ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಹಲ್ಲೆ

ದಾವಣಗೆರೆ ಹೃದಯ ಭಾಗದಲ್ಲೇ ಅಮಾನುಷ ಘಟನೆ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಪರಿಚಯಸ್ಥನೇ ಅತ್ಯಾಚಾರ ಎಸಗಿ, ವಿಷಯ ಬಹಿ­ರಂಗಪಡಿಸದಂತೆ ಆಕೆಯ ಮೇಲೆ ಕಲ್ಲಿನಿಂದ ಜಜ್ಜಿ ಬರ್ಬರ­ವಾಗಿ ಹಲ್ಲೆ ನಡೆಸಿದ ಘಟನೆ ನಗರದ ಬಾಪೂಜಿ ಸಭಾಂಗ­ಣದ ಆವರಣದ ಬಳಿ ಶನಿವಾರ ರಾತ್ರಿ ನಡೆದಿದೆ.

ನಗರದ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಸಿಎ (ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌) ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪೃಥ್ವಿಯನ್ನು ಬಂಧಿಸಲಾಗಿದೆ. ಆತ ಸರಸ್ವತಿ ಬಡಾ­ವಣೆಯ ನಿವಾಸಿಯಾಗಿದ್ದು, ದೂರ ಶಿಕ್ಷಣದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.

ಬಂಧಿತನ ಮೇಲೆ ಅತ್ಯಾಚಾರ, ಅಪ­ಹರಣ ಹಾಗೂ ಕೊಲೆ ಯತ್ನದ ದೂರು ದಾಖಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿನಿಗೆ ಚಿಕಿತ್ಸೆ: ತೀವ್ರ ಹಲ್ಲೆ, ಆಘಾತಕ್ಕೆ ಒಳಗಾದ ವಿದ್ಯಾರ್ಥಿನಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾ­ಗು­ತ್ತಿದೆ. ಮುಖದ ಎಡಭಾಗಕ್ಕೆ ಕಲ್ಲಿ­ನಿಂದ ಜಜ್ಜಿ ಹಲ್ಲೆ ನಡೆಸಲಾಗಿದೆ. ಎಡ­ಭಾಗದ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಕಾಲಿನಲ್ಲಿ ಸುಟ್ಟ ಗಾಯ­ಗಳಾ­ಗಿವೆ ಎಂದು  ಮೂಲಗಳು ತಿಳಿಸಿವೆ.

ನಗರದ ಹೃದಯ ಭಾಗದಲ್ಲಿಯೇ ಈ ಘಟನೆ ನಡೆದಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಘಟನಾ ಸ್ಥಳದ ಪಕ್ಕ­ದಲ್ಲಿಯೇ ಬಾಪೂಜಿ ಆಸ್ಪತ್ರೆ, ಸಭಾಂ­ಗಣ, ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು­ಗಳು ಇವೆ. ಸದಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿದ್ದ ಪ್ರದೇ­ಶ­­ದಲ್ಲಿಯೇ ಕೃತ್ಯ ನಡೆದಿರು­ವುದು ಆತಂಕಕ್ಕೆ ಕಾರಣವಾಗಿದೆ.

ಘಟನೆ ಹಿನ್ನೆಲೆ: ಕಾಲೇಜಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಯುವತಿ ನೃತ್ಯ ತರಬೇತಿ ಪಡೆಯುತ್ತಿದ್ದಳು. ಎಂ.ಸಿ. ಕಾಲೊನಿಯ ಶಾಲೆಯಲ್ಲಿ ನೃತ್ಯ ತರಬೇತಿ ಮುಗಿಸಿ, ಶನಿವಾರ ರಾತ್ರಿ ಮನೆಗೆ ತನ್ನ ತಂಗಿಯ ಜತೆ ವಾಪಸ್‌ ಆಗುತ್ತಿದ್ದ ವೇಳೆ ಈ ದುಷ್ಕೃತ್ಯ ಎಸಗಲಾಗಿದೆ.

ಆಕೆಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಬ್ಬ ಒಂದು ತಿಂಗಳ ಹಿಂದೆ ಪೃಥ್ವಿಯನ್ನು ಪರಿಚಯಿಸಿದ್ದ. ಅದನ್ನೇ ನೆಪವಾಗಿ ಇಟ್ಟುಕೊಂಡ ಪೃಥ್ವಿ, ಆಕೆಯ ಜತೆಗೆ ಸಲುಗೆ ಬೆಳೆಸಿದ್ದಾನೆ. ರಾತ್ರಿ ಬೈಕ್‌ಗೆ ಬಲವಂತವಾಗಿ ಹತ್ತಿಸಿಕೊಂಡು, ಸಭಾಂಗಣ ಆವರಣದ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಗಾಬರಿ­ಗೊಂಡ ಆಕೆ ಕೂಗಿಕೊಂಡಿದ್ದಾಳೆ. ನೆರವಿಗೆ ಯಾರೂ ಬಂದಿಲ್ಲ.

ತಪ್ಪಿಸಿಕೊಳ್ಳಲು ಪ್ರಯತ್ನಿಸಿ­ದಾಗ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಆಕೆಯ ಮುಂಭಾಗದ ಹಲ್ಲುಗಳು ಮುರಿದು ಹೋಗಿವೆ. ಆರೋಪಿ ಅಲ್ಲಿಂದ ತೆರಳಿದ ಬಳಿಕ ಸಮೀಪದಲ್ಲಿಯೇ ಇದ್ದ ಮನೆಗೆ ರಸ್ತೆಯಲ್ಲಿ ತೆವಳಿಕೊಂಡೇ ಹೋಗಿ­ದ್ದಾಳೆ. ಅಕ್ಕಪಕ್ಕದ ಮನೆಯವರು ಗಮನಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್‌, ಹೆಚ್ಚುವರಿ ಎಸ್‌ಪಿ ರವಿನಾರಾಯಣ್‌ ತೆರಳಿ ಪರಿಶೀಲನೆ ನಡೆಸಿದರು. ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆರವಿಗೆ ಬಂದ ಕರಾಟೆ
ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಕರಾಟೆಪಟು. ನಾಲ್ಕೈದು ವರ್ಷಗಳಿಂದ ಆಕೆ ಕರಾಟೆ, ಯೋಗ ಅಭ್ಯಾಸ ಕೂಡ ನಡೆಸುತ್ತಿದ್ದಳು. ಸಾಕಷ್ಟು ಪ್ರಶಸ್ತಿಯನ್ನೂ ತನ್ನದಾಗಿಸಿ­ಕೊಂಡಿದ್ದಾಳೆ. ಘಟನೆ ನಡೆದ ಬಳಿಕ ದುಷ್ಕರ್ಮಿಯಿಂದ  ತಪ್ಪಿಸಿ­ಕೊಂಡು ಬರಲು ಕರಾಟೆಯೂ ನೆರವಿಗೆ ಬಂದಿದೆ. ಆತ ಹಲ್ಲೆ ನಡೆಸುವಾಗ ಆಕೆಯೂ ಪ್ರತಿರೋಧ ಒಡ್ಡಿ, ಆರೋಪಿಯನ್ನು ತಳ್ಳಿ ರಸ್ತೆಬದಿಗೆ ಬರಲು ಯಶಸ್ವಿಯಾಗಿದ್ದಾಳೆ ಎನ್ನಲಾಗಿದೆ.

‘ಯಾವ ಹೆಣ್ಣು ಮಗುವಿನ ಮೇಲೂ ಇಂತಹ ಹೀನ ಕೃತ್ಯ ನಡೆಯಬಾರದು. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಕೆಯ ತಂದೆ ಆಗ್ರಹಿಸಿದ್ದಾರೆ.

‘ಸೂಕ್ತ ಕ್ರಮ’
‘ಆಕೆಗೆ ಪರಿಚಯ ಇರುವ ಹುಡುಗನೇ ಈ ಕೃತ್ಯ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಇಂತಹ ಘಟನೆಗಳು ನಡೆಯಬಾರದು. ಆರೋಪಿಯ ಮೇಲೆ ಸೂಕ್ತ ಕ್ರಮ ಜರುಗಿಸಲಾಗಿದೆ. ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಗೆ ಸಾಕಷ್ಟು ಮಂದಿ ವಿದ್ಯಾರ್ಥಿನಿಯರು ಆಗಮಿಸು­ತ್ತಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಹಾಸ್ಟೆಲ್‌ಗಳ ಬಳಿ ಪೊಲೀಸ್‌ ಗಸ್ತು ಹೆಚ್ಚಿಸಲು ಈಲಾಗಲೇ ಸೂಚಿಸಲಾಗಿದೆ’.
– ಡಿ.ಪ್ರಕಾಶ್‌, ಪೊಲೀಸ್‌ ವರಿಷ್ಠಾಧಿಕಾರಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT