ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ತಲುಪದ ವಿದ್ಯಾರ್ಥಿ ವೇತನ

Last Updated 6 ಆಗಸ್ಟ್ 2013, 6:23 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ಪ್ರತಿಭಾವಂತ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡುತ್ತಿದ್ದ ಹತ್ತು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಎರಡು ವರ್ಷಗಳಿಂದ ದೊರಕಿಲ್ಲ.

ನೇರ ನಗದು ಯೋಜನೆಗೆ ಒಳಪಟ್ಟಿರುವ ತುಮಕೂರು, ಮೈಸೂರು, ಧಾರವಾಡ ಜಿಲ್ಲೆಯ 759 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವಿದ್ಯಾರ್ಥಿಗೆ ಪದವಿ ವ್ಯಾಸಂಗಕ್ಕೆ ಪ್ರತಿ ವರ್ಷ 10 ಸಾವಿರ, ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ 20 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಿದೆ.

2011-12ನೇ ಸಾಲಿನಲ್ಲಿ ರಾಜ್ಯದ 4237 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ತುಮಕೂರು, ಮೈಸೂರು, ಧಾರವಾಡ ಜಿಲ್ಲೆಯ 759 (ತುಮಕೂರು ಜಿಲ್ಲೆಯಲ್ಲಿ 329) ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ವಿದ್ಯಾರ್ಥಿ ವೇತನ ಪ್ರತಿವರ್ಷ ದೊರಕುತ್ತಿದೆ. ಆದರೆ ನೇರ ನಗದು ಯೋಜನೆಯಡಿ ಆಯ್ಕೆಯಾದ ಮೂರು ಜಿಲ್ಲೆ ವಿದ್ಯಾರ್ಥಿಗಳಿಗೆ ಮಾತ್ರ ಇದುವರೆಗೂ ಬಿಡಿಗಾಸು ಸಿಕ್ಕಿಲ್ಲ. ಇದರಿಂದ ಪ್ರತಿಭಾವಂತರ ವಿದ್ಯಾಭ್ಯಾಸಕ್ಕೂ ತೊಡಕಾಗಿದೆ.

`ಮನೆಯಲ್ಲಿ ಬಡತನ. ಓದು ಮುಂದುವರಿಸಲು ಕಷ್ಟವಾಗುತ್ತಿದೆ. ಒಳ್ಳೆಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಕನಸಿದೆ. ಆದರೆ ಎರಡು ವರ್ಷ ಕಳೆದರೂ ವಿದ್ಯಾರ್ಥಿ ವೇತನ ಬಂದಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ' ಎಂಬ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯ ಸಲ್ಮಾನ್ ಅಳಲು ತೋಡಿಕೊಂಡರು.

ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪರಿಸ್ಥಿತಿ ಸಹ ಇದಕ್ಕೆ ಹೊರತಾಗಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಪರ್ಕಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ, ನಿಮ್ಮ ಅರ್ಜಿಗಳನ್ನು ದೆಹಲಿಗೆ ಕಳುಹಿಸಲಾಗಿದೆ. ಅಲ್ಲಿಂದಲೇ ಹಣ ವರ್ಗಾವಣೆ ಮಾಡುತ್ತಾರೆ ಎಂದು ಫೋನ್ ಇಟ್ಟು ಬಿಡುತ್ತಾರೆ. ಇಲ್ಲವೆ ದೆಹಲಿಯ ಫೋನ್ ನಂಬರ್ ಕೊಟ್ಟು ಅವರನ್ನೇ ಕೇಳಿ ಎಂದು ಕೈತೊಳೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

`ನಮ್ಮ ನಂತರದ ತರಗತಿ ವಿದ್ಯಾರ್ಥಿಗಳಿಗೂ ಸಹ ಈ ವಿದ್ಯಾರ್ಥಿವೇತನ ಮಂಜೂರಾಗಿದೆ, ಆದರೆ ನಮಗೆ ಇನ್ನೂ ಬಿಡಿಗಾಸು ಸಿಕ್ಕಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದರೆ ಎಲ್ಲ ದೆಹಲಿ ಕಡೆ ಕೈತೋರುತ್ತಾರೆ' ಎಂದು ದೂರುತ್ತಾರೆ. `2011-12ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಲು ಕೇಂದ್ರ ಸರ್ಕಾರ ರೂ. 22 ಲಕ್ಷ ಕಡಿಮೆ ಹಣವನ್ನು ನೀಡಿತ್ತು.

ಈ ವಿಷಯವಾಗಿ ಇಲಾಖೆಗೆ ಪತ್ರ ಬರೆದ ನಂತರ ನಾವೇ ಹಣವನ್ನು ನೇರ ನಗದು ಯೋಜನೆಯಡಿ ನೀಡುತ್ತೇವೆ ಎಂದು ಹೇಳಿದ್ದರಿಂದ ಅರ್ಜಿಯನ್ನು ಕಳೆದ ಡಿಸೆಂಬರ್ 1ರಂದು ದೆಹಲಿಗೆ ಕಳುಹಿಸಿಕೊಡಲಾಯಿತು. ವಿದ್ಯಾರ್ಥಿಗಳ ಒತ್ತಡ ಜಾಸ್ತಿಯಿದೆ, ಬೇಗ ವಿದ್ಯಾರ್ಥಿ ವೇತನ ನೀಡುವಂತೆ ದೆಹಲಿಯ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ' ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಸುನಂದ `ಪ್ರಜಾವಾಣಿ'ಗೆ ತಿಳಿಸಿದರು.
-ಎ.ಎನ್.ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT