ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

Last Updated 22 ಅಕ್ಟೋಬರ್ 2011, 5:35 IST
ಅಕ್ಷರ ಗಾತ್ರ

ದಾವಣಗೆರೆ: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮಾತನಾಡಿ, ರಾಜ್ಯದಲ್ಲಿ ಮೂರೂವರೆ ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಜೈಲು ಪಾಲಾಗಿದ್ದಾರೆ. ಹರತಾಳು ಹಾಲಪ್ಪ, ರಾಮಚಂದ್ರಗೌಡ ಅಪರಾಧ ಮಾಡಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
 
ಉಳಿದ ಸಚಿವರೂ ದಿನ ಕಳೆದಂತೆ ಒಬ್ಬೊಬ್ಬರಾಗಿ ಜೈಲು ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಕ್ಕೆ ಬರುವಾಗ 24 ಗಂಟೆ ವಿದ್ಯುತ್ ನೀಡುತ್ತೇವೆ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರ ದಿನದ ಕೆಲವು ಗಂಟೆ ವಿದ್ಯುತ್ ನೀಡಲೂ ವಿಫಲವಾಗಿದೆ. ರೈತರಿಗೆ ನೀಡಿದ ಭರವಸೆ ಈಡೇರಿಸಲು ಸಂಪೂರ್ಣ ಸೋತಿದೆ ಎಂದು ದೂರಿದರು.

್ಙ 2ಕ್ಕೆ ಅಕ್ಕಿ ನೀಡುವ, ನಿರುದ್ಯೋಗ ಭತ್ಯೆ ನೀಡುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ರಾಜ್ಯದ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಇಂತಹ ಅಸಮರ್ಥ ಸರ್ಕಾರದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಮುಂಭಾಗದಿಂದ ಪಂಜಿನ ಮೆರವಣಿಗೆ ಹೊರಟು ಪಿಬಿ ರಸ್ತೆಯಲ್ಲಿ ಸಾಗಿದ ನಂತರ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ಅಲ್ತಾಫ್, ಗಿರೀಶ್, ಮುಖಂಡರಾದ ಅಯೂಬ್ ಪೈಲ್ವಾನ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ, ನಲ್ಲೂರು ರಾಘವೇಂದ್ರ, ಬಾಬು, ವಿನಾಯಕ ಪೈಲ್ವಾನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT