ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಗ್ರಾಹಕರಿಗೆ ಮೆಸ್ಕಾಂ ಕಿರಿಕಿರಿ

Last Updated 26 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

ಬೀರೂರು: ಮೆಸ್ಕಾಂ ಹಮ್ಮಿಕೊಂಡಿರುವ ವಿದ್ಯುತ್ ಮೀಟರ್ ಬದಲಾವಣೆ ಕಾರ್ಯಕ್ರಮದಿಂದ ಗ್ರಾಹಕರು ಪರಿತಪಿಸುವಂತಾಗಿದೆ.ಮೆಸ್ಕಾಂ ತನ್ನ ವ್ಯಾಪ್ತಿಯ ಎಲ್ಲ ಊರು ಮತ್ತು ಗ್ರಾಮಗಳಲ್ಲಿ ಹಳೆಯ ವಿದ್ಯುತ್ ಮೀಟರ್ ತೆಗೆದು ಹೊಸ ಎಲೆಕ್ಟ್ರಾನಿಕ್ ವಿದ್ಯುತ್ ಮೀಟರ್ ಅಳವಡಿಸುತ್ತಿದೆ. ಯಾರಾದರೂ ಕಾರಣ ಕೇಳಿದರೆ ಕೇಂದ್ರ ಸರ್ಕಾರದ ಆದೇಶ ಮತ್ತು ವಿದ್ಯುತ್ ಸೋರಿಕೆ ತಡೆಗಟ್ಟಲು ಈ ಕಾರ್ಯಕ್ರಮ ನಡೆಯುತ್ತಿದೆ ಎನ್ನುತ್ತಾರೆ.

ಖಾಸಗಿ ವಿದ್ಯುತ್ ಮೀಟರ್ ತಯಾರಿಕಾ ಕಂಪೆನಿಯೊಂದಿಗೆ ಒಡಂಬಡಿಕೆ ಹೊಂದಿರುವ ಮೆಸ್ಕಾಂ ಈ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೂ ಅವ್ಯಾಹತವಾಗಿ ಎಲೆಕ್ಟ್ರಾನಿಕ್ ಮೀಟರ್ ಅಳವಡಿಕೆ ನಡೆದಿದೆ. ಇವರು ಮೊದಲು ಪುಕ್ಕಟೆಯಾಗಿ ಹೊಸ ಮೀಟರ್ ಅಳವಡಿಸುವ ರೀತಿಯಲ್ಲಿ ವರ್ತಿಸುತ್ತಾರೆ. ಮತ್ತು ಮೊದಲು ಯಾವುದೇ ಶುಲ್ಕ ವಸೂಲು ಮಾಡುವುದಿಲ್ಲ. ಆದರೆ ಒಂದು ಅಥವಾ ಎರಡು ತಿಂಗಳ ನಂತರ ರೂ 1190ಅನ್ನು ಮೀಟರ್ ಡೆಪಾಸಿಟ್ ಆಗಿ ಪಾವತಿಸುವಂತೆ ಬಿಲ್ ಬರುತ್ತದೆ.

ಈ ಕುರಿತು ಜನಸಾಮಾನ್ಯರು ವಿಚಾರಿಸಲು ಹೋದರೆ ಈ ಠೇವಣಿಯನ್ನು ಪಾವತಿಸಿದರೆ ಮಾತ್ರ ನಿಮ್ಮ ವಿದ್ಯುತ್ ಬಿಲ್ ಸ್ವೀಕರಿಸಲಾಗುವುದು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಮಾಹಿತಿ ಅಧಿಕಾರಿಗಳಿಂದ ಕೇಳಿ ಬರುತ್ತದೆ. ಹೆಚ್ಚು ಪ್ರಶ್ನಿಸಿದರೆ ಎರಡು ತಿಂಗಳ ಅವಧಿಯಲ್ಲಿ ಪಾವತಿಸುವುದಾಗಿ ಬರೆದುಕೊಡಿ ಎಂದು ಕೇಳಲಾಗುತ್ತಿದೆ.ಸಾವಿರಾರು ಗ್ರಾಹಕರು ಈಗಾಗಲೇ ಈ ಕಿರಿಕಿರಿಗೆ ಸಿಲುಕಿ ಹಣ ಪಾವತಿಸಿದ್ದಾರೆ. ಆದರೆ ತಿಂಗಳ ವಿದ್ಯುತ್‌ಬಿಲ್ ಪಾವತಿಸಲೂ ಕಷ್ಟ ಪಡುವ ಬಡ ಗ್ರಾಹಕ ಇಷ್ಟು ಹಣ ಹೊಂದಿಸುವುದು ಹೇಗೆ ಸಾಧ್ಯ?.

ವಿದ್ಯುತ್ ಮೀಟರ್ ಬದಲಾವಣೆಗೂ ಒಂದು ನಡವಳಿಕೆ ಇದೆ ಎನ್ನುತ್ತಾರೆ ತಜ್ಞರು. ಮೀಟರ್ ಹಾಳಾಗಿದೆ ಎಂದು ಕಂಡುಬಂದಲ್ಲಿ ಮೊದಲು ವಿದ್ಯುತ್ ಇಲಾಖೆಯ ಅಧೀಕ್ಷಕ ಪರಿಶೀಲನೆ ನಡೆಸಿ ಈ ಮೀಟರ್ ಹಾಳಾಗಿದೆ,ಇದನ್ನು ಬದಲಿಸಬೇಕು ಎಂಬ ಪ್ರಮಾಣಪತ್ರ ನೀಡಬೇಕು,ನಂತರ ಮೀಟರ್ ಬದಲಿಸಬಹುದು. ಆದರೆ ಮೆಸ್ಕಾಂ ಸಾರಾಸಗಟಾಗಿ ವಿದ್ಯು–ತ್ ಮೀಟರ್‌ಗಳ ಬದಲಾವಣೆಯಲ್ಲಿ ತೊಡಗಿದೆ.

ಇನ್ನೂ ಒಂದು ಮಾತಿದೆ,ಗ್ರಾಹಕ ಬಳಕೆಗೆ ಎಲೆಕ್ಟ್ರಾನಿಕ್ ಮೀಟರ್ ಅಳವಡಿಸುವ ಅವಶ್ಯಕತೆ ಇಲ್ಲ,ಏಕೆಂದರೆ ಸಾಮಾನ್ಯವಾಗಿ ಇಲ್ಲಿ ಸಂಭವಿಸಬಹುದಾದ ವಿದ್ಯುತ್ ನಷ್ಟ ಅಥವಾ ಕಳ್ಳತನ ನಗಣ್ಯ,ಕೈಗಾರಿಕೆಗಳು ಅಥವಾ ವಾಣಿಜ್ಯ ಉಪಯೋಗಕ್ಕೆ ಬಳಸಬಹುದಾದ ಸಂಪರ್ಕಗಳಲ್ಲಿ ಮೀಟರ್ ಬದಲಾವಣೆ ಕಡ್ಡಾಯವಾಗಿ ಮಾಡಬಹುದು,ಇದರಿಂದ ಕಳ್ಳತನ ಅಥವಾ ವಿದ್ಯುತ್ ನಷ್ಟ ತಡೆಗಟ್ಟಬಹುದಾಗಿದೆ.

ವಿದ್ಯುತ್ ಮೀಟರ್ ಬದಲಾವಣೆ ಕಡ್ಡಾಯವೇ? ಹಳೆಯ ಮೀಟರ್ ಸುಸ್ಥಿತಿಯಲ್ಲಿದ್ದರೂ ಬದಲಾವಣೆ ಅವಶ್ಯವೇ?ಹಳೆಯ ಮೀಟರ್‌ಗೆ ಗ್ರಾಹಕ ಪಾವತಿಸಿದ್ದ ಠೇವಣಿ ಏನಾಯಿತು? ನೀವು ಕಿತ್ತುಕೊಂಡು ಹೋದ ಹಳೆಯ ಮೀಟರ್‌ಗಳು ಏನಾದವು? ಅವೇ ಮೀಟರ್‌ಗಳು ಹೊಸರೂಪ ತಳೆದು ಬರುತ್ತಿವೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಿದೆ. ಒಟ್ಟಿನಲ್ಲಿ ಅಧಿಕಾರಿಗಳ ನಡವಳಿಕೆಯಿಂದ ಬಡಗ್ರಾಹಕ ಕಷ್ಟಪಡುವಂತಾಗಿದೆ. ಈ ಬಗ್ಗೆ ಇನ್ನಾದರೂ ಅಧಿಕಾರಿಗಳು ಸ್ಪಷ್ಟನೆ ನೀಡಲಿ ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT