ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ: ನಂಬಿದರೆ ಬದುಕು ಅತಂತ್ರ!

Last Updated 1 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಬಳ್ಳಾರಿ: ಬರದ ದವಡೆಗೆ ಸಿಲುಕಿ ನಲುಗಿರುವ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದ್ದು, ರೈತರು ಸೇರಿದಂತೆ ಅವಲಂಬಿತರ ಜೀವನ ಅಸ್ತವ್ಯಸ್ತ ಗೊಂಡಿದೆ.

ಒಣಗುತ್ತಿರುವ ಬೆಳೆ:
ವಿದ್ಯುತ್ ಕೈಕೊಡುತ್ತಿರುವ ಪರಿಣಾಮ ಪಂಪ್‌ಸೆಟ್ ಮೋಟಾರ್‌ಗಳ ನೆರವಿನಿಂದ ಕೊಳವೆ ಬಾವಿ ನೀರಾವರಿಯನ್ನೇ ಅವಲಂಬಿಸಿರುವ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಬಳ್ಳಾರಿ, ಹೂವಿನ ಹಡಗಲಿ ತಾಲ್ಲೂಕಿ ನಲ್ಲಿ ಬೆಳೆ ಸಂಪೂರ್ಣ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಈ ಭಾಗದಲ್ಲಿ ಮೆಕ್ಕೆ ಜೋಳ, ಕಬ್ಬು, ಮೆಣಸಿನಕಾಯಿ, ದ್ರಾಕ್ಷಿ, ಭತ್ತ ಮತ್ತು ಹಣ್ಣು- ಹಂಪಲು ಬೆಳೆದಿರುವ ಅನೇಕ ರೈತರು ಕಂಗಾಲಾಗಿದ್ದು, ಸಮರ್ಪಕ ವಾಗಿ ನೀರು ಹರಿಸದಿದ್ದರೆ ಈ ವರ್ಷದ ಬೆಳೆ ಹಾನಿಯಾಗುವ ಭೀತಿ ಎದುರಿಸುತ್ತಿದ್ದಾರೆ.

ಜೀನ್ಸ್ ಉದ್ಯಮ ತತ್ತರ:
ದೇಶ ವಿದೇಶಗಳಿಗೆ ರಫ್ತಾಗುವ ಜೀನ್ಸ್ ಪ್ಯಾಂಟ್ ಸಿದ್ಧಪಡಿಸುವ ಸಾವಿರಾರು ಕಾರ್ಮಿಕರು ಬಳ್ಳಾರಿ ನಗರದಲ್ಲಿದ್ದು, ಜೀನ್ಸ್ ಉದ್ಯಮ ಸಂಪೂರ್ಣವಾಗಿ ವಿದ್ಯುತ್ ಅನ್ನೇ ಅವಲಂಬಿಸಿದೆ. ಕಳೆದ 15 ದಿನಗಳಿಂದ ಹಗಲು-  ರಾತ್ರಿ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಅಂದಿನ ಕೂಲಿಯನ್ನೇ ನೆಚ್ಚಿಕೊಂಡಿರುವ ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ಅಂದಾಜು 40 ಸಾವಿರ ಜನ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀನ್ಸ್ ಉದ್ಯಮದಲ್ಲಿ ತೊಡಗಿದ್ದು, ವಿದ್ಯುತ್ ಕೈಕೊಡುತ್ತಿರುವುದರಿಂದ ಕೆಲಸವಿಲ್ಲದೆ ಇರಬೇಕಾದ ಅನಿವಾರ್ಯತೆ ಒದಗಿದೆ. ನಿತ್ಯ 15ರಿಂದ 20 ಪ್ಯಾಂಟ್ ಸಿದ್ಧಪಡಿಸುತ್ತಿದ್ದ ಕಾರ್ಮಿಕರು ಇದೀಗ 4ರಿಂದ 5 ಪ್ಯಾಂಟ್ ಸಿದ್ಧಪಡಿಸುವುದಕ್ಕೂ ಆಗದೆ ಪರದಾಡುವಂತಾಗಿದೆ.

ಜೀನ್ಸ್ ಬಟ್ಟೆಗಳ ಕಟಿಂಗ್, ಹೊಲಿಗೆ, ಇಸ್ತ್ರಿ, ಪ್ಯಾಕಿಂಗ್ ಮತ್ತಿತರ ಪ್ರತಿ ಹಂತದಲ್ಲೂ ವಿದ್ಯುತ್ ಬೇಕೇಬೇಕು. ಆದರೆ, ವಿದ್ಯುತ್ ಅಭಾವ ಹೆಚ್ಚಿದ್ದರಿಂದ ದೈನಂದಿನ ಕೂಲಿಯಲ್ಲಿ ಶೇ. 75ರಷ್ಟು ಖೋತಾ ಆಗಿದೆ ಎಂದು ಜೀನ್ಸ್ ಪ್ಯಾಂಟ್ ಸಿದ್ಧಪಡಿಸುವ ಮನ್ಸೂರ್ ಅಹಮದ್ `ಪ್ರಜಾವಾಣಿ~ ಎದುರು ಗೋಳು ತೋಡಿಕೊಂಡ.
ದೊಡ್ಡ ಪ್ರಮಾಣದ ಘಟಕವನ್ನು ಹೊಂದಿದ ಮಾಲೀಕರು ಜನರೇಟರ್ ಸಹಾಯದೊಂದಿಗೆ ಕೆಲಸ ನಡೆಸುತ್ತಾರೆ. ಆದರೆ, ಚಿಕ್ಕಪುಟ್ಟ ಘಟಕಗಳವರು ದುಬಾರಿ ದರ, ನಿರ್ವಹಣೆಯ ಜನ ರೇಟರ್ ಇರಿಸಿಕೊಳ್ಳುವುದು ಅಸಾದ್ಯ ಎಂದೂ ಅವರು ಹೇಳುತ್ತಾರೆ.

ಇತರರಿಗೂ ತೊಂದರೆ: ನಗರದಲ್ಲಿ ಬ್ಯೂಟಿ ಪಾರ್ಲರ್, ಹೇರ್ ಡ್ರೆಸಿಂಗ್ ಸಲೂನ್ ಹೊಂದಿರುವ ನೂರಾರು ಜನ ಕಾರ್ಮಿಕರು ವಿದ್ಯುತ್ ಕೊರತೆಯಿಂದ ತತ್ತರಿಸಿದ್ದು, ಅವರ ಆದಾಯದಲ್ಲೂ ಅರ್ಧದಷ್ಟು ಕಡಿಮೆಯಾಗಿದೆ.

ನಗರಕ್ಕೆ ಅನ್ಯ ಕೆಲಸದ ಅಂಗವಾಗಿ ಬರುವ ಜನತೆ ಬ್ಯೂಟಿ ಪಾರ್ಲರ್‌ಗಳಿಗೆ, ಹೇರ್‌ಕಟಿಂಗ್ ಸಲೂನ್‌ಗಳಿಗೆ ಬರುವು ದುಂಟು.

ಹಾಗೆ ಗ್ರಾಹಕರು ಬಂದಾಗ ಲೆಲ್ಲ ವಿದ್ಯುತ್ ಸಂಪರ್ಕ ಇರದಿದ್ದರೆ ಫೇಸ್ ವಾಶ್, ಹೇರ್ ಸೆಟಿಂಗ್, ಹೇರ್ ಟ್ರೀಟ್‌ಮೆಂಟ್ ಮಾಡುವುದು ಅಸಾಧ್ಯ. ಅಷ್ಟೇ ಅಲ್ಲ, ಕೂದಲು ಒಣಗಿಸುವ ಯಂತ್ರವೂ ಕೆಲಸ ಮಾಡುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಬರುವ ಗ್ರಾಹಕರು ಮರಳಿ ಹೋದರೆ 200, 300 ರೂಪಾಯಿ ನಷ್ಟವಾಗುತ್ತದೆ ಎಂದು ಸತ್ಯನಾರಾಯಣ ಪೇಟೆಯಲ್ಲಿ ಇರುವ ಕ್ವೀನ್ಸ್ ಬ್ಯೂಟಿಪಾರ್ಲರ್‌ನ ನಾಗರತ್ನ ಅವಲತ್ತುಕೊಳ್ಳುತ್ತಾರೆ.

ಮೊಬೈಲ್ ದೂರವಾಣಿ ಉಪಕರಣ, ಟಿವಿ, ಫ್ಯಾನ್, ಏಸಿ, ವಾಷಿಂಗ್ ಮೆಷಿನ್, ಏರ್‌ಕೂಲರ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ಕಾಯಕ ನೆಚ್ಚಿರುವರರೂ ವಿದ್ಯುತ್ ಕಡಿತದಿಂದ ಕಂಗಾಲಾಗಿದ್ದು, ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡದ್ದರಿಂದ ಗ್ರಾಹಕರಿಂದ ಬೈಗುಳ ಸ್ವೀಕರಿಸಬೇಕಾಗಿದೆ ಎಂದು ವಿಶ್ವ ಎಲೆಕ್ಟ್ರಾನಿಕ್ಸ್‌ನ ಸುರೇಶ್ ಅವರ ದೂರು.

ರಾಜ್ಯದ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಆದರೂ ವಿದ್ಯುತ್ ಅಭಾವ ತಲೆದೋರಿದೆ.
ಕಲ್ಲಿದ್ದಲನ್ನೇ ಅವಲಂಬಿಸಿರುವ ಶಾಖೋತ್ಪನ್ನ ಘಟಕಗಳಲ್ಲಿ ಕನಿಷ್ಠ ಮೂರು ತಿಂಗಳಿಗೆ ಆಗುವಷ್ಟು ಕಲ್ಲಿದ್ದಲನ್ನು ಸಂಗ್ರಹಿಸಿ ಇಡುವತ್ತ ಸರ್ಕಾರ ಆಲೋಚಿಸಬೇಕಿದೆ ಎಂಬುದು ಅವರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT