ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಗ್ರೀನ್‌ ಲೈಬ್ರರಿ’

ವಿವಿಯೊಳಗೊಂದು ಸುತ್ತು
Last Updated 7 ಜನವರಿ 2014, 6:42 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಕಟ್ಟ­ಡದ ‘ವಿದ್ಯಾಸೌಧ’ದಲ್ಲಿರುವ ವಿಭಾಗವೊಂದರಲ್ಲಿ ಓದು­ತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಒಂದು ಗಂಟೆ ನಂತರ ನಡೆಯಲಿದೆ. ಅದರ ಮಧ್ಯೆಯೇ ಕೊಂಚ ಓದಬೇಕು, ವಿಷಯದ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಬೇಕಾಗಿದೆ. ಅದಕ್ಕಾಗಿ ದೂರದಲ್ಲಿರುವ ಕವಿವಿ ಗ್ರಂಥಾಲಯಕ್ಕೆ ಹೋಗಲು ಆಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು? ಗ್ರೀನ್‌ ಲೈಬ್ರರಿಗೆ ಹೋಗಿ ಕುಳಿತರೆ ಆಯಿತು!

ಕರ್ನಾಟಕ ವಿಶ್ವವಿದ್ಯಾಲಯವು ₨ 35 ಲಕ್ಷ ವೆಚ್ಚದಲ್ಲಿ ಆಡಳಿತ ಕಚೇರಿ ಎದುರಿನ ಪುಟ್ಟ ಉದ್ಯಾನವನವನ್ನು ಇದೀಗ ‘ಗ್ರೀನ್ ಲೈಬ್ರರಿ’ಯನ್ನಾಗಿ ಮಾಡಿದೆ. ಕಾಮಗಾರಿ ಇನ್ನೇನು ಅಂತಿಮ ಹಂತಕ್ಕೆ ಬಂದಿದ್ದು, ಉನ್ನತ ಶಿಕ್ಷಣ ಸಚಿವರು ಗ್ರೀನ್‌ ಲೈಬ್ರರಿ ಉದ್ಘಾಟಿಸುವ ನಿರೀಕ್ಷೆ ಇದೆ.

ಏನಿದು ಪರಿಕಲ್ಪನೆ: ಕರ್ನಾಟಕ ವಿ.ವಿ.ಯ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಉದ್ಯಾ­ನದ ಸುತ್ತಲೂ ವಿವಿಧ ಸ್ನಾತಕೋತ್ತರ ವಿಭಾಗಗಳ ತರಗತಿಗಳು ನಡೆಯುತ್ತವೆ. ಯಾವುದೋ ಕಿರು ಪರೀಕ್ಷೆ ಅಥವಾ ಅಂತಿಮ ಪರೀಕ್ಷೆಯ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಎಸ್‌.ಎಸ್‌.ಬಸವನಾಳ ಕೇಂದ್ರ ಗ್ರಂಥಾಲಯ­ಕ್ಕೆ ಹೋದರೆ ಅಲ್ಲಿ ವಿಚಾರ ಮಂಥನ ಮಾಡಲು ಅವಕಾಶವಿಲ್ಲ.

ಶಾಂತವಾಗಿ ಕುಳಿತುಕೊಂಡೇ ಓದಬೇಕು. ಆದರೆ ಗ್ರೀನ್‌ ಲೈಬ್ರರಿಯಲ್ಲಿ ಹಸಿರ ವನರಾಶಿಯ ಮಧ್ಯೆ ಕುಳಿತುಕೊಂಡು ಸಹಪಾಠಿಗಳೊಂದಿಗೆ ವಿಷಯದ ಕುರಿತು ಚರ್ಚೆ ನಡೆಸಬಹುದು. ಅದಕ್ಕಾಗಿಯೇ ಇಡೀ ಉದ್ಯಾನವನ್ನು ವಿದ್ಯಾರ್ಥಿ ಸ್ನೇಹಿಯನ್ನಾಗಿ ರೂಪಿಸಲಾಗಿದೆ. ಅಲ್ಲಿದ್ದ ಮರಗಳನ್ನು ಹಾಗೆಯೇ ಉಳಿಸಿ­ಕೊಳ್ಳಲಾಗಿದೆ. ಆದರೆ, ನೆಲಭಾಗದಲ್ಲಿ ಹೊಸ ಹುಲ್ಲು ಹಾಸನ್ನು ಬೆಳೆಸಲಾಗುತ್ತದೆ. ಅದರ ಮಧ್ಯೆಯೇ ಕಲ್ಲಿನ ಬೆಂಚುಗಳನ್ನು ಹಾಕ­ಲಾಗಿದೆ.

ಒಂದು ನಿರ್ದಿಷ್ಟ ಅಂತರದಲ್ಲಿ ಈ ಬೆಂಚು­ಗಳನ್ನು ಹಾಕಿಸಿರುವುದರಿಂದ ಇನ್ನೊಂ­ದು ವಿಭಾಗದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗೆಯೇ ಬಿಸಿಲಿ­ನಿಂದ ರಕ್ಷಣೆ ಪಡೆಯಲು ಮತ್ತೊಂದು ಹಸಿರಿನ ಚಪ್ಪರ ಹಾಕಿಸ­ಲಾಗಿದ್ದು, ಅದರ ಒಳ­ಗೆ ಬೆಂಚುಗಳನ್ನು ಎದುರು ಬದುರು ಹಾಕಲಾಗಿದೆ. ಅದರಲ್ಲಿ­ಯೇ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳಲು ಇಷ್ಟ­ವಿಲ್ಲ ಎಂದಾದರೆ, ನೈಸರ್ಗಿಕ­ವಾಗಿ ಎರಡು ಪ್ಯಾರಾ­ಬೋಲಾಗಳನ್ನು ನಿರ್ಮಿಸಲಾಗಿದ್ದು, ಊರ ಮುಂದಿನ ಕಟ್ಟೆಯ ಮೇಲೆ ಕುಳಿತಂತೆ ಕುಳಿತು­ಕೊಳ್ಳಬಹುದು.

‘ಇನ್ನೂ ಎರಡು ಇಂತಹ ಪ್ಯಾರಾಬೋಲಾಗಳನ್ನು ನಿರ್ಮಿ­ಸುವ ಉದ್ದೇಶವಿದೆ. ದೂರದಲ್ಲಿರುವ ಲೈಬ್ರರಿಗೆ ಹೋಗದ ವಿದ್ಯಾರ್ಥಿಗಳು ತಮ್ಮ ಅಲ್ಪ ಸಮಯದಲ್ಲಿಯೇ ಅಧ್ಯಯನ ಕೈಗೊಳ್ಳಲಿ ಎಂಬ ಉದ್ದೇಶದಿಂದ ಗ್ರೀನ್‌ ಲೈಬ್ರರಿ ನಿರ್ಮಿಸ­ಲಾಗಿದೆ. ಇಂತಹ ಪರಿಕಲ್ಪನೆ ದೇಶದ ಬೇರೆಲ್ಲಿಯೂ ಇಲ್ಲ. ಬಟಾನಿಕಲ್‌ ಗಾರ್ಡನ್‌ನಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತುಕೊಂಡೇ ಅಭ್ಯಾಸ ಮಾಡಬೇಕಿತ್ತು. ಅದನ್ನು ತಪ್ಪಿಸಲು ಗ್ರೀನ್‌ ಲೈಬ್ರರಿ ಯೋಜನೆ ಜಾರಿಗೊಳಿಸಲಾಗಿದೆ’ ಎನ್ನುತ್ತಾರೆ ಕರ್ನಾಟಕ ವಿ.ವಿ. ಕುಲಪತಿ ಪ್ರೊ.ಎಚ್.ಬಿ.­ವಾಲೀಕಾರ.

ರಾಜ್ಯಶಾಸ್ತ್ರದಲ್ಲಿ ಎಂ.ಎ.ಯನ್ನು ಈಚೆಗಷ್ಟೇ ಪೂರೈಸಿ ಸ್ಮರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತಿರುವ ಹೊನ್ನಾವರ ಮೂಲದ ಸುಬ್ರಹ್ಮಣ್ಯ, ‘ಹಸಿರು ವಾತಾವರಣದಲ್ಲಿ ಕುಳಿತು ಓದು­ವುದರ ಹಿತವೇ ಬೇರೆ. ಇಲ್ಲಿ ಯಾವುದೇ ಗಲಾಟೆ ಇರುವುದಿಲ್ಲ. ಸ್ನೇಹಿತರು ಪರಸ್ಪರ ಚರ್ಚಿಸಲೂ ಅವ­ಕಾಶವಿದೆ. ಉದ್ಘಾಟನೆಗೂ ಮುನ್ನವೇ ಸಾಕಷ್ಟು ವಿದ್ಯಾರ್ಥಿ­ಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದರು.

ಪ್ರೇಮಿಗಳ ಕಾಟವನ್ನು ತಡೆಯುವ ಉದ್ದೇಶದಿಂದ ಕವಿವಿ ಉದ್ಯಾನ ಇಲಾಖೆಯು ಹಲವು ಮಾರ್ಗಸೂಚಿಗಳನ್ನು ಗೇಟಿನ ಮುಂದೆ ಅಂಟಿಸಿದ್ದು, ‘ಉದ್ಯಾನದಲ್ಲಿ ಸಭ್ಯತೆಯಿಂದ ವರ್ತಿಸಿ’ ಎಂಬುದೂ ಅದರಲ್ಲಿನ ಒಂದು ಸೂಚನೆ. ವನಮಹೋತ್ಸವ ಆಚರಿಸಲು ಊಟ ಕಟ್ಟಿಕೊಂಡು ಬರುವವರಿಗೂ ಇಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT