ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ನೇಣಿಗೆ ಶರಣು

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡಿದ್ದು, ಬಕ್ಷಿಗಾರ್ಡನ್‌ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜ್ಞಾನಭಾರತಿ ಬಳಿಯ ಪಾಪರೆಡ್ಡಿಪಾಳ್ಯ ವರ್ತುಲ ರಸ್ತೆ ನಿವಾಸಿ ಜಯರಾಮ್ ಎಂಬುವರ ಪುತ್ರ ವಿನೋದ್ (13) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಪಾಪರೆಡ್ಡಿಪಾಳ್ಯದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಜಯರಾಮ್, ವೆಲ್ಡಿಂಗ್ ಕೆಲಸ ಮಾಡುತ್ತಾರೆ. ಅವರ ಪತ್ನಿ ಟೈಲರ್ ಆಗಿದ್ದಾರೆ. ಶಾಲೆಯಿಂದ ಮನೆಗೆ ಬಂದ ವಿನೋದ್, ರಾತ್ರಿ ಏಳು ಗಂಟೆ ಸುಮಾರಿಗೆ ನೇಣು ಹಾಕಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

`ಮಗನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದವು. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಯರಾಮ್ ಹೇಳಿಕೆ ನೀಡಿದ್ದಾರೆ' ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತೊಂದು ಪ್ರಕರಣ: ಕಾಟನ್‌ಪೇಟೆ ಸಮೀಪದ ಬಕ್ಷಿಗಾರ್ಡನ್ ಎರಡನೇ ಅಡ್ಡರಸ್ತೆ ನಿವಾಸಿ ಆರ‌್ಮುಗಂ ಎಂಬುವರ ಪುತ್ರಿ ಕಲೈವಾಣಿ (14) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಕ್ಷಿಗಾರ್ಡನ್‌ನ ಬಿಬಿಎಂಪಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಕಲೈವಾಣಿ, ಬ್ಯಾಟರಾಯನಪುರದ ಅರವಿಂದ್ ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಈ ವಿಷಯ ತಿಳಿದ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದ್ದಾರೆ. ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆಕೆ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಅವಳ ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದ ಆಕೆ ಭಾನುವಾರ  ಮೃತಪಟ್ಟಿದ್ದಾಳೆ.

`ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಅರವಿಂದ್ ಮದುವೆಯಾಗುವಂತೆ ಬೆದರಿಕೆ ಹಾಕುತ್ತಿದ್ದ. ಈ ಕಾರಣದಿಂದ ಮನನೊಂದು ಬೆಂಕಿ ಹಚ್ಚಿಕೊಂಡೆ ಎಂದು ಕಲೈವಾಣಿ ಸಾಯುವ ಮುನ್ನ ಹೇಳಿಕೆ ನೀಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರವಿಂದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT