ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಸಾವು: ರೊಚ್ಚಿಗೆದ್ದ ಜನರಿಂದ ದಾಂದಲೆ

Last Updated 11 ಜನವರಿ 2011, 5:55 IST
ಅಕ್ಷರ ಗಾತ್ರ

ಹೊನ್ನಾವರ/ಬೆಂಗಳೂರು: ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬರಲಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕರು ಆತನಿಗೆ ಥಳಿಸಿ, ಮೈದಾನದಲ್ಲಿ ಓಡುವ ಶಿಕ್ಷೆ ನೀಡಿದ ಪರಿಣಾಮ ಕುಸಿದುಬಿದ್ದು ಸಾವಿಗೀಡಾದ ಘಟನೆ ಸೋಮವಾರ ಹೊನ್ನಾವರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಾಸರಕೋಡ ಟೊಂಕ ಗ್ರಾಮದ ಅಫ್ಜಲ್ ಹಮ್ಜಾಸಾಬ್ ಪಟೇಲ್(15) ಎಂದು ಗುರುತಿಸಲಾಗಿದ್ದು, ಈತ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆಯೇ ರೊಚ್ಚಿಗೆದ್ದ ಸಾರ್ವಜನಿಕರು ಶಾಲೆಗೆ ನುಗ್ಗಿ ದಾಂದಲೆ ಮಾಡಿದರು.

ಆದರೆ ಈತನ ಸಾವಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಶಿಕ್ಷೆ ನೀಡಿದ ಶಿಕ್ಷಕರೇ ಮಗನ ಸಾವಿಗೆ ಕಾರಣ ಎಂದು ವಿದ್ಯಾರ್ಥಿಯ ತಾಯಿ ಅಬೀದಾ ಅವರು ಹೊನ್ನಾವರ ಪೊಲೀಸರಿಗೆ ದೂರು ನೀಡಿದ್ದಾರೆ. ಎರಡು ದಿನಗಳಿಂದ ಶಾಲೆಗೆ ಬಂದಿಲ್ಲವೆಂಬ ಕಾರಣಕ್ಕೆ ತನ್ನ ಮಗನಿಗೆ ದೈಹಿಕ ಶಿಕ್ಷೆ ನೀಡಿದ ಕಾರಣ ಆತ ಮೃತಪಟ್ಟಿದ್ದಾನೆ ಎಂದು ದೂರಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿದಂತೆ ಇಬ್ಬರು ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರ ವಿರುದ್ಧ ದೂರು ನೀಡಲಾಗಿದೆ.

ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯ ಜನ ಶಾಲೆಗೆ ನುಗ್ಗಿ ದಾಂದಲೆ ನಡೆಸಿದರು. ಕಿಟಕಿ ಗಾಜು, ಪೀಠೋಪಕರಣಗಳನ್ನು ನಾಶಪಡಿಸಿದರು. ಶಾಲೆಯ ಕಂಪ್ಯೂಟರ್ ಕೋಣೆಗೆ ನುಗ್ಗಿ ಅಲ್ಲಿನ ಕಂಪ್ಯೂಟರ್‌ಗಳನ್ನು ಧ್ವಂಸಗೊಳಿಸಿದರು. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ವರದಿ ಇನ್ನೂ ಬರಬೇಕಿದೆ ಎಂದು ಬಿಇಓ ಪಿ.ಲಿಂಗಪ್ಪ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೊನ್ನಾವರದ ಶಾಲೆ-ಕಾಲೇಜುಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಯಿತು.

ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯ ಗಣೇಶ ಹೆಬ್ಬಾರ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಕೆ.ಡಿ. ನಾಯ್ಕ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೃಷ್ಣಯ್ಯ, ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ ನಂತರ ಪಾಲಕರು ಮತ್ತು ಸಾರ್ವಜನಿಕರೊಡನೆ ಸಮಾಲೋಚಿಸಿದರು.
ವರದಿಗೆ ಸೂಚನೆ: ವಿದ್ಯಾರ್ಥಿ ಸಾವಿಗೀಡಾದ ಘಟನೆ ಬಗ್ಗೆ ವರದಿ ನೀಡಲು ಡಿಡಿಪಿಐಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈ ರೀತಿಯ ಘಟನೆಗಳು ಆಗಬಾರದು. ಇದು ದುರದೃಷ್ಟಕರ ಬೆಳವಣಿಗೆ. ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡದಂತೆ ಪದೇ ಪದೇ ಹೇಳುತ್ತೇವೆ. ಇಂತಹ ವಿಷಯಗಳಲ್ಲಿ ಶಿಕ್ಷಕರು ವೈಯಕ್ತಿಕವಾಗಿ ಕಾಳಜಿ ವಹಿಸಬೇಕು. ದೈಹಿಕ ಶಿಕ್ಷಕರು ಮಕ್ಕಳಿಗೆ ಹಿಂಸೆಯಾಗುವ ರೀತಿ ವರ್ತಿಸಬಾರದು ಎಂದರು.

ಪರಿಹಾರ: ಮೃತ ವಿದ್ಯಾರ್ಥಿಯ ಪಾಲಕರಿಗೆ ಶಾಲೆಯ ಆಡಳಿತ ಮಂಡಳಿ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಶಿಕ್ಷಣ ಇಲಾಖೆ 25 ಸಾವಿರ ರೂಪಾಯಿ ಮತ್ತು ಪಟ್ಟಣ ಪಂಚಾಯಿತಿ 10 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT