ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ = ಕತ್ತಲೆ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದ ಮತದಾರರ ಮನೆ ಹೊಸ್ತಿಲಿನಲ್ಲಿ ವಿಧಾನಸಭಾ ಚುನಾವಣೆ ಬಂದು ಕೂತಿದೆ. ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತ್ತೊಂದು ಅವಕಾಶ ಮತದಾರರ ಮುಂದಿದೆ. ಕರ್ತವ್ಯಭ್ರಷ್ಟನಾಗುವ ಚುನಾಯಿತ ಅಭ್ಯರ್ಥಿಗಳನ್ನು ವಾಪಸು ಕರೆಸಿಕೊಳ್ಳುವ ಅಧಿಕಾರ ಇಲ್ಲದ ಭಾರತದ ಮತದಾರರ ಕೈಯಲ್ಲಿರುವುದು ಮತದಾನದ ಮೂಲಕ ಸಮರ್ಥರನ್ನು ಆಯ್ಕೆ ಮಾಡುವ ಅವಕಾಶ ಮಾತ್ರ. ಮತದಾರರು ಇದನ್ನು ವಿವೇಚನೆಯಿಂದ ಬಳಸುತ್ತಿದ್ದಾರೆಯೇ? ಇಲ್ಲವೆ ಅವರೂ ರಾಜಕೀಯ ನಾಯಕರು ಹರಿಯಬಿಡುವ ಜಾತಿ,ಧರ್ಮ ಮತ್ತು ದುಡ್ಡಿನ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿದ್ದಾರೆಯೇ? ಚುನಾವಣಾ ಕಾಲದಲ್ಲಿ ನಿಜವಾಗಿ ನಡೆಯಬೇಕಾದ ಚರ್ಚೆಗಳೇನು?

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಒಂದೇ ಒಂದು ಯೋಜನೆ ಯಾಕೆ ಪೂರ್ಣಗೊಂಡಿಲ್ಲ?  ರಾಜ್ಯದ 5875 ಜನವಸತಿ ಪ್ರದೇಶಗಳಲ್ಲಿ ಈಗಲೂ ಯಾಕೆ ಕುಡಿಯುವ ನೀರಿಲ್ಲ?  ರಸ್ತೆ ಸಂಪರ್ಕ ಇಲ್ಲದ ಹಳ್ಳಿಗಳು ಇನ್ನೂ ಯಾಕೆ ಇವೆ? ಇರುವ ರಸ್ತೆಗಳು ಹೊಂಡಗಳಿಂದ ಯಾಕೆ ತುಂಬಿವೆ? ಮನೆಬಾಗಿಲಿಗೆ ಬರುವ ಅಭ್ಯರ್ಥಿಗಳನ್ನು ಮತದಾರರು ಕೇಳಬೇಕಾಗಿರುವುದು ಈ ಪ್ರಶ್ನೆಗಳನ್ನಲ್ಲವೇ?
............


ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಕರ್ನಾಟಕವನ್ನು ಕತ್ತಲೆಯಿಂದ ಪಾರು ಮಾಡಿ ಬೆಳಕಿನತ್ತ ತೆಗೆದುಕೊಂಡು ಹೋಗುವ ಭರವಸೆ ನೀಡಿತ್ತು. ಅತ್ಯುತ್ಸಾಹದಲ್ಲಿ ಒಂದಷ್ಟು ಹೊಸ ಯೋಜನೆಗಳನ್ನು ಘೋಷಿಸಿ ಶಂಕುಸ್ಥಾಪನೆಗಳನ್ನೂ ಸಾಲುಸಾಲಾಗಿ ನೆರವೇರಿಸಿತ್ತು. ಕಳೆದ ಐದು ವರ್ಷಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿರುವ ಯಾವ ಯೋಜನೆಯೂ ಪೂರ್ಣಗೊಂಡಿಲ್ಲ. ಬಹುತೇಕ ಯೋಜನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಸರ್ಕಾರವೇ ಪ್ರಕಟಿಸಿದ್ದ ಪ್ರಕಾರ 2012-13ರ ವೇಳೆಗೆ ಹೊಸದಾಗಿ ಒಟ್ಟು 12,533 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಬೇಕಿತ್ತು. ಆದರೆ, ಕೇವಲ 3,180 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಅಲ್ಲದೆ ಈ ಸ್ಥಾವರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. 2008ರಲ್ಲಿ 1500ರಿಂದ 1700 ಮೆಗಾವಾಟ್ ವಿದ್ಯುತ್ ಕೊರತೆ ಇತ್ತು.

ಆದರೆ, ಈಗ ಕೊರತೆ ಪ್ರಮಾಣ ಅದಕ್ಕಿಂತಲೂ ಜಾಸ್ತಿ ಇದೆ. ಆಗಿನಿಂದಲೂ ವಿದ್ಯುತ್ ಖರೀದಿ ಮುಂದುವರಿದಿದ್ದು, ಇದಕ್ಕಾಗಿ ಸುಮಾರು 19 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇಷ್ಟಾದರೂ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ. ವಿದ್ಯುತ್ ಉತ್ಪಾದನೆಗೆ 19 ಕೋಟಿ ವೆಚ್ಚ ಮಾಡಿದ್ದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿತ್ತು ಎಂಬ ಮಾತುಗಳು ಇಂಧನ ಇಲಾಖೆಯಲ್ಲೇ ಕೇಳಿ ಬರುತ್ತಿವೆ.

ಬೇಡಿಕೆ ಪ್ರಮಾಣ ಪ್ರತಿ ವರ್ಷ ಶೇ 10ರಿಂದ 15ರಷ್ಟು ಹೆಚ್ಚಾಗುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಉತ್ಪಾದನೆ ಆಗುತ್ತಿಲ್ಲ. 2008ರಲ್ಲಿ ಗರಿಷ್ಠ 5,715 ಮೆಗಾವಾಟ್ ವಿದ್ಯುತ್ ಪೂರೈಕೆ ಆಗಿದ್ದರೆ, ಈ ವರ್ಷ 8,761 ಮೆಗಾವಾಟ್ ಪೂರೈಕೆ ಆಗಿದೆ. ನಿತ್ಯ ಖರೀದಿ ಮಾಡುವ 1,280 ಮೆಗಾವಾಟ್ ವಿದ್ಯುತ್ ಸಹ ಇದರಲ್ಲಿ ಸೇರಿದೆ. ಈಗ ಪೂರೈಸುತ್ತಿರುವ ಗರಿಷ್ಠ ಪ್ರಮಾಣದ ಜೊತೆಗೆ, ಕನಿಷ್ಠ ಇನ್ನೂ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಲಭ್ಯವಾದರೆ ಲೋಡ್‌ಶೆಡ್ಡಿಂಗ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಆದರೆ, ಸದ್ಯಕ್ಕೆ ಹೆಚ್ಚುವರಿಯಾಗಿ ಎರಡು ಸಾವಿರ ಮೆಗಾವಾಟ್ ವಿದ್ಯುತ್ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ.

ಬೇಡಿಕೆಯಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಲೋಡ್‌ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿದೆ. ಬೆಳೆಗಳು ಒಣಗುತ್ತಿವೆ. ರಾಜ್ಯದಲ್ಲಿನ ಎಲ್ಲ ವರ್ಗದ ವಿದ್ಯುತ್ ಗ್ರಾಹಕರಿಗೆ ದಿನದ 24 ಗಂಟೆ ಕಾಲ ವಿದ್ಯುತ್‌ಪೂರೈಸಿದರೆ, 2013-14ನೇ ಸಾಲಿನಲ್ಲಿ ಬೇಡಿಕೆ ಪ್ರಮಾಣ 13,531 ಮೆಗಾವಾಟ್‌ಗೆ ಏರಲಿದೆ ಎಂದು ಅಂದಾಜಿಸಿ, ಒಟ್ಟು 14,363 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಂಬಂಧ ಸರ್ಕಾರ ಬೃಹತ್ ಯೋಜನೆಗಳಿಗೆ ಚಾಲನೆ ನೀಡಿತ್ತು. ಆದರೆ, ಕಾರ್ಯಗತಗೊಂಡಿಲ್ಲ.

ವಿದ್ಯುತ್ ಜಾಲಕ್ಕೆ ಸೇರ್ಪಡೆ:  ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆರಂಭವಾಗಿದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎಂಟನೇ ಘಟಕ (250 ಮೆಗಾವಾಟ್), ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 1 ಮತ್ತು 2ನೇ ಘಟಕ (1000 ಮೆಗಾವಾಟ್), ಖಾಸಗಿ ವಲಯದ ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 1,200 ಮೆಗಾವಾಟ್, ವಾರಾಹಿ 5 ಮತ್ತು 6ನೇ ಘಟಕದಿಂದ 230 ಮೆಗಾವಾಟ್ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಮೆಗಾವಾಟ್ ಸೇರಿದಂತೆ ಒಟ್ಟು 3,180 ಮೆಗಾವಾಟ್ ವಿದ್ಯುತ್ ಕಳೆದ ಐದು ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಜಾಲಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ.

ರಾಯಚೂರು ಶಾಖೋತ್ಪನ್ನ ಸ್ಥಾವರದ 8ನೇ ಘಟಕ, ಬಳ್ಳಾರಿಯ ಸ್ಥಾವರದ ಎರಡನೇ ಘಟಕ ಪದೇ ಪದೇ ಕೈಕೊಡುತ್ತಿದೆ. ಅಲ್ಲದೆ ಆರ್‌ಟಿಪಿ ಎಸ್‌ನ ಉಳಿದ ಘಟಕಗಳಲ್ಲಿ ಸಹ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಎಂಟೂ ಘಟಕಗಳಿಂದ ಒಟ್ಟು 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಬೇಕು. ಆದರೆ, ಉತ್ಪಾದನೆ ಪ್ರಮಾಣ 1,400 ಮೆಗಾವಾಟ್ ಮೀರುವುದು ಕಷ್ಟ.

ಛತ್ತೀಸ್‌ಗಡ ಯೋಜನೆ: 2008ರಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ ಕಾರಣ, ಎಚ್ಚೆತ್ತುಕೊಂಡ ಸರ್ಕಾರ  ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಹೇರಳವಾಗಿ ಕಲ್ಲಿದ್ದಲು ಲಭ್ಯವಿರುವ ಛತ್ತೀಸ್‌ಗಡದಲ್ಲಿ 1,600 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆ  ಕೈಗೆತ್ತಿಕೊಳ್ಳುವ ಸಂಬಂಧ 2008ರ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆಗ ಆರು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, 36 ತಿಂಗಳಲ್ಲಿ ವಿದ್ಯುತ್ ಉತ್ಪಾದನೆ ಶುರುವಾಗಲಿದೆ ಎಂದು ಸರ್ಕಾರ ಹೇಳಿತ್ತು.

ಆದರೆ, ಇದುವರೆಗೆ ಕಾಮಗಾರಿಯೇ ಆರಂಭವಾಗಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಕರ್ನಾಟಕ ವಿದ್ಯುತ್ ನಿಗಮ ಕಚೇರಿಯೊಂದನ್ನು ಆರಂಭಿಸಿ ಕೆಲ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಿದೆ. ಆಶ್ಚರ್ಯದ ಸಂಗತಿ ಎಂದರೆ ಇದುವರೆಗೆ ಕಲ್ಲಿದ್ದಲು ಹಂಚಿಕೆಯಾಗಿಲ್ಲ. ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಹೀಗಾಗಿ ಸದ್ಯಕ್ಕೆ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಗುಂಡ್ಯ ಜಲವಿದ್ಯುತ್ ಯೋಜನೆ, ಯರಮರಸ್, ಯದ್ಲಾಪುರ ಶಾಖೋತ್ಪನ್ನ ವಿದ್ಯುತ್ ಯೋಜನೆ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 3ನೇ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ, 1,600 ಮೆಗಾವಾಟ್ ಸಾಮರ್ಥ್ಯದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಯೋಜನೆ ಬಿಟ್ಟರೆ, ಉಳಿದ ಯೋಜನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಗುಂಡ್ಯ, ಯದ್ಲಾಪುರ, ಶಿವನಸಮುದ್ರ, ಜೇವರ್ಗಿ ಶಾಖೋತ್ಪನ್ನ ಯೋಜನೆಗಳಿಗೆ ಪರಿಸರ ಇಲಾಖೆಯ ಒಪ್ಪಿಗೆ ದೊರೆತಿಲ್ಲ. ಶಿವನಸಮುದ್ರ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ಸಿದ್ಧವಾಗಿಲ್ಲ. ಅಷ್ಟೇ ಅಲ್ಲದೆ ಈ ಯೋಜನೆಗೆ ತಮಿಳುನಾಡು ಸರ್ಕಾರದ ವಿರೋಧವೂ ವ್ಯಕ್ತವಾಗಿದೆ.

ತಮಿಳುನಾಡು ಸರ್ಕಾರ ಕುಡಿಯುವ ನೀರಿಗಾಗಿ ಹೊಗೇನಕಲ್ ಯೋಜನೆ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ  ವಿದ್ಯುತ್ ಯೋಜನೆ ಆರಂಭಿಸಲು ಆ ರಾಜ್ಯದೊಂದಿಗೆ ಮಾತುಕತೆ ನಡೆಸಲಿದೆ ಎಂದು ರಾಜ್ಯ ಸರ್ಕಾರ ಮೂರು ವರ್ಷಗಳ ಹಿಂದೆಯೇ ಹೇಳಿತ್ತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಗುಂಡ್ಯ ಯೋಜನೆಯಿಂದ ಅರಣ್ಯ ನಾಶವಾಗಲಿದೆ ಎಂದು ಸ್ಥಳೀಯರು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ, ಕೇಂದ್ರ ಸರ್ಕಾರ ರಚಿಸಿರುವ ಗಾಡ್ಗಿಳ್ ನೇತೃತ್ವದ ಸಮಿತಿ ಈಚೆಗೆ ಆ ಭಾಗಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಸಮಿತಿ ನೀಡುವ ವರದಿಯ ಮೇಲೆ ಈ ಯೋಜನೆಯ ಭವಿಷ್ಯ ನಿಂತಿದೆ.

ತದಡಿಯಲ್ಲಿ 2,100 ಮೆಗಾವಾಟ್ ಸಾಮರ್ಥ್ಯದ ಅನಿಲ ವಿದ್ಯುತ್ ಯೋಜನೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ, ಇದಕ್ಕೆ ಪರಿಸರವಾದಿಗಳ ವಿರೋಧ ಇರುವುದರಿಂದ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಶಾಖೋತ್ಪನ್ನ, ಜಲವಿದ್ಯುತ್ ಯೋಜನೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಡದಿಯ 700 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಯನ್ನು 2012ರ ವೇಳೆಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈ ಯೋಜನೆಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಈಚೆಗಷ್ಟೇ ಟೆಂಡರ್ ಪ್ರಕ್ರಿಯೆ ಮುಗಿದಿದೆ.

ಐದು ವರ್ಷಗಳ ಬೇಡಿಕೆ ಪ್ರಮಾಣ ಆಧರಿಸಿ ಹೊಸ ಯೋಜನೆಗಳನ್ನು ರೂಪಿಸಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಶಾಹಿಯ ವಿಳಂಬ ನೀತಿಯಿಂದಾಗಿ ಅನುಷ್ಠಾನದಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲ. ಐದು ವರ್ಷಗಳಿಂದ ಈಚೆಗೆ ಒಪ್ಪಂದ ಮಾಡಿಕೊಂಡಿರುವ ಹೊಸ ಯೋಜನೆಗಳು ಕಡತದಲ್ಲಿಯೇ ಉಳಿದಿವೆ. ಶಂಕುಸ್ಥಾಪನೆ ನೇರವೇರಿಸುವಾಗ ತೋರಿಸುವ ಉತ್ಸಾಹ ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವುದಿಲ್ಲ. ಪ್ರಗತಿಯಲ್ಲಿರುವ ಯೋಜನೆಗಳು ಕುಂಟುತ್ತಾ ಸಾಗಿವೆ. ಈಗಿನ ವೇಗವನ್ನು ಗಮನಿಸಿದರೆ ರಾಜ್ಯವನ್ನು ಆವರಿಸಿರುವ ಕತ್ತಲೆ ಬೇಗನೇ ದೂರವಾಗುವ ಲಕ್ಷಣಗಳು ಕಾಣುತ್ತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT