ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಬಸ್ ಪಾಸ್ ಮಿತಿ ಹೆಚ್ಚಳ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಪ್ರತಿನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ವಿದ್ಯಾರ್ಥಿ ಬಸ್ ಪಾಸ್ ನೀಡಲು ಇದುವರೆಗೆ ಇದ್ದ 50 ಕಿ.ಮೀ. ಮಿತಿಯನ್ನು 60 ಕಿ.ಮೀ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಸಚಿವ ಆರ್. ಅಶೋಕ ಅವರು, `ಹಲವು ವಿದ್ಯಾರ್ಥಿ ಸಂಘಟನೆಗಳು ಮುಂದಿಟ್ಟಿದ್ದ ಮನವಿಯ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 60 ಕಿ.ಮೀ. ದೂರದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೂ ಇನ್ನು ಮುಂದೆ ರಿಯಾಯಿತಿ ದರದ ಪಾಸ್ ಪಡೆಯಬಹುದು~ ಎಂದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಖರೀದಿಸಿರುವ ಪರಿಸರ ಸ್ನೇಹಿ ಬಸ್ಸುಗಳನ್ನು ವಿಧಾನಸೌಧದ ಎದುರು ಮಂಗಳವಾರ ಸಾರ್ವಜನಿಕರ ಸೇವೆಗೆ ಅರ್ಪಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಪೀಣ್ಯದ ಸ್ಯಾಟಲೈಟ್ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರದಲ್ಲಿಯೇ ನಿಲ್ದಾಣವನ್ನು ಉದ್ಘಾಟಿಸಲಾಗುವುದು~ ಎಂದು ಹೇಳಿದರು.


ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಎಥೆನಾಲ್, ಹೊಂಗೆ, ಬೇವಿನ ಎಣ್ಣೆಯಂಥ ಪರ್ಯಾಯ ಇಂಧನಗಳನ್ನು ಬಳಸಲಾಗುತ್ತಿದೆ. ಡೀಸೆಲ್‌ಗೆ ಹೋಲಿಸಿದರೆ ಈ ಇಂಧನಗಳು ಪ್ರತಿ ಲೀಟರ್‌ಗೆ 2 ರೂಪಾಯಿ ದುಬಾರಿ. ಈ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ಇಂಧನಗಳ ಬಳಕೆಗೆ ಕೆಎಸ್‌ಆರ್‌ಟಿಸಿಗೆ ಧನಸಹಾಯ ನೀಡಬೇಕು~ ಎಂದು ಕೋರಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಗರ ಬಸ್ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಕೋಲಾರದಲ್ಲಿ ಈ ಸೇವೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಈ ಸೇವೆಯಿಂದ ರಿಕ್ಷಾ ಅಥವಾ ಟ್ಯಾಕ್ಸಿಗಳಿಗೆ ದುಬಾರಿ ದರ ನೀಡುವುದರಿಂದ ಮುಕ್ತಿ ದೊರೆಯಲಿದೆ ಎಂದರು.

ಸಿಎಂ ಸಮ್ಮತಿ: ಅಶೋಕ ಅವರ ಕೋರಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ಧನಸಹಾಯ ಸೇರಿದಂತೆ ಸಾರಿಗೆ ಇಲಾಖೆಗೆ ಅಗತ್ಯವಿರುವ ಎಲ್ಲ ನೆರವನ್ನು ಸರ್ಕಾರ ನೀಡಲಿದೆ~ ಎಂದು ಭರವಸೆ ನೀಡಿದರು.

ವೇತನ ಹೆಚ್ಚಳ: ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟ್ರೈನಿಗಳ ವೇತನದಲ್ಲಿ ತಲಾ ಒಂದು ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಕ್ಕೆ 26 ಕೋಟಿ ರೂಪಾಯಿ ಹೊರೆ ಬೀಳಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 30 ಸಾವಿರ ನೌಕರರನ್ನು ಸಾರಿಗೆ ಸಂಸ್ಥೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಪ್ರಥಮ ಹಂತದಲ್ಲಿ 1,220 ಹುದ್ದೆಗಳ ನೇಮಕಾತಿ ನಡೆಯಲಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದರು.

ಪರಿಸರ ಸ್ನೇಹಿ ಬಸ್ಸುಗಳು: ಸಾರ್ವಜನಿಕರ ಸೇವೆಗೆ ಮಂಗಳವಾರ ಅರ್ಪಿಸಲಾದ `ಬಿಎಸ್ 4~ ಪರಿಸರ ಸ್ನೇಹಿ ಬಸ್ಸುಗಳನ್ನು ವೋಲ್ವೊ ಹಾಗೂ ಮರ್ಸಿಡಿಸ್ ಬೆಂಜ್ ಕಂಪೆನಿಯಿಂದ ಖರೀದಿ ಮಾಡಲಾಗಿದೆ.
`ಸೌರಶಕ್ತಿ ಹಾಗೂ ಡೀಸೆಲ್ ಬಳಸಿ ಕಾರ್ಯಾಚರಿಸುವ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ರಸ್ತೆಗಿಳಿಸಲು ಸರ್ಕಾರ ನಿರ್ಧರಿಸಿದೆ~ ಎಂದು ಮುಖ್ಯಮಂತ್ರಿಗಳು ಹೇಳಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಐಷಾರಾಮಿ ಬಸ್ಸುಗಳು, ಬೆಂಗಳೂರು- ಹೈದರಾಬಾದ್, ಬೀದರ್- ಚೆನ್ನೈ, ಮಂಗಳೂರು- ಬೆಂಗಳೂರು, ಪುತ್ತೂರು- ಸುಬ್ರಹ್ಮಣ್ಯ- ಬೆಂಗಳೂರು, ಮಂಗಳೂರು- ಮುಂಬೈ ಹಾಗೂ ಮೈಸೂರು-ಬೆಂಗಳೂರು- ಪಣಜಿ ಮಾರ್ಗದಲ್ಲಿ ಸಂಚರಿಸಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT