ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕ್ಷಾಮ; ನೀರಿನ ಸಮಸ್ಯೆ ಉಲ್ಬಣ

Last Updated 3 ಅಕ್ಟೋಬರ್ 2011, 8:05 IST
ಅಕ್ಷರ ಗಾತ್ರ

ವಿಜಾಪುರ: ವಿದ್ಯುತ್ ಕ್ಷಾಮ ವಿಜಾಪುರ ನಗರದ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ನೀರು ಪೂರೈಕೆ ವ್ಯವಸ್ಥೆ ಅಯೋಮಯವಾಗಿದ್ದು, ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.
ವಿಜಾಪುರ ನಗರಸಭೆಯಿಂದ ನೀರು ಪೂರೈಕೆ ಹೊಣೆ ವಹಿಸಿಕೊಂಡ ನಂತರ ಜಲಮಂಡಳಿ ನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಿತ್ತು. ಬಹುತೇಕ ಪ್ರದೇಶಗಳಲ್ಲಿ 3ರಿಂದ 4 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ಹದಿನೈದು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದೆ.

ನಗರದ ಬಹುಪಾಲು ಬಡಾವಣೆಗಳಲ್ಲಿ, ಕೊಳಚೆ ಪ್ರದೇಶದಲ್ಲಿ ಜನ ನೀರು ನೀರು ಎಂದು ಪರಿತಪಿಸುತ್ತಿದ್ದರೂ ಜಲಮಂಡಳಿಯಾಗಲಿ, ನಗರಸಭೆಯವರಾಗಲಿ ಒಂದೇ ಒಂದು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿಲ್ಲ. ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಖಾಸಗಿ ಟ್ಯಾಂಕರ್‌ಗಳಿಗೆ ಬಲು ಬೇಡಿಕೆ ಬಂದಿದೆ. ಅಲ್ಲಲ್ಲಿ ಶಿಥಿಲಾವಸ್ಥೆಯಲ್ಲಿರುವ ಬೋರ್‌ವೆಲ್‌ಗೆ ಜನ ಮುಗಿಬಿದ್ದು ನೀರು ಪಡೆಯುತ್ತಿದ್ದಾರೆ.

`ವಿಜಾಪುರ ನಗರಕ್ಕೆ ನೀರು ಪೂರೈಸುವ ಕೊಲ್ಹಾರ ಜಾಕ್‌ವೆಲ್‌ಗೆ ಎಕ್ಸಪ್ರೆಸ್ ಲೈನ್ ಇದೆ. ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ನಿರಂತರ ನೀರು ಪೂರೈಸುತ್ತೇವೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೂ, ನೀರಿನ ಸಮಸ್ಯೆ ಏಕೆ ಉಲ್ಬಣಗೊಂಡಿದೆ~ ಎಂಬುದು ಜನಸಾಮಾನ್ಯರ ಪ್ರಶ್ನೆ.

`ಜಲಮಂಡಳಿಯವರು ನೀರು ಪೂರೈಕೆಯ ಅವಧಿಯನ್ನು ಕಡಿತಗೊಳಿಸಿದ್ದಾರೆ. ಒಂದರಿಂದ ಒಂದೂವರೆ ಗಂಟೆ ಮಾತ್ರ ನೀರು ಪೂರೈಸುತ್ತಾರೆ. ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತಿದ್ದ ಸಾರ್ವಜನಿಕ ನಲ್ಲಿಗಳನ್ನು ಬಂದ್ ಮಾಡಿದ್ದಾರೆ. ಕೈಪಂಪ್‌ಗಳು ಹಾಗೂ ಕಿರು ನೀರು ಪೂರೈಕೆ ಯೋಜನೆಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದ್ದಾರೆ.

ಇದು ಸಮಸ್ಯೆಯ ಮೂಲ~ ಎಂದು ನಗರಸಭೆಯ ಕೆಲ ಸದಸ್ಯರು ಆರೋಪಿಸುತ್ತಿದ್ದಾರೆ.`ಕೊಲ್ಹಾರ ಜಾಕ್‌ವೆಲ್‌ಗೆ ಜನರೇಟರ್ ಖರೀದಿಯ ಮಾತು ಪ್ರತಿ ವರ್ಷದ ಬೇಸಿಗೆಯಲ್ಲಿ ಕೇಳಿ ಬಂದರೂ ಅದು ಕಾರ್ಯಗತಗೊಂಡಿಲ್ಲ. ಭೂತನಾಳ ಕೆರೆಯ ಪಂಪ್‌ಹೌಸ್‌ನಲ್ಲಿ ಇರುವ ಜನರೇಟರ್‌ನ್ನು ರಿಪೇರಿ ಮಾಡಿಲ್ಲ~ ಎಂದು ಅವರು ದೂರುತ್ತಿದ್ದಾರೆ.

`ಬಿಟ್ಟ ನೀರೂ ಸಹ ನಲ್ಲಿ ಬಿಟ್ಟು ಹೊರಬರುವುದೇ ಇಲ್ಲ. ನಲ್ಲಿಗೇ ನೇರವಾಗಿ ವಿದ್ಯುತ್ ಮೋಟಾರ್ ಅಳವಡಿಸಿ ನೀರು ಪಡೆಯಬೇಕು. ವಿಜಾಪುರದಲ್ಲಿ ಇದು ಅನಿವಾರ್ಯವೂ ಆಗಿದೆ. ನೀರು ಬಿಟ್ಟಾಗ ವಿದ್ಯುತ್ ಕೈಕೊಟ್ಟಿರುತ್ತದೆ. ವಿದ್ಯುತ್ ಇದ್ದಾಗ ನೀರು ಬಿಡುವುದಿಲ್ಲ. ಹೀಗಾಗಿ ಈಗ ನಾಲ್ಕು ಕೊಡ ಸಹ ನೀರು ಬರುತ್ತಿಲ್ಲ~ ಎಂಬುದು ಗೃಹಿಣಿಯರ ಗೋಳು.

`ವಿದ್ಯುತ್ ಸಮಸ್ಯೆ ಹೆಚ್ಚಾಗಿರುವುದೇ ನೀರಿನ ಸಮಸ್ಯೆಗೆ ಕಾರಣ. ನಗರಕ್ಕೆ ನಿತ್ಯ 39 ಎಂಎಲ್‌ಡಿ ನೀರು ಬೇಕು. ಈಗ 3ರಿಂದ 4 ಎಂಎಲ್‌ಡಿಯಷ್ಟು ಕಡಿಮೆ ನೀರು ಬರುತ್ತಿದೆ. ಕೊಲ್ಹಾರದ ಜಾಕ್‌ವೆಲ್‌ಗೆ ನಿತ್ಯ ಸರಾಸರಿ ಮೂರು ಗಂಟೆ ವಿದ್ಯುತ್ ಕಡಿತವಾಗುತ್ತಿದ್ದು, ವಿಜಾಪುರದ ಜಲನಗರ ಹಾಗೂ ಕೆಎಸ್‌ಆರ್‌ಟಿಸಿ ಪಂಪ್‌ಹೌಸ್, ಭೂತನಾಳ ಕೆರೆಯ ಪಂಪ್‌ಹೌಸ್‌ಗಳಲ್ಲಿ 8ರಿಂದ 10 ಗಂಟೆಗಳ ಕಾಲ ವಿದ್ಯುತ್ ಕೈಕೊಡುತ್ತಿದೆ~ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನಮೂರ್ತಿ ಹೇಳುತ್ತಾರೆ.

`ಭೂತನಾಳ ಕೆರೆಯ ಜನರೇಟರ್ ರಿಪೇರಿ ಮಾಡಿಸುತ್ತಿದ್ದೇವೆ. ವಿಜಾಪುರ ನಗರದ ಪಂಪ್‌ಹೌಸ್‌ಗಳಿಗೂ ಎಕ್ಸಪ್ರೆಸ್ ಲೈನ್ ಹಾಕಿಸಲು ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಸದ್ಯ ವಿದ್ಯುತ್ ಸಮಸ್ಯೆ ನಿವಾರಣೆಯಾದರೆ ನೀರು ಪೂರೈಕೆ ವ್ಯವಸ್ಥೆಯೂ ಸರಿಹೋಗಲಿದೆ~ ಎನ್ನುತ್ತಾರೆ ಅವರು.

`ಜಲಮಂಡಳಿಯ ಬಳಿ ಒಂದೇ ಒಂದು ಟ್ಯಾಂಕರ್ ಇಲ್ಲ. ತಮ್ಮ ಬಳಿ ಇದ್ದ ಟ್ಯಾಂಕರ್ ನೀಡುವುದಾಗಿ ಹೇಳಿದ್ದ ನಗರಸಭೆಯವರು ಅದನ್ನು ಕೊಟ್ಟಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೂ ನೀರು ಪೂರೈಸಲು ನಮ್ಮಲ್ಲಿ ಟ್ಯಾಂಕರ್ ಇಲ್ಲ.

ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುತ್ತಿದ್ದೇವೆ. ಪ್ರಕೃತಿ ವಿಕೋಪ ನಿಧಿಯಲ್ಲಿ ಟ್ಯಾಂಕರ್ ಖರೀದಿಗೆ ಚಿಂತನೆ ನಡೆಸಿದ್ದೇವೆ~ ಎಂದು ಅವರು ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT