ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿದ್ದಾರೆ...ಸೌಕರ್ಯಗಳಿಲ್ಲ!

Last Updated 16 ನವೆಂಬರ್ 2011, 8:45 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಶೌಚಾಲಯ ಇಲ್ಲ, ಕುಡಿಯುವ ನೀರಿಲ್ಲ,  ಒಂದೇ ಕೊಠಡಿಯಲ್ಲಿ ಪ್ರಾಂಶುಪಾಲ, ಸಿಬ್ಬಂದಿ, ಪ್ರಯೋಗಾಲಯ...

ಇದು ಪಟ್ಟಣದ ಸಮೀಪ  ಶ್ರೀರಾಮ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಿತಿ. 2007-08ನೇ ಸಾಲಿಗೆ ಹೊಸದಾಗಿ ಪದವಿ ಪೂರ್ವ ಕಾಲೇಜು ಆರಂಭಿಸಲಾಯಿತು. ಕಲಾ, ವಿಜ್ಞಾನ ವಿಭಾಗಗಳಿವೆ. ಕಲಾ ವಿಭಾಗದಲ್ಲಿ  83 ಹಾಗೂ ವಿಜ್ಞಾನ ವಿಭಾಗದಲ್ಲಿ 53 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.  ಉತ್ತಮ ಫಲಿತಾಂಶ ಲಭ್ಯವಾಗುತ್ತಿದೆ. ಕಾಲೇಜಿನಲ್ಲಿ ಉಪನ್ಯಾಸಕರಿಗೇನು ಕೊರತೆ ಇಲ್ಲಾ.

ಆದರೆ ಇತರೆ ಸೌಕರ್ಯ ಮರೀಚಿಕೆಯಾಗಿದೆ. ಮುಖ್ಯವಾಗಿ ಕೊಠಡಿಗಳ ಕೊರತೆ ಉಂಟಾಗಿದೆ. ಮೂರು ಕೊಠಡಿ ನಿರ್ಮಿಸಲಾಗಿದೆ. ಎರಡು ಕೊಠಡಿಯಲ್ಲಿ ತರಗತಿ ನಡೆಯುತ್ತದೆ. ಉಳಿದ ಒಂದು ಕೊಠಡಿಯಲ್ಲಿ ಪ್ರಾಂಶುಪಾಲ, ಉಪನ್ಯಾಸಕ ವರ್ಗ, ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ.

10 ವಿದ್ಯಾರ್ಥಿಗಳಿಗಷ್ಟೇ ಪ್ರಯೋಗಾಲಯದಲ್ಲಿ ಹೇಳಿಕೊಡಲು ಸಾಧ್ಯ, ಹಾಗಾಗಿ ವಾರದ 6 ಆರು ದಿನಗಳಲ್ಲಿ ಪ್ರಯೋಗಾಲಯದ ತರಗತಿ ಇರುತ್ತದೆ. ಕಳೆದ ವರ್ಷದ ತನಕ ಪಟ್ಟಣದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಯೋಗಾಲಯದ ತರಗತಿಗಳು ನಡೆಯುತ್ತಿದ್ದವು.

ಮಾಧ್ಯಮಿಕ ಶಾಲೆಗೆ ಸೇರಿದ ಎರಡು ಕೊಠಡಿಯಲ್ಲಿ ವಿಜ್ಞಾನ ವಿಭಾಗದ ತರಗತಿ ನಡೆಸಲಾಗುತ್ತಿದೆ. ವಿಜ್ಞಾನ ವಿಭಾಗ ನಡೆಸುವ ಎರಡು ಕೊಠಡಿಗಳು ಶಿಥಿಲಗೊಂಡಿವೆ. ಇಷ್ಟು ಮಾತ್ರವಲ್ಲದೇ ಮತ್ತಷ್ಟು ಸಮಸ್ಯೆಗಳ ಸರಮಾಲೆಗಳಿವೆ. ಗುಮಾಸ್ತ, ಡಿ ಗ್ರೂಪ್ ನೌಕರ ಸಿಬ್ಬಂದಿ ಇಲ್ಲ. ಜೀವಶಾಸ್ತ್ರದ ಉಪನ್ಯಾಸಕ ಹುದ್ದೆ ಖಾಲಿ ಇದೆ. ಗ್ರಂಥಾಲಯ, ಕ್ರೀಡಾ ಕೊಠಡಿ ಇಲ್ಲ.

ಪ್ರಾಂಶುಪಾಲ ಕೊಠಡಿಯಲ್ಲಿನ ಕಪಾಟಿನಲ್ಲಿ ಗ್ರಂಥಾಲಯದ ಪುಸ್ತಕ ಇಡಲಾಗಿದೆ. ಇದನ್ನು ವಿತರಿಸಲು ಉಪನ್ಯಾಸಕರನ್ನು ನೇಮಿಸಲಾಗಿದೆ. ಇದೇ ರೀತಿ ಕ್ರೀಡಾ ಸಾಮಗ್ರಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕೆಲ ಕೊರತೆ ನಡುವೆ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಹಿರ್ದೆಸೆಗಾಗಿ ಪಕ್ಕದಲ್ಲಿರುವ ಮಾಧ್ಯಮಿಕ ಶಾಲೆಯ ಶೌಚಾಲಯ ಉಪಯೋಗಿಸುತ್ತಾರೆ. ವಿದ್ಯಾರ್ಥಿಗಳು ಬಯಲು ಅವಲಂಬಿಸಬೇಕಿದೆ. ಆದರೆ ವಿದ್ಯಾರ್ಥಿನಿಯರು ಪಾಡು ಹೇಳತೀರದು.

ಕಾಲೇಜು ಪಕ್ಕದಲ್ಲಿ ಬಿ.ಎಂ. ರಸ್ತೆ ಹಾದು ಹೋಗಿದೆ. ಗ್ರಾಮಾಂತರ ಪ್ರದೇಶದಿಂದ ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಬಸ್ ನಿಲುಗಡೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು 2 ಕಿ.ಮೀ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಇಳಿದು ವಾಪಸ್ ನಡೆದುಕೊಂಡು ಬರಬೇಕಿದೆ.

ಕಾಲೇಜಿಗೆ ಇನ್ನೂ 9 ಕೊಠಡಿಗಳ ಅವಶ್ಯಕತೆ ಇದೆ. ಈ ಬಗ್ಗೆ ಸ್ಥಳೀಯ ಶಾಸಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಮುಖ್ಯಸ್ಥರು ಗಮನ ಹರಿಸಿ ಸೌಕರ್ಯ ಒದಗಿಸಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT