ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉತ್ಪಾದನೆ–2017ಕ್ಕೆ ಸ್ವಾವಲಂಬನೆ: ಸಿದ್ದರಾಮಯ್ಯ

ಗುಲ್ಬರ್ಗ–ಕೋಲಾರದಲ್ಲಿ ‘ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯ’ ಸ್ಥಾಪನೆ
Last Updated 19 ಸೆಪ್ಟೆಂಬರ್ 2013, 10:40 IST
ಅಕ್ಷರ ಗಾತ್ರ

ರಾಮನಗರ: ರಾಷ್ಟ್ರೀಯ ಉತ್ಪಾದನಾ ನೀತಿಗೆ ಅನುಗುಣವಾಗಿ ತುಮಕೂರಿನಲ್ಲಿ 12,500 ಎಕರೆ ಭೂ ಪ್ರದೇಶದಲ್ಲಿ ‘ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯ’ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದೇ ಮಾದರಿಯಲ್ಲಿ ಗುಲ್ಬರ್ಗ ಹಾಗೂ ಕೋಲಾರದಲ್ಲಿಯೂ ಎರಡು ವಲಯಗಳನ್ನು ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಿಡದಿ ಕೈಗಾರಿಕಾ ವಲಯದಲ್ಲಿ ’ಬಾಷ್’ ಕಂಪೆನಿಯ ನೂತನ ಉತ್ಪಾದನಾ ಘಟಕದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಚೆನ್ನೈ–-ಬೆಂಗಳೂರು–- ಚಿತ್ರದುರ್ಗ ಕಾರಿಡಾರ್ ಯೋಜನೆ ್ನು ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲ ಪ್ರಯತ್ನಗಳು 2022ಕ್ಕೆ ಜಿಡಿಪಿ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಬೇಕು ಎಂಬ ರಾಷ್ಟ್ರೀಯ ಗುರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸ್ವಾವಲಂಬನೆ: ರಾಜ್ಯದ ವಿದ್ಯುತ್ ಕೊರತೆ
ನೀಗಿಸಿ ವಿದ್ಯುತ್ ಸುಭಿಕ್ಷ ರಾಜ್ಯವನ್ನಾಗಿಸಲು ಸರ್ಕಾರ ಪಣತೊಟ್ಟಿದೆ. ಹಲವಾರು ವಿದ್ಯುತ್ ಯೋಜನೆಗಳಿಗೆ ಈಗಾಗಲೆ ಚಾಲನೆ ನೀಡಲಾಗಿದೆ. ಇದರಿಂದಾಗಿ ವಾರ್ಷಿಕ 18 ಸಾವಿರ ಮೆಗವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. 2017ರ ವೇಳೆಗೆ
ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ. ಇದರಿಂದ ರಾಜ್ಯದ ಉತ್ಪಾದನಾ ವಲಯಕ್ಕೆ ಗುಣಮಟ್ಟದ
ವಿದ್ಯುತ್‌ ಅನ್ನು ನಿರಂತರವಾಗಿ ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕೈಗಾರಿಕೆಗಳಿಗೆ ವೃತ್ತಿ ಕೌಶಲ ಮಾನವ ಸಂಪನ್ಮೂಲ ಒದಗಿಸಲು ಕೌಶಲ್ಯಾಭಿವೃದ್ಧಿ ಮಿಷನ್ ಹಾಗೂ ವೃತ್ತಿ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಭಾರತ ಸರ್ಕಾರದ ನೆರವಿನಿಂದ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೂ 150 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದರು.

ವಿದೇಶದಲ್ಲಿ ಸಹಾಯವಾಣಿ: ಜಪಾನ್, ತೈವಾನ್, ಅಮೆರಿಕ ಹಾಗೂ ಜರ್ಮನಿ ದೇಶಗಳಲ್ಲಿ ರಾಜ್ಯ ಸರ್ಕಾರದ ಸಹಾಯವಾಣಿಗಳನ್ನು ಆರಂಭಿಸುವ ಮೂಲಕ ರಾಜ್ಯದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಮುಖ ಕೈಗಾರಿಕಾ ಹೂಡಿಕೆದಾರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ದೊರೆತಿದ್ದು ರಾಜ್ಯದಲ್ಲಿ ಲಭ್ಯವಿರುವ ಸಾಕಷ್ಟು ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಹಲವು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ.

‘ಬಾಷ್’ ಸಂಸ್ಥೆಯು ಬಿಡದಿಯಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪಿಸಲು ಮುಂದಾಗಿರುವುದು ಸಂತಸದ ವಿಷಯ. ಇದರಿಂದ ರಾಜ್ಯದ ಯುವ ಜನತೆಗೆ ಹೆಚ್ಚು ಉದ್ಯೋಗವಕಾಶ ದೊರೆಯುವಂತಾಗಲಿ ಎಂದು ಅವರು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT