ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪುರಸ್ಕಾರ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 1,246 ಮಂದಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ `ಕನ್ನಡ ಮಾಧ್ಯಮ ಪುರಸ್ಕಾರ~ ನೀಡಿ ಗೌರವಿಸಲಿದೆ.

ಈ ವಿಷಯವನ್ನು ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ವಿಭಾಗವಾರು ಅತಿ ಹೆಚ್ಚು ಅಂಕ ಪಡೆದವರನ್ನು ಪ್ರತ್ಯೇಕ ಸಮಾರಂಭಗಳಲ್ಲಿ ಸನ್ಮಾನಿಸಲಾಗುವುದು ಎಂದರು.

ಬೆಂಗಳೂರು ವಿಭಾಗದ ಕಾರ್ಯಕ್ರಮವನ್ನು ಇದೇ 23ರಂದು ಬೆಂಗಳೂರಿನಲ್ಲಿ ಹಾಗೂ ಮೈಸೂರು ವಿಭಾಗದ ಕಾರ್ಯಕ್ರಮವನ್ನು ಇದೇ 30ರಂದು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ವಿಭಾಗದ ಕಾರ್ಯಕ್ರಮ ಡಿ.4ರಂದು ಬೆಳಗಾವಿಯಲ್ಲಿ ನಡೆಯಲಿದೆ. ಗುಲ್ಬರ್ಗ ವಿಭಾಗದ ಕಾರ್ಯಕ್ರಮದ ದಿನ ಇನ್ನೂ ನಿಗದಿಯಾಗಿಲ್ಲ ಎಂದು ಅವರು ವಿವರಿಸಿದರು.

ಮೂರು ಬಹುಮಾನಗಳನ್ನು ನೀಡುತ್ತಿದ್ದು, ಮೊದಲ ಬಹುಮಾನ ಪಡೆದವರಿಗೆ ರೂ 8,000, ಎರಡನೇ ಬಹುಮಾನ ಪಡೆದವರಿಗೆ ರೂ 7,000 ಮತ್ತು ಮೂರನೇ ಬಹುಮಾನ ಪಡೆದವರಿಗೆ ರೂ 6,000 ನಗದು ನೀಡಲಾಗುವುದು. ಇದರ ಜತೆಗೆ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ, ಕೈಗಡಿಯಾರ, ಶಾಲಾ ಬ್ಯಾಗ್, ಪೆನ್, ನಿಘಂಟು ನೀಡಲಾಗುವುದು. ವಿದ್ಯಾರ್ಥಿಗಳ ಜತೆಗೆ ಪೋಷಕರನ್ನೂ ಸನ್ಮಾನಿಸಲಾಗುವುದು ಎಂದರು.

ಇದಲ್ಲದೆ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೇ ಅತಿ ಹೆಚ್ಚು ಅಂಕ ಪಡೆದ ಸಿದ್ಧಾಪುರ ತಾಲ್ಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಗಣೇಶ್ ಮಹಾಬಲೇಶ್ವರ ಹೆಗಡೆ (ಅಂಕ 614) ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಗದಗದ ಎಚ್‌ಸಿಇಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇಸ್ರರ್‌ಬಾನು ಬಳ್ಳಾರಿ (ಅಂಕ 527) ಅವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಿ ನಡೆಯಲಿದ್ದು, ಇಬ್ಬರಿಗೂ ತಲಾ 15 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT