ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಪುಸ್ತಕ

Last Updated 15 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಕೃತಿಗಳನ್ನು ಖರೀದಿಸುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಕೃತಿಗಳ ಮೇಲೆ ಶೇ 33ರಷ್ಟು ರಿಯಾಯ್ತಿ ನೀಡಲಾಗುವುದು’ ಎಂದು ಸಚಿವ ಗೋವಿಂದ ಕಾರಜೋಳ ಪ್ರಕಟಿಸಿದರು.ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯಕೀಯ ಸಾಹಿತ್ಯ ಮಾಲೆಯ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಲೇಖಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಯುವಜನತೆಯಲ್ಲಿ ಓದುವ ಅಭಿರುಚಿಯನ್ನು ಮೂಡಿಸಬೇಕಿದೆ. ಹಾಗಾಗಿ ಗುರುತಿನ ಚೀಟಿ ತೋರಿಸುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯ್ತಿ ನೀಡಲಾಗುವುದು. ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು’ ಎಂದರು.‘ಪ್ರಾಧಿಕಾರವು ಜನರಿಗೆ ಅಗತ್ಯವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ವೈದ್ಯಕೀಯ ಸಾಹಿತ್ಯ ಮಾಲೆಯಡಿ ಆರೋಗ್ಯಕ್ಕೆ ಸಂಬಂಧಪಟ್ಟ ಕೃತಿಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕಟಿಸಿರುವುದು ಶ್ಲಾಘನೀಯ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಪಾರಿ ವಸ್ತು:ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ‘ಪುರಾತನವೆನಿಸಿದ ಭಾರತೀಯ ವೈದ್ಯ ಪದ್ಧತಿ ಕ್ಷೀಣಿಸುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ಔಷಧ ಮಾರಾಟಕ್ಕಾಗಿ ನಾನಾ ಕಸರತ್ತು ನಡೆಸುತ್ತಿವೆ. ಇದೇ ಕಾರಣಕ್ಕೆ ದೇಶದಲ್ಲಿನ ವೈದ್ಯ ಪದ್ಧತಿಯನ್ನು ಹಾಳು ಮಾಡುತ್ತಿವೆ. ಪರಿಣಾಮ ಇಂದು ವೈದ್ಯ ಪದ್ಧತಿ ವ್ಯಾಪಾರಿ ವಸ್ತುವಿನಂತಾಗಿದೆ’ ಎಂದು ವಿಷಾದಿಸಿದರು.

‘ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆ ಸಂಸ್ಥೆಗಳ ಕಾಯ್ದೆಯನ್ವಯ ಪ್ರತಿ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಹಾಗೂ ವೈದ್ಯರ ಸೇವಾ ಶುಲ್ಕದ ವಿವರವನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ಹಾಗೆಯೇ ಶುಲ್ಕ ಪಡೆದು ರೋಗಿಯ ರೋಗದ ವಿವರವನ್ನು (ಕೇಸ್ ಶೀಟ್) ಕನ್ನಡದಲ್ಲಿಯೇ ನೀಡಬೇಕು ಎಂದು ಸೂಚಿಸಿ ಸದ್ಯದಲ್ಲೇ ಸುತ್ತೋಲೆ ಹೊರಡಿಸಲಾಗುವುದು. ಪ್ರತಿಯೊಬ್ಬ ರೋಗಿಯೂ ತನಗಿರುವ ರೋಗದ ಬಗ್ಗೆ ತಿಳಿದುಕೊಳ್ಳುವುದರಿಂದ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ’ ಎಂದರು.‘ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯ ಕುರಿತ ಕೃತಿಗಳನ್ನು ಪ್ರಕಟಿಸಿರುವುದು ಉತ್ತಮವಾಗಿದೆ. ಪ್ರಾಧಿಕಾರ ಅನುಮತಿ ನೀಡಿದ್ದೇ ಆದರೆ ವೈದ್ಯಕೀಯ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಈ ಕೃತಿಗಳನ್ನು ಪ್ರಕಟಿಸಲಾಗುವುದು’ ಎಂದು ಹೇಳಿದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಮಾತನಾಡಿ, ‘ವೈದ್ಯಕೀಯ ಸಾಹಿತ್ಯ ಸವಾಲಿನ ಕೆಲಸವೆನಿಸಿದ್ದರೂ ಲೇಖಕರು ಸರಳ ಭಾಷೆಯಲ್ಲಿ ರಚಿಸಿದ್ದಾರೆ. ಆ ಮೂಲಕ ಲೇಖಕರು ಕನ್ನಡದ ಬಗೆಗಿನ ಬದ್ಧತೆಯನ್ನು ತೋರಿದ್ದಾರೆ. ವೈದ್ಯಕೀಯ ಸಾಹಿತ್ಯದ ಅಗತ್ಯ ತೀವ್ರವಾಗಿದ್ದು, ಇನ್ನೂ 25 ಕೃತಿಗಳನ್ನು ಪ್ರಕಟಿಸಲಾಗುವುದು’ ಎಂದರು.‘ಯುವ ಜನತೆಯಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಉದ್ದೇಶದಿಂದ ಪ್ರಾಧಿಕಾರ ಪ್ರಕಟಿಸಿರುವ ಕೃತಿಗಳ ಮೇಲೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಶೇ 33ರಷ್ಟು ರಿಯಾಯ್ತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು. ಅದಕ್ಕೆ ಸಚಿವರು ಸ್ಪಂದಿಸಿದ್ದು ಸಂತಸ ತಂದಿದೆ’ ಎಂದು ಹೇಳಿದರು.

ಕೃತಿಗಳ ಕುರಿತು ಮಾತನಾಡಿದ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ‘ವೈದ್ಯಕೀಯ ಸೇವೆ ಇಂದು ವಾಣಿಜ್ಯಮಯವಾಗಿದೆ. ನಿಸ್ವಾರ್ಥ ಸೇವೆ ಎಂಬುದೇ ಇಲ್ಲದಂತಾಗಿದೆ. ಆಹಾರ ಸೇವನೆ ವಿಧಾನ, ನಿದ್ರೆಗೆಡುವುದು, ಮಾನಸಿಕ ಖಿನ್ನತೆ, ಕಲುಷಿತ ಪರಿಸರದಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ’ ಎಂದರು.

‘ಜನರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಹೈಟೆಕ್ ಆಸ್ಪತ್ರೆಗಳು ಹಣ ಸುಲಿಯುತ್ತಿವೆ. ಜನರ ದಾರಿ ತಪ್ಪಿಸುತ್ತಿವೆ. ಈ ಸಂದರ್ಭದಲ್ಲಿ ವೈದ್ಯಕೀಯ ಕೃತಿಗಳನ್ನು ಪ್ರಕಟಿಸಿರುವುದು ಉತ್ತಮವಾಗಿದೆ. ಇವು ಅಮೂಲ್ಯವಾದ ವೈದ್ಯಕೀಯ ಕೃತಿಗಳೆನಿಸಿವೆ. ಇದರಿಂದ ರೋಗ- ರುಜಿನಗಳ ಬಗ್ಗೆ ಜನರಿಗೆ ಕನಿಷ್ಠ ಜ್ಞಾನ ದೊರೆಯಲಿದೆ ಎಂಬ ವಿಶ್ವಾಸವಿದೆ’ ಎಂದು ನುಡಿದರು.ಸಮಾರಂಭದಲ್ಲಿ ಒಟ್ಟು 25 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT