ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಅವ್ಯವಸ್ಥೆ: ಅಧಿಕಾರಿಗಳ ತರಾಟೆ

Last Updated 6 ಫೆಬ್ರುವರಿ 2013, 9:22 IST
ಅಕ್ಷರ ಗಾತ್ರ

ಬೀದರ್: ಗ್ರಾಮೀಣ ಮತ್ತು ಕೈಗಾರಿಕೆ ಪ್ರದೇಶ ಸೇರಿದಂತೆ ನಗರ, ಜಿಲ್ಲೆಯ ವಿವಿಧೆಡೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದು, ಅನಿಯಮಿತ ವಿದ್ಯುತ್‌ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುತ್ತಿದೆ ಎಂದು ಮಂಗಳವಾರ ಜೆಸ್ಕಾಂ ಅಧಿಕಾರಿಗಳನ್ನು ನಾಗರಿಕರು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರದ ಚಿದ್ರಿ ರಸ್ತೆಯಲ್ಲಿ ಇರುವ ಕೆಪಿಟಿಸಿಎಲ್‌ನ ಸಭಾಂಗಣದಲ್ಲಿ ನಡೆದ ವಿದ್ಯುತ್ ಗ್ರಾಹಕರ ಕುಂದುಕೊರತೆ ಆಲಿಸುವ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ವಿದ್ಯುತ್ ಪೂರೈಕೆ ಅವಧಿಯನ್ನು ಕುರಿತು ಖಚಿತ ಮಾಹಿತಿಯನ್ನು ಒದಗಿಸಬೇಕು ಎಂದು ತಾಕೀತು ನೀಡಿದರು.

ರೈತ ಸಂಘಧ ಪ್ರತಿನಿಧಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಗಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವಲಿಂಗ ಹಾಲಶೆಟ್ಟಿ ಮತ್ತು ಸೇರಿದಂತೆ ಅನೇಕ ಉದ್ಯಮಿಗಳು, ರೈತ ಪ್ರತಿನಿಧಿಗಳು ಸಭೆಯಲ್ಲಿ ಇದ್ದು ವಿದ್ಯುತ್ ಪೂರೈಕೆ ಅವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡರು.

ರೈತ ಸಂಘದ ವಿಶ್ವನಾಥ ಪಾಟೀಲ ಕೌಠಾ, ಸಿದ್ದಪ್ಪ ಸಣ್ಣಮಣಿ ಅವರು, ಗ್ರಾಮೀಣ ಪ್ರದೇಶಕ್ಕೆ ಆರು ಗಂಟೆಗಳ ಕಾಲ ವಿದ್ಯುತ್ ನೀಡುವ ವಾಗ್ದಾನ ಮಾಡಲಾಗಿತ್ತು. ಆದರೆ, ಆ ಭರವಸೆ ಉಳಿಸಿಕೊಂಡಿಲ್ಲ. ಯಾವ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನಾದರೂ ನೀಡಿದರೆ ರೈತರಿಗೆ ನೆರವಾಗಲಿದೆ ಎಂದರು.

ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ ಶಿವಲಿಂಗ ಹಾಲಶೆಟ್ಟಿ ಅವರು, ನೌಬಾದ ಮತ್ತು ಕೋಳಾರ ಕೈಗಾರಿಕೆ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸುವಲ್ಲಿ ಅನ್ಯಾಯ ಆಗಿದೆ. ಅಳವಡಿಸಿ ಎರಡು ವರ್ಷದ ಬಳಿಕ ಬೀದಿ ದೀಪಕ್ಕೆ ಚಾಲನೆ ನೀಡಿದ್ದರೂ ತಿಂಗಳಲ್ಲೇ ಹಾಳಾಗಿದೆ. ಈ ಬಗೆಗೆ ತನಿಖೆ ನಡೆಸಬೇಕು ಎಂದು ಆರೋಪಿಸಿರು.

2010ರಲ್ಲಿಯೇ ಬೀದಿ ದೀಪ ಅಳವಡಿಸಲಾಗಿತ್ತು. ಆಗಲೇ ಚಾಲನೆ ನೀಡಿದ್ದರೆ ಗುತ್ತಿಗೆದಾರರಿಗೆ ನಿರ್ವಹಣೆ ಹೊಣೆಯೂ ಇರುತ್ತಿತ್ತು. ಪುನ ರಾವರ್ತಿತ ಮನವಿಯ  ಬಳಿಕ ಈಗ ಎರಡು ವರ್ಷದ ನಂತರ ದೀಪಗಳಿಗೆ ಚಾಲನೆ ನೀಡಿದ್ದರೂ ತಿಂಗಳಲ್ಲಿಯೇ ಕೆಟ್ಟಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಜೊತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ನನ್ನ ನೇರ ಆರೋಪ. ಈ ಬಗೆಗೆ ತನಿಖೆ ನಡೆಸಬೇಕು. ಕೆಟ್ಟಿರುವ ಬೀದಿ ದೀಪಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೀದರ್ ಜೆಸ್ಕಾಂನ ಇಇ ಬಿರಾದಾರ ಅವರು, ಬೀದಿ ದೀಪಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಿದ್ದು, ಈ ಸಂಬಂಧ ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಜಿ.ಶೆಟಗಾರ್ ಅವರು, ವಿದ್ಯುತ್ ಅವ್ಯವಸ್ಥೆಯ ಪರಿಣಾಮ ಅನೇಕ ಕೈಗಾರಿಕೆಗಳಿಗೆ ಸಮಸ್ಯೆಯಾಗಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ತುರ್ತು ಸರಿಪಡಿಸಬೇಕು ಎಂದು ಆಗ್ರಹಪಡಿಸಿದರು.

ಭಾಲ್ಕಿ ತಾಲ್ಲೂಕು ಡೊಣಗಾಂವ್ ಗ್ರಾಮ ಪಂಚಾಯಿತಿ ಸದಸ್ಯರು ಪ್ರತ್ಯೇಕ ಮನವಿ ಸಲ್ಲಿಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ  ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸುವ ಕಾರ್ಯ ನೆನೆಗುದಿಯಲ್ಲಿದೆ. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗುಲ್ಬರ್ಗ ವಿಭಾಗದ ಸಿ.ಇ. ಮುನಿರಾಜು, ಪ್ರಭಾರ ಎಸ್‌ಸಿ ವಿರೂಪಾಕ್ಷ ಕಟ್ಟಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT