ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಹೊಸ ಯೋಜನೆ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: 12ನೇ ಪಂಚವಾರ್ಷಿಕ ಯೋಜನೆಯಲ್ಲಿ, ಉನ್ನತ ಶಿಕ್ಷಣದಲ್ಲಿ ಸಮಗ್ರ ದಾಖಲಾತಿ ಪ್ರಮಾಣವನ್ನು ಶೇ 30ರಷ್ಟು ಹೆಚ್ಚಿಸುವ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮ ರೂಪಿಸುವ ಹಾದಿಯಲ್ಲಿದೆ.

`ಉದ್ದೇಶಿತ ಯೋಜನೆ ಅಡಿ ನೂತನ ಕಾಲೇಜುಗಳ ಸ್ಥಾಪನೆಗೆ ಅನುದಾನ ಹೆಚ್ಚಿಸಲಾಗುತ್ತದೆ, ವಿದ್ಯಾರ್ಥಿಗಳ ದಾಖಲಾತಿ ಅತಿ ಕಡಿಮೆ ಇರುವ ರಾಜ್ಯಗಳ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲಾಗುತ್ತದೆ~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಸರ್ಕಾರವು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದಲ್ಲಿ ಸಮಗ್ರ ದಾಖಲಾತಿ ಗುರಿಯನ್ನು ಶೇ 15ಕ್ಕೆ ನಿಗದಿ ಮಾಡಿತ್ತು. ಆದರೆ ಯೋಜನಾ ಆಯೋಗವು ಈ ಅವಧಿಯಲ್ಲಿ ನಡೆಸಿದ ಮಧ್ಯಾವಧಿ ಮೌಲ್ಯಮಾಪನದ ಪ್ರಕಾರ ದಾಖಲಾತಿ ಪ್ರಮಾಣ ಅತ್ಯಂತ ಕಡಿಮೆ ಇದೆ. ಈ ಪ್ರಮಾಣವು ವಿಶ್ವದ ಸರಾಸರಿ ಸಮಗ್ರ ದಾಖಲಾತಿ ಪ್ರಮಾಣದ ಸುಮಾರು ಅರ್ಧದಷ್ಟು, ಅಂದರೆ ಶೇ 24ರಷ್ಟು ಇದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೂರನೇ ಎರಡರಷ್ಟು, ಅಂದರೆ ಶೇ 18ರಷ್ಟು ಇದೆ. ಅಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ದಾಖಲಾತಿ ಪ್ರಮಾಣ ಶೇ 58ಕ್ಕಿಂತಲೂ ಅತ್ಯಂತ ಕಡಿಮೆ ಮಟ್ಟದಲ್ಲಿದೆ.

`ಖಾಸಗಿ ಹೂಡಿಕೆಗಳು ಹೆಚ್ಚಾದ ಪರಿಣಾಮವಾಗಿ ಕಳೆದ ಎರಡು ದಶಕಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರವು ಹೊಸ ಸಂಸ್ಥೆಗಳ ಸ್ಥಾಪನೆಯಲ್ಲಿ ಗಣನೀಯ ಹೆಚ್ಚಳವನ್ನು ಕಂಡಿದೆ. ಆದರೆ ಈ ಸಂಸ್ಥೆಗಳು ನಗರ ಕೇಂದ್ರಗಳು ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಮಾತ್ರವೇ ಸೀಮಿತವಾಗಿವೆ. ಹಾಗಾಗಿ ಸಮಗ್ರ ದಾಖಲಾತಿ ಪ್ರಮಾಣದಲ್ಲಿ ಈ ರೀತಿ ಸಾಮಾಜಿಕ ಹಾಗೂ ಪ್ರಾಂತೀಯ ಅಸಮಾನತೆ ಹೆಚ್ಚುತ್ತಲೇ ಹೋಗುತ್ತಿದೆ~ ಎಂದು ಸಚಿವಾಲಯದ ಮೂಲಗಳು ವ್ಯಾಖ್ಯಾನಿಸುತ್ತವೆ.

`12ನೇ ಪಂಚವಾರ್ಷಿಕ ಯೋಜನೆಯಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳವನ್ನು ಶೇ 30ಕ್ಕೆ ನಿಗದಿ ಮಾಡಿದರೆ, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಈಗಿರುವ ದಾಖಲಾತಿ ಪ್ರಮಾಣವನ್ನು 14 ದಶಲಕ್ಷದಿಂದ 22 ದಶಲಕ್ಷಕ್ಕೆ ಹೆಚ್ಚಿಸಬೇಕಾಗುತ್ತದೆ~ ಎಂದು ಯುಜಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯೋಜನೆಯೊಂದರಲ್ಲಿ ಯುಜಿಸಿ, ಈಗಾಗಲೇ ಶೈಕ್ಷಣಿಕವಾಗಿ ಹಿಂದುಳಿದ ಆಯ್ದ 374 ಜಿಲ್ಲೆಗಳಲ್ಲಿ ಮಾದರಿ ಪದವಿ ಕಾಲೇಜುಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ ನೀಡುತ್ತಿದೆ.

ಹಿಂದುಳಿದ ಜಿಲ್ಲೆಗಳಲ್ಲಿ ಮಾದರಿ ಪದವಿ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯಗಳಿಂದ ಬಂದ ಒಟ್ಟು 142 ಪ್ರಸ್ತಾವಗಳಲ್ಲಿ ಕೇವಲ 78 ಪ್ರಸ್ತಾವಗಳಿಗೆ ಮಾತ್ರವೇ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ಈವರೆಗೆ ಅನುಮೋದನೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT