ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಭಾವ ಲಹರಿ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಆವತ್ತು ಸಿಎಂಆರ್ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಐದು ವರ್ಷಗಳ ಶ್ರಮಕ್ಕೆ ಪ್ರತಿಫಲವಾಗಿ ಪದವಿ ಸಿಕ್ಕಿದ್ದು ಅವರ ಖುಷಿಗೆ ಕಾರಣ. ಮಕ್ಕಳು ಸಂಭ್ರಮಿಸುತ್ತಿದ್ದ ಪರಿಯನ್ನು ಕಣ್ತುಂಬಿಕೊಂಡ ಪೋಷಕರ ಕಣ್ಣುಗಳಲ್ಲೂ ಆನಂದಭಾಷ್ಪ. ಅಲ್ಲಿಯೇ ಇದ್ದ ಪ್ರಾಧ್ಯಾಪಕರ ಮೊಗದಲ್ಲಿ ಮೆಚ್ಚುಗೆಯ ಭಾವ.

ಇದೇ ವೇಳೆ ಪದವಿ ಪಡೆದುಕೊಂಡ ಖುಷಿಯಲ್ಲಿ ತೇಲುತ್ತಿದ್ದ ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ತಮ್ಮದಾಗಿಸಿಕೊಂಡ ಮಧುರ ನೆನಪುಗಳನ್ನು ತೋಡಿಕೊಂಡರು.
`ಕಳೆದ ಐದು ವರ್ಷಗಳಿಂದ ಸಿಎಂಆರ್ ಕಾನೂನು ಶಾಲೆಯ ಆವರಣ ನಮ್ಮ ಮನೆ ಹಾಗೂ ಆಟದ ಮೈದಾನದಂತಿತ್ತು. ಕಾಲೇಜಿಗೆ ಸೇರಿದ ಮೊದಲನೆಯ ದಿನದಂದು ಪರಿಚಿತರಾದ ನನ್ನ ಸ್ನೇಹಿತರ ಜತೆಗಿನ ನಂಟು ಈಗ ಬೆಳೆದು ಹೆಮ್ಮರವಾಗಿದೆ.

ಇಂದು ನಾನು ಇರಬೇಕಾಗಿರುವ ಹಾಗಿಲ್ಲ, ಏನಾಗಬೇಕಿತ್ತೋ ಹಾಗೂ ಇಲ್ಲ. ಆದರೆ, ಹಿಂದೆ ನಾನೇನಾಗಿದ್ದೆನೋ ಅದಕ್ಕಿಂತ ಉತ್ತಮ ವ್ಯಕ್ತಿಯಾಗಿದ್ದೇನೆ. ನನಗೆ ಈ ಐದು ವರ್ಷಗಳು ಅತ್ಯಂತ ಸುದೀರ್ಘ ಹೋರಾಟದ ದಿನಗಳಾಗಿದ್ದವು. ಅವೆಲ್ಲವನ್ನೂ ಮೀರಿ ನಿಂತು ಪದವಿ ಎಂಬ ಘಟ್ಟವನ್ನು ಯಶಸ್ವಿಯಾಗಿ ಪೂರೈಸಿರುವುದು ಅತ್ಯಂತ ಖುಷಿಯ ಸಂಗತಿ' ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು ಅರವಿಂದ್ ಸುಂದರಂ.

`ನಮ್ಮ ದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ 32 ಮಂದಿ ಇನ್ನೂ ಬಡತನದ ರೇಖೆಗಿಂತ ಕೆಳಗಿದ್ದಾರೆ. ನ್ಯಾಯವಾದಿಗಳು ನ್ಯಾಯಾಲಯಗಳಲ್ಲಿ ಕೇವಲ ವ್ಯಾಜ್ಯಗಳನ್ನು ಪೂರ್ಣಗೊಳಿಸಿದರಷ್ಟೇ ಸಾಲದು. ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ಹೊರುವ ಅಗತ್ಯವಿದೆ. ಮಹಿಳೆಯರ ಘನತೆಗೆ ಸಂಬಂಧಿಸಿದಂತೆ ತೋರಲಾಗುತ್ತಿರುವ ಅಸಮಾನತೆ ಹಾಗೂ ತಾರತಮ್ಯ ಹೋಗಲಾಡಿಸಲು, ಅವಕಾಶವಂಚಿತ ಹಾಗೂ ಬಡವರ ಏಳಿಗೆಗಾಗಿ ಕಾನೂನು ಬಳಸಬೇಕು' ಎಂದು ಅವರು ಮಾತು ಸೇರಿಸಿದರು.
ಸಿಎಂಆರ್ ಕಾನೂನು ಶಾಲೆಯಲ್ಲಿ ನಡೆದ ಆರನೇ ಕಾನೂನು ಪದವಿ ಪ್ರಧಾನ ಸಮಾರಂಭದಲ್ಲಿ ಡಾ.ಎನ್.ಆರ್. ಮಾಧವ ಮೆನನ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಮಾ ಪ್ರಭಾಕರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT