ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕೊರತೆ: ಲೋಡ್ ಶೆಡ್ಡಿಂಗ್ ಜಾರಿ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 1,500 ಮೆಗಾವಾಟ್ ವಿದ್ಯುತ್ ಕೊರತೆ ಇರುವುದರಿಂದ ಲೋಡ್‌ಶೆಡ್ಡಿಂಗ್ ಅನಿವಾರ್ಯ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ಹೇಳಿದರು.

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟ ಮುಷ್ಕರದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಸಿಂಗರೇಣಿಯಿಂದ ಪೂರೈಕೆಯಾಗುತ್ತಿದ್ದ ಕಲ್ಲಿದ್ದಲು ಪ್ರಮಾಣ ಕಡಿಮೆಯಾಗಿದೆ. ಮೂರು ರೇಕ್ ಬದಲು ಸದ್ಯ ಒಂದು ರೇಕ್ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎಂಟು ಘಟಕಗಳ ಪೈಕಿ ಐದು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಆರ್‌ಟಿಪಿಎಸ್‌ನಲ್ಲಿ 1.80 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದೆ. ಇದನ್ನು ಐದು ಘಟಕಗಳಿಗೆ 12 ದಿನಗಳ ಕಾಲ ಬಳಸಬಹುದಾಗಿದೆ. ಐದು ಘಟಕಗಳಿಗೆ ದಿನಕ್ಕೆ 15 ಸಾವಿರ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಶೇ 20ರಷ್ಟು ವಿದೇಶಿ ಕಲ್ಲಿದ್ದಲು ಮತ್ತು ಶೇ 80ರಷ್ಟು ಸ್ಥಳೀಯ ಕಲ್ಲಿದ್ದಲು ಬಳಸುವ ಹಾಗೆ ಟರ್ಬೈನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಆಂಧ್ರದಲ್ಲಿ ಗಣಿ ಕಾರ್ಮಿಕರ ಮುಷ್ಕರ ಮುಂದುವರೆದಿರುವವರೆಗೂ ಲೋಡ್ ಶೆಡ್ಡಿಂಗ್ ಅನಿವಾರ್ಯ. ಅನಿಯಮಿತ ವಿದ್ಯುತ್ ಕಡಿತದಿಂದ ಜನರಿಗೆ ತೊಂದರೆ ಆಗುತ್ತಿರುವುದು ನಿಜ. ದಿನಕ್ಕೆ ಎಷ್ಟು ಗಂಟೆ ಮತ್ತು ಯಾವ ವೇಳೆ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಜನರಿಗೆ ಮೊದಲೇ ತಿಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಖರೀದಿ: ಸದ್ಯಕ್ಕೆ 630 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ.ಇದಲ್ಲದೆ ಹೆಚ್ಚು ಬೇಡಿಕೆ ಇರುವ ಅವಧಿಯಲ್ಲಿ ಅಂದರೆ ಬೆಳಿಗ್ಗೆ 7ರಿಂದ 10 ಗಂಟೆ ಮತ್ತು ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ 300 ಮೆಗಾವಾಟ್ ವಿದ್ಯುತ್ ಖರೀದಿಸಲು ಟೆಂಡರ್ ಕರೆಯಲಾಗಿದ್ದು, ಅಕ್ಟೋಬರ್‌ನಿಂದ ಇದು ಲಭ್ಯವಾಗಲಿದೆ ಎಂದರು.

500 ಮೆಗಾವಾಟ್ ಸಾಮರ್ಥ್ಯದ ಬಳ್ಳಾರಿಯ ಎರಡನೇ ಘಟಕ ಮತ್ತು 600 ಮೆಗಾವಾಟ್ ಸಾಮರ್ಥ್ಯದ ಯುಪಿಸಿಎಲ್ ಎರಡನೇ ಘಟಕ ಬರುವ ಮಾರ್ಚ್ ವೇಳೆಗೆ ಉತ್ಪಾದನೆಯನ್ನು ಆರಂಭಿಸಲಿವೆ. ಇದಲ್ಲದೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 300 ಮೆಗಾವಾಟ್ ವಿದ್ಯುತ್ ಲಭ್ಯವಾಗಲಿದೆ. ಹೀಗಾಗಿ ಏಪ್ರಿಲ್ ನಂತರ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಎಂಜಿನಿಯರ್‌ಗಳ ನೇಮಕ: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ 292 ಎಂಜಿನಿಯರ್‌ಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದ್ದು, ಬಿ.ಇ., ಡಿಪ್ಲೊಮಾದ ಶೇ 50ರಷ್ಟು ಅಂಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಶೇ 50ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದರು.

ಒಟ್ಟು ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕಳೆದ ವರ್ಷ 300 ಹುದ್ದೆಗಳನ್ನು ತುಂಬಲಾಗಿದೆ. ಈಗ 292 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿದ ಹುದ್ದೆಗಳನ್ನು ಮುಂದಿನ ವರ್ಷ ತುಂಬಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT