ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೇ ಗಣಿತ ತಜ್ಞರಾದಾಗ...!

Last Updated 24 ಡಿಸೆಂಬರ್ 2013, 8:00 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬೇರೆ ಬೇರೆ ಗ್ರಹಗಳಲ್ಲಿ ವಸ್ತುಗಳ ಹಾಗೂ ಮನುಷ್ಯರ ತೂಕವನ್ನು ಗಣಿತ ಸೂತ್ರಗಳ ಆಧಾರದಲ್ಲಿ ಎಷ್ಟಿರು­ತ್ತದೆ ಎಂದು ಲೆಕ್ಕ ಹಾಕುವುದು, ಬ್ಯಾಂಕುಗಳಲ್ಲಿ ಗಣಿತದ ಉಪಯೋಗ, ಗಣಿತದ ಆಧಾರದ ಮೇಲೆ ಬೇರೆ ಬೇರೆ ದೇಶಗಳ ಹಣದ ಮತ್ತು ಭಾರತ ರೂಪಾಯಿ ಮೌಲ್ಯ ತಿಳಿದುಕೊಳ್ಳುವುದು, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಣಿತದ ಉಪಯೋಗ, ಅಬಾಕಸ್‌ ಸಾಧನೆ ಮೂಲಕ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು.

50 ವರ್ಷಗಳ ಮುಂದಿನ ಮತ್ತು 100 ವರ್ಷಗಳ ಹಿಂದಿನ ದಿನಾಂಕ ಮತ್ತು ಕ್ಯಾಲೆಂಡರ್‌ಗಳನ್ನು ಗಣಿತ ಸೂತ್ರಗಳಿಂದ ತಿಳಿದುಕೊಳ್ಳುವ ರೀತಿಯ ಕುರಿತು ವಿದ್ಯಾರ್ಥಿಗಳು ವಿವರಿಸುವಾಗ ನಿಜಕ್ಕೂ ಅವರು ಗಣಿತ ತಜ್ಞರೇ ಆಗಿದ್ದರು. ಹೌದು. ಪಟ್ಟಣದ ಸ್ಕೂಲ್‌ ಚಂದನದಲ್ಲಿ ಭಾನುವಾರ ಗಣಿತ ದಿನದ ಅಂಗ­ವಾಗಿ ಜರುಗಿದ ಗಣಿತ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ ಇದು.

ವಿಶ್ವವಿಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಈ ಗಣಿತ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಆರ್ಯಭಟನಿಂದ ಶ್ರೀನಿವಾಸ ರಾಮಾನುಜನ್‌ವರೆಗಿನ ಗಣಿತ ತಜ್ಞರ ಜೀವನ ಸಾಧನೆ ಕುರಿತು ವಿದ್ಯಾರ್ಥಿಗಳು ವರ್ಣಿಸುತ್ತಿದ್ದ ರೀತಿ ನಿಜಕ್ಕೂ ನೆರೆದಿದ್ದ ಪಾಲಕರು ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು. ಗಡಿಯಾರಗಳಲ್ಲಿ ಗಣಿತದ ಅಳವಡಿಕೆ, ಬೇರೆ ಬೇರೆ ದೇಶಗಳ ಸಮಯ ತಿಳಿದುಕೊಳ್ಳುವುದು, ಮೋಜಿನ ಗಣಿತ, ಗಣಿತದ ಪದಬಂಧ, ನೆರಳಿನ ಗಣಿತ, ಚೀನಾದ ಪ್ರಸಿದ್ಧ ಟೆಂಗ್ರನ್‌ ಗಣಿತ, ಮ್ಯಾಜಿಕ್‌ ಗಣಿತ, ಕೋಆರ್ಡಿನೇಟ್ ರೇಖಾ ಗಣಿತದ ಸಹಾಯದಿಂದ ಜನಸಂಖ್ಯೆ ಮತ್ತು ಜನ ಸಾಂಧ್ರತೆಯನ್ನು ಅಳೆಯುವ ಪ್ರಯೋಗದ ರೀತಿ ವಿಶೇಷವಾಗಿತ್ತು.

ಎಂಟನೇ ತರಗತಿ ಮಕ್ಕಳು ನಾಟಕ ಪ್ರದರ್ಶನದ ಮೂಲಕ ಬ್ಯಾಂಕಿನ ವ್ಯವಹಾರದ ಕುರಿತು ಸಾಬೀತು ಪಡಿಸಿದ್ದು ಉಳಿದ ವಿದ್ಯಾರ್ಥಿಗಳಲ್ಲಿ ಬ್ಯಾಂಕಿನ ವ್ಯವಹಾರಗಳ ಪರಿಕಲ್ಪನೆ ಮೂಡಿಸುವಲ್ಲಿ ಯಶಸ್ವಿ ಆಯಿತು. ವೇದಿಕ್‌ ಗಣಿತ, ಮಹಾಭಾರತದ ಕಾಲದಲ್ಲಿ ಗಣಿತದ ಬೆಳವಣಿಗೆ, ಆಧುನಿಕ ಹಾಗೂ ವಿಕಾಸ ಗಣಿತ ಹೀಗೆ ಗಣಿತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಪ್ರದರ್ಶನದಲ್ಲಿ ಮಕ್ಕಳು ನೀಡಿದ ವಿವರಣೆ ಅರ್ಥಪೂರ್ಣವಾಗಿತ್ತು.

10ನೇ ತರಗತಿ ವಿದ್ಯಾರ್ಥಿನಿಯರು ಸೀಮೆಸುಣ್ಣ ಹಾಗೂ ಬಳಪಗಳನ್ನು ಬಳಸಿ ತಯಾರಿಸಿದ ವಿಶಿಷ್ಟವಾದ ಚಿತ್ತಾರ ಎಲ್ಲರ ಗಮನ ಸೆಳೆಯಿತು. ಮಕ್ಕಳಲ್ಲಿ ಗಣಿತ ಎಂದರೆ ಕಬ್ಬಿಣದ ಕಡಲೆ ಎಂಬ ಭಾವನೆ ಇದೆ. ಆದರೆ ಗಣಿತವನ್ನು ಅರ್ಥ ಮಾಡಿಕೊಂಡರೆ ಅದು ಅತ್ಯಂತ ಸುಲಭದ ವಿಷಯ ಎಂಬುದನ್ನು ಸ್ಕೂಲ್‌ ಚಂದನದ ಮಕ್ಕಳು ಸಾಬೀತು ಪಡಿಸಿದರು. ಶಿಕ್ಷಕರು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಗಣಿತ ಬೋಧನೆ ಮಾಡಿದಾಗ ಮಕ್ಕಳಲ್ಲಿಯೂ ಅದರ ಕುರಿತು ಕುತೂಹಲ ಮೂಡುತ್ತದೆ. ಈ ನಿಟ್ಟಿನಲ್ಲಿ ಗಣಿತ ಶಿಕ್ಷಕರು ಪ್ರಯತ್ನ ಬಹಳ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT