯಾನಂದ್ ತಿಳಿಸಿದ್ದಾರೆ.

ಪಾಲಿಟೆಕ್ನಿಕ್ ಕಾಲೇಜ್ ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದ ಕಾರಣ ಇಲ್ಲಿ ಜನಸಂಚಾರ ವಿರಳ. ಈ ಕಾಮಗಾರಿಯ ಮೇಲೆ ಸ್ಥಳೀಯವಾಗಿ ಲೋಕೋಪಯೋಗಿ ಇಲಾಖೆಯೂ ಸೇರಿ­ದಂತೆ ಯಾವ ಇಲಾಖೆಗೂ ನಿಯಂ­ತ್ರಣವಿಲ್ಲ, ಈ ಕಾಮಗಾರಿಯ ಬಗ್ಗೆ ಯಾರಲ್ಲೂ ಮಾಹಿತಿಯೂ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ಕಟ್ಟಡ ನಿರ್ಮಾಣಕ್ಕೆ ಕಳಪೆ ಸಾಮಾಗ್ರಿ ಬಳಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ತಾಂತ್ರಿಕ ಶಿಕ್ಷಣ ಮಂಡಳಿಯು ಕೂಡಲೇ ಲೋಕೋಪಯೋಗಿ ಇಲಾಖೆಗೆ ಈ ಕಾಮಗಾರಿಯ ಮೇಲ್ವಿಚಾರಣೆಯನ್ನು ವಹಿಸಿಕೊಡಬೇಕು. ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಬೇಕು’ ಎಂದು ಕೊಡಗೀಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT