ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಇಲ್ಲಿ ಇನ್ನೂ ಮರೀಚಿಕೆ...

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿರಸಿ: ಹೆಚ್ಚು ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆಗಳಲ್ಲಿ ಉತ್ತರ ಕನ್ನಡದ ಪಾಲು ಮಹತ್ವದ್ದು. ಆದರೆ ದೀಪದ ಬುಡದಲ್ಲಿ ಕತ್ತಲು ಎಂಬಂತೆ ಜಿಲ್ಲೆಯ ಅದೆಷ್ಟೋ ಹಳ್ಳಿಗಳಿಗೆ ವಿದ್ಯುತ್ ಇನ್ನೂ ಮರೀಚಿಕೆ. ಶಿರಸಿ ತಾಲ್ಲೂಕಿನ ಆರೆಂಟು ಹಳ್ಳಿಗಳು ವಿದ್ಯುತ್ ಬೆಳಕು ಕಾಣುವ ಕನಸು ಹೆಣೆಯುತ್ತ ಕತ್ತಲಿನಲ್ಲಿ ಬದುಕುತ್ತಿವೆ.

ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದ ರಾಗಿಹೊಸಳ್ಳಿ ಗ್ರಾಮದಿಂದ ಕಡಿದಾದ ರಸ್ತೆಯಲ್ಲಿ ಸಾಗಿದರೆ ಒಂದೆರಡು ಮೈಲಿಗಳ ಅಂತರದಲ್ಲಿ ಮುಂಡಗಾರು, ಕೆರೆಗಣಿ, ಎಟಗಾರ, ಬುಗಡಿ, ಸಂಪೆಕಟ್ಟೆ, ತೋಟದಗದ್ದೆ ಹಳ್ಳಿಗಳು ಇವೆ. ಇಲ್ಲಿನ 75ರಷ್ಟು ಮನೆಗಳ ಒಟ್ಟು ಜನಸಂಖ್ಯೆ ಸುಮಾರು 500. ಬುಡಕಟ್ಟು ಸಮಾಜದ ಮರಾಠಿ, ಗೌಡ ಹಾಗೂ ನಾಮಧಾರಿ ಸಮುದಾಯದ ಕೂಲಿಕಾರ ಕುಟುಂಬದವರು ಇಲ್ಲಿನ ನಿವಾಸಿಗಳು. ಈ ಹಳ್ಳಿಗರ ಮನೆಯಲ್ಲಿ ಟಿ.ವಿ, ಮಿಕ್ಸಿ ಸೇರಿದಂತೆ ಯಾವ ಆಧುನಿಕ ಸೌಲಭ್ಯಗಳಿಲ್ಲ. ಬಾವಿಯಿಂದ ನೀರು ಸೇದುವುದು, ಅಡುಗೆ ಸಿದ್ಧಪಡಿಸಲು ಒರಳುಕಲ್ಲು ಬಳಕೆ ಇಲ್ಲಿನ ನಿತ್ಯ ಸತ್ಯಗಳು. ಯಾಕೆಂದರೆ ಈ ಹಳ್ಳಿಗರು ವಿದ್ಯುತ್ ವಂಚಿತರು.  ನಿತ್ಯ ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದಾರೆ.

`1982-83ರಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ನೀಡಲು ಕಂಬ-ತಂತಿ ಜೋಡಣೆ ಮಾಡಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಹ ಅಳವಡಿಸಲಾಗಿತ್ತು. ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಗಿದ್ದರಿಂದ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಮಳೆಗಾಲದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು ಅಲ್ಲಲ್ಲಿ ತುಂಡಾದವು. ನಂತರದ ದಿನಗಳಲ್ಲಿ ಈ ಹಳ್ಳಿಗೆ ವಿದ್ಯುತ್ ಪೂರೈಕೆ ಕುರಿತು ಇಲಾಖೆ ಯೋಚಿಸಲೇ ಇಲ್ಲ. ಹೆಸ್ಕಾಂ ಹಿರಿಯ ಅಧಿಕಾರಿಗಳಿಗೆ, ಜಿಲ್ಲಾ ಸಚಿವರಿಗೆ ಅನೇಕ ಬಾರಿ ಮನವಿ ನೀಡಿ ವಿನಂತಿಸಿದ್ದೇವೆ. ಇನ್ನು ವಿದ್ಯುತ್ ಬೆಳಕು ಕಾಣುವುದು ಎಂದೋ ಗೊತ್ತಿಲ್ಲ~ ಎಂದು ಊರಿನ ಶ್ರೀಧರ ಗೌಡ ಹತಾಶೆ ವ್ಯಕ್ತಪಡಿಸುತ್ತಾರೆ.
`ಪಡಿತರ ಚೀಟಿಯಲ್ಲಿ ಸಿಗುವ 3-4 ಲೀಟರ್ ಸೀಮೆಎಣ್ಣೆ ಪ್ರತಿದಿನ ಸಂಜೆ ಚಿಮಣಿ, ಲಾಟೀನ್ ದೀಪ ಉರಿಸಲು ಸಾಕಾಗದು. ಕೊರತೆಯಾದರೆ ಕಷ್ಟಪಟ್ಟು ಎಲ್ಲಿಂದಲಾದರೂ ಸಂಗ್ರಹಿಸದೆ ವಿಧಿಯಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಓದಲಾದರೂ ಚಿಮಣಿ ದೀಪ ಉರಿಸಬೇಕಲ್ಲ~ ಎನ್ನುತ್ತಾರೆ ಪ್ರಭಾಕರ ಮರಾಠಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT