ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪರಿವರ್ತಕ ಅಳವಡಿಸಲು ಆಗ್ರಹ

Last Updated 19 ಡಿಸೆಂಬರ್ 2012, 6:23 IST
ಅಕ್ಷರ ಗಾತ್ರ

ನಾಗಮಂಗಲ: ರೈತರ ಪಂಪ್‌ಸೆಟ್‌ಗಳು ಹಾಗೂ ಕುಡಿಯುವ ನೀರು ಸರಬರಾಜಿಗೆ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ದೇವಲಾಪುರ ಹೋಬಳಿಯ ಕರಡಹಳ್ಳಿ ಗ್ರಾಮಸ್ಥರು ಮಂಗಳವಾರ ಪಟ್ಟಣದ ಸೆಸ್ಕ್ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕರಡಹಳ್ಳಿಯಲ್ಲಿ 100 ಕೆವಿ ಸಾಮರ್ಥ್ಯದ 1 ಟ್ರಾನ್ಸ್‌ಫಾರ್ಮರ್ ಇದೆ. ಇದರಿಂದ 200ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್, ಕುಡಿಯುವ ನೀರಿನ 2 ಪಂಪ್ ಸೇರಿದಂತೆ 35 ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. 3 ತಿಂಗಳಿಗೊಮ್ಮೆ ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಬರುತ್ತಿದೆ. ಗ್ರಾಮಸ್ಥರೇ ಎರಡು ಬಾರಿ ರೂ. 15 ಸಾವಿರ ವೆಚ್ಚ ಮಾಡಿ ದುರಸ್ತಿ ಮಾಡಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ಪ್ರತ್ಯೇಕ ವಿದ್ಯುತ್ ಪರಿವರ್ತಕ  ಅಳವಡಿಸುವಂತೆ ಕಳೆದ 3 ವರ್ಷಗಳಿಂದ ಮನವಿ ಸಲ್ಲಿಸಿದರೂ ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಟಿಸಿ ಸುಟ್ಟುಹೋದ ಸಂದರ್ಭದಲ್ಲಿ ಮಾತ್ರ ಅಂದಾಜು ಪಟ್ಟಿ ತಯಾರಿಸುತ್ತಾರೆ. ಇನ್ನೊಂದುವಾರದಲ್ಲಿ ಹೊಸ ಟಿಸಿ ಅಳವಡಿಸುವುದಾಗಿ ಹೇಳಿ ರೈತರಿಂದ ಹಣ ವಸೂಲಿ ಮಾಡುತ್ತಾರೆ. ವರ್ಷ ಕಳೆದರೂ ಸಮಸ್ಯೆ ಜಟಿಲವಾಗುವುದೇ ಹೊರತು ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ 600ಕ್ಕೂ ಹೆಚ್ಚು ಹಸುಗಳಿವೆ. 1 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ 100 ಕೆವಿ ಸಾಮರ್ಥ್ಯದ 1 ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿಲ್ಲ. ಕಳೆದ 5 ದಿನಗಳಿಂದ ಗ್ರಾಮದಲ್ಲಿ ಕಿಂಚಿತ್ತೂ ವಿದ್ಯುತ್ ಪೂರೈಕೆಯಾಗಿಲ್ಲ. ಜನ, ಜಾನುವಾರುಗಳಿಗೂ ಕುಡಿಸಲು ನೀರಿಲ್ಲ. ಇಲ್ಲಿನ ಅಧಿಕಾರಿಗಳು ಕೇವಲ ಲಂಚಕ್ಕಾಗಿ ಕೆಲಸ ಮಾಡುತ್ತಾರೆಂದು ಪ್ರತಿಭಟನಾಕಾರರು ದೂರಿದರು.

ಈ ವೇಳೆ ಯಾವುದೇ ಅಧಿಕಾರಿ ಕಚೇರಿಯಲ್ಲಿ ಇರಲಿಲ್ಲ. ಇದರಿಂದ ಉದ್ರಿಕ್ತಗೊಂಡ ರೈತರು ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕಚೇರಿ ಬಾಗಿಲಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಇಲಾಖೆಯ ಲೆಕ್ಕಾಧಿಕಾರಿ ಕೆ.ಕೆಂಚಯ್ಯ ಮೇಲಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಾಸ್ತವಾಂಶ ತಿಳಿಸಿ, 2 ದಿನಗಳಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ ಚಂದ್ರಶೇಖರ್, ಸದಸ್ಯ ಸಿಂಗಾರಿಗೌಡ, ಮಂಜುನಾಥ, ಮಹೇಶ, ಸುಜಯ್, ಮರೀಗೌಡ, ರಾಮಣ್ಣ, ಬಾಬು, ವೆಂಕಟೇಶ, ಶಿವು, ಈರಣ್ಣ, ಅಜಯ್ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT