ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ `ಲೀಡ್ ಪಯಣ'

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಿಗೆ ಸೇರಿದ್ದ 100 ವಿದ್ಯಾರ್ಥಿಗಳ ತಂಡ ಪಕ್ಕದ ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಸಂಚರಿಸಿ 12 ಮಂದಿ ಸಾಧಕರನ್ನು ಭೇಟಿ ಮಾಡುವ ಕನಸಿನ `ಲೀಡ್ ಪಯಣ'ಕ್ಕೆ ಗುರುವಾರ ಸಂಜೆ ಇಲ್ಲಿನ ದೇಶಪಾಂಡೆ ಫೌಂಡೇಶನ್ ಆವರಣದಲ್ಲಿ ಚಾಲನೆ ನೀಡಲಾಯಿತು.

ಯುವಜನತೆಯಲ್ಲಿ ನಾಯಕತ್ವ ಗುಣ ಬೆಳೆಸಿ ಅವರನ್ನು ಉದ್ಯಮಶೀಲರನ್ನಾಗಿಸಲು ದೇಶಪಾಂಡೆ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಈ 14 ದಿನಗಳ  ಪ್ರಯಾಣದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿ  ಬಂದಿದ್ದ ವಿದ್ಯಾರ್ಥಿಗಳನ್ನು ಬಣ್ಣಬಣ್ಣದ ಧ್ವಜಗಳು ಸ್ವಾಗತಿಸಿದವು. ದೇಶಪಾಂಡೆ ಫೌಂಡೇಶನ್‌ನ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಪ್ರಯಾಣಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿಯಿಂದ ಮೂರು ಬಸ್‌ಗಳಲ್ಲಿ ಹೊರಟ ಲೀಡ್ ತಂಡ ಇದೇ 18ರಂದು ಆಂಧ್ರಪ್ರದೇಶದ ಕುಪ್ಪಂಗೆ ತೆರಳಿ ಅಲ್ಲಿ ಅಗಸ್ತ್ಯ ಫೌಂಡೇಶನ್‌ನ ಸ್ಥಾಪಕ ರಾಮ್‌ಜಿ ರಾಘವನ್ ಅವರನ್ನು ಭೇಟಿ ಮಾಡಲಿದೆ. ನಂತರ 19ರಿಂದ 21ರವರೆಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಉದ್ಯಮಿಗಳಾದ ಹರೀಶ್ ಹಂದೆ, ರೋಹಿಣಿ ನೀಲೆಕಣಿ, ಫಣೀಂದ್ರ ಸಮಾ ಹಾಗೂ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಅವರನ್ನು ಭೇಟಿ ಮಾಡಲಿದೆ.

ಇದೇ 21ರಂದು ಲೀಡ್ ತಂಡ ದೊಡ್ಡಬಳ್ಳಾಪುರಕ್ಕೆ ಪ್ರಯಾಣ ಮಾಡಿ ಸಾವಯವ ಕೃಷಿ ನಾರಾಯಣ ರೆಡ್ಡಿ ಅವರ ತೋಟದಲ್ಲಿ ಉಳಿಯಲಿದೆ. 21ರಿಂದ 23ರವರೆಗೆ ಮೈಸೂರಿನಲ್ಲಿ ವಾಸ್ತವ್ಯ ಹೂಡಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಲಿದೆ.

ನಂತರ 24ರಂದು ಮಣಿಪಾಲಕ್ಕೆ ತೆರಳಿ ಮಂಗಳೂರಿನಲ್ಲಿ ಐಒಬಿ ಮುಖ್ಯ ವ್ಯವಸ್ಥಾಪಕ ಎಂ.ನರೇಂದ್ರ ಅವರೊಂದಿಗೆ ಸಂವಾದ ನಡೆಸಲಿದೆ. 25ರಂದು ಧರ್ಮಸ್ಥಳಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದು, 26ರಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದೆ.

27ರಂದು ಹುಬ್ಬಳ್ಳಿಗೆ ಮರಳಲಿದ್ದು, ಇನ್‌ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಭೇಟಿ. 28ರಂದು ಹುಬ್ಬಳ್ಳಿಯ ವರೂರಿನ ವಿಆರ್‌ಎಲ್ ಕ್ಯಾಂಪಸ್, ಇಸ್ಕಾನ್ ಸಂಸ್ಥೆ ಹಾಗೂ ಕಲಕೇರಿ ಸಂಗೀತ ವಿದ್ಯಾಲಯಕ್ಕೆ ತೆರಳಲಿದೆ.

29ರಂದು ಧಾರವಾಡದ ಮಾರ್ಕೊಪೊಲೊ ಘಟಕಕ್ಕೆ ಭೇಟಿ ನಂತರ ದೇಶಪಾಂಡೆ ಫೌಂಡೇಶನ್ ಸ್ಥಾಪಕ ಗುರುರಾಜ ದೇಶಪಾಂಡೆ ಅವರೊಂದಿಗೆ ಸಂವಾದ ನಡೆಸಲಿದೆ. ಇದೇ 30ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವ ಸಮ್ಮೇಳನದಲ್ಲಿ ಟಾಟಾ ಸಮೂಹದ ರತನ್ ಟಾಟಾ, ಇನ್‌ಫೋಸಿಸ್‌ನ ನಾರಾಯಣಮೂರ್ತಿ ಅವರೊಂದಿಗೆ ಸಂವಾದ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT