ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಅಪಘಾತ: ನೊಂದ ಬಾಲಕನಿಗೆ 2.50 ಲಕ್ಷ ಪರಿಹಾರ

Last Updated 8 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಗುಲ್ಬರ್ಗ: ಬೀದರ್ ಜಿಲ್ಲೆಯ ಶಂಶೇರನಗರ ಗ್ರಾಮದಲ್ಲಿ ವಿದ್ಯುತ್ ಅಪಘಾತದಿಂದ ಅಂಗವಿಕಲನಾದ 9 ವರ್ಷದ ಬಾಲಕ ಯೇಸುದಾಸನಿಗೆ 2.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಲ್ಬರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಜೆಸ್ಕಾಂಗೆ ಆದೇಶ ನೀಡಿದೆ.

ಯೇಸುದಾಸ 2010ರ ಸೆಪ್ಟೆಂಬರ್ 11ರಂದು ಗ್ರಾಮದಲ್ಲಿ ದನ ಮೇಯಿಸಲು ಹೋದಾಗ ಜೆಸ್ಕಾಂ ವಿದ್ಯುತ್ ಪರಿವರ್ತಕದ ಬಳಿ ವಿದ್ಯುತ್ ಅಪಘಾತ ಸಂಭವಿಸಿತ್ತು. ಇದರಿಂದ ಬಾಲಕನ ಹೊಟ್ಟೆಯ ಕರುಳು ಮತ್ತು ಕೈಗೆ ಗಂಭೀರ ಗಾಯವಾಗಿತ್ತು. ಬೀದರ್  ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಗಂಭೀರವಾಗಿ ಗಾಯವಾದ ಕೈಯನ್ನು ಕತ್ತರಿಸಲಾಗಿತ್ತು.

ವಿದ್ಯುತ್ ಪರಿವರ್ತಕದ ಸುತ್ತ ಸೂಕ್ತ ತಂತಿ ಬೇಲಿ ಹಾಕದೆ ತಮ್ಮ ಮಗನಿಗೆ ಗಂಭೀರ ಗಾಯವಾಗಿದೆ. ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೇಸುದಾಸನ ತಾಯಿ ಕಲಾವತಿ ಬಗದಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ಮಾಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಮ್ಮ ಮಗ ವಿದ್ಯುತ್ ಅಪಘಾತಕ್ಕೀಡಾಗಿ ಅಂಗವಿಕಲನಾಗಿದ್ದು, ಸೂಕ್ತ ಪರಿಹಾರ ನಿಡುವಂತೆ ಬೀದರ್ ಮತ್ತು ಗುಲ್ಬರ್ಗ ಜೆಸ್ಕಾಂ ವಿರುದ್ಧ ಅವರು ಜಿಲ್ಲಾ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ಮಾಡಿದ ವೇದಿಕೆಯ ಅಧ್ಯಕ್ಷ ಎಸ್.ಎಂ. ರೆಡ್ಡಿ, ಸದಸ್ಯರಾದ ಕೆ.ಎಚ್. ಶ್ರೀರಾಮಪ್ಪ, ಗೋಪಮ್ಮ ಅವರು ವಾದಿ ಪ್ರತಿವಾದಿಗಳು ಸಲ್ಲಿಸಿದ ದಾಖಲೆ, ಸಾಕ್ಷಿ ಮತ್ತು ಲಿಖಿತ ಹೇಳಿಕೆಗಳನ್ನು ಕೂಲಂಕಶವಾಗಿ ಪರಿಶೀಲಿಸಿದರು. ಈ ಪ್ರಕರಣದಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆ ಸಾಬೀತಾಗಿದೆ ಎಂದು ಪರಿಗಣಿಸಿದರು.  ಬಾಲಕನಿಗೆ ರೂ. 2.50 ಲಕ್ಷ ಪರಿಹಾರವನ್ನು ಶೇ. 9ರ ಬಡ್ಡಿಯಂತೆ ಹಾಗೂ ಪ್ರಕರಣದ ಖರ್ಚಿಗೆ 5,000 ರೂಪಾಯಿ ನೀಡುವಂತೆ ಆದೇಶ ನೀಡಿದರು. ದೂರುದಾರರ ಪರವಾಗಿ ವೈಜನಾಥ ಎಸ್. ಝಳಕಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT